ADVERTISEMENT

ಮೈಸೂರು ಜಿಲ್ಲೆಯಲ್ಲಿ ಜೋರು ಮಳೆ: ಅಲ್ಲಲ್ಲಿ ಬೆಳೆ ಹಾನಿ

ತಗ್ಗು ಪ್ರದೇಶಕ್ಕೆ ನೀರು ನುಗ್ಗಿ ಬೆಳೆ ನಾಶ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2025, 4:16 IST
Last Updated 11 ಅಕ್ಟೋಬರ್ 2025, 4:16 IST
ಹುಣಸೂರು ತಾಲ್ಲೂಕಿನಲ್ಲಿ ಅಹೋರಾತ್ರಿ ಸುರಿದ ಮಳೆಗೆ ತಗ್ಗು ಪ್ರದೇಶದಲ್ಲಿ ಕೆರೆ ನೀರು ಹರಿದು ಗದ್ದೆ ಜಲಾವೃತಗೊಂಡಿರುವುದು
ಹುಣಸೂರು ತಾಲ್ಲೂಕಿನಲ್ಲಿ ಅಹೋರಾತ್ರಿ ಸುರಿದ ಮಳೆಗೆ ತಗ್ಗು ಪ್ರದೇಶದಲ್ಲಿ ಕೆರೆ ನೀರು ಹರಿದು ಗದ್ದೆ ಜಲಾವೃತಗೊಂಡಿರುವುದು   

ಮೈಸೂರು: ಜಿಲ್ಲೆಯಲ್ಲಿ ಗುರುವಾರ ರಾತ್ರಿ ಆರಂಭವಾದ ಮಳೆಯು ಶುಕ್ರವಾರ ಮುಂಜಾನೆಯವರೆಗೂ ಎಡೆಬಿಡದೆ ಸುರಿಯಿತು.

ಗುರುವಾರ ಬೆಳಿಗ್ಗೆ ಕೆಲಕಾಲ ಜೋರು ಮಳೆಯಾಯಿತು. ನಂತರ ಉರಿಬಿಸಿಲು ಇತ್ತು. ರಾತ್ರಿ 9ರ ನಂತರ ಮತ್ತೆ ಗುಡುಗು, ಸಿಡಿಲಿನೊಂದಿಗೆ ಮಳೆ ಸುರಿಯಿತು. ದಿಢೀರ್‌ ಮಳೆಯಿಂದಾಗಿ ಜನರು ಪರದಾಡಿದರು.

ಚರಂಡಿಗಳಲ್ಲಿ ನೀರು ತುಂಬಿ ರಸ್ತೆಯಲ್ಲಿ ನೀರು ನಿಂತಿತ್ತು. ನಗರದ ಸಯ್ಯಾಜಿರಾವ್‌ ರಸ್ತೆ, ಹುಣಸೂರು ರಸ್ತೆ, ರಾಮಾನುಜ ರಸ್ತೆ, ವಾಣಿವಿಲಾಸ ರಸ್ತೆ, ಜೆಎಲ್‌ಬಿ ರಸ್ತೆ ಹೊಳೆಯಂತಾಗಿದ್ದವು. ಕೆಲವೆಡೆ ಒಳಚರಂಡಿಗೆ ಮಳೆ ನೀರು ಸೇರಿದ್ದರಿಂದ ಮ್ಯಾನ್‌ಹೋಲ್‌ ಮುಚ್ಚಳದ ಬಾಯಿ ತೆರೆದು ನೀರು ಉಕ್ಕಿ ಹರಿಯಿತು.‌‌

ADVERTISEMENT

ತಿಲಕ್‌ನಗರ, ಬನ್ನಿಮಂಟಪ, ಸಿದ್ದಲಿಂಗಪುರ, ರಾಘವೇಂದ್ರ ನಗರ, ಸಿದ್ಧಾರ್ಥ ನಗರ, ಜೆ.ಪಿ.ನಗರ, ಕುವೆಂಪುನಗರ, ಸರಸ್ವತಿಪುರಂ, ಟಿ.ಕೆ.ಬಡಾವಣೆ, ವಿಜಯನಗರ, ಕೆ.ಆರ್.ಮೊಹಲ್ಲಾ, ಚಾಮರಾಜ ಮೊಹಲ್ಲಾ ಕೆ.ಆರ್‌.ವೃತ್ತ, ಅಶೋಕಪುರಂ, ವಿದ್ಯಾರಣ್ಯಪುರಂ, ಜೆ.ಪಿ.ನಗರದ ಅಕ್ಕಮಹಾದೇವಿ ರಸ್ತೆ, ಅಶೋಕಪುರಂನ ಅಂಬೇಡ್ಕರ್‌ ರಸ್ತೆ, ಪಡುವಾರಹಳ್ಳಿ ಹಾಗೂ ಹೊರವಲಯದಲ್ಲಿ ಜೋರು ಮಳೆ ಸುರಿಯಿತು.

ಜಯಪುರ ಹೋಬಳಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಗುರುವಾರ ರಾತ್ರಿ ಜೋರು ಮಳೆ ಸುರಿಯಿತು. ಕೆರೆ, ಕಟ್ಟೆಗಳು ಭರ್ತಿಯಾದವು. ಮಳೆಯಿಂದ ರಾಗಿ, ತೊಗರಿ, ಅವರೆ, ಹುರುಳಿ ಮತ್ತು ತರಕಾರಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಅನುಕೂಲವಾಗಿದೆ ಎಂದು ರೈತರು ಸಂತಸಪಟ್ಟರು.

ಹುಣಸೂರು ತಾಲ್ಲೂಕಿನಲ್ಲಿ ಅಹೋರಾತ್ರಿ ಸುರಿದ ಮಳೆಗೆ ತಗ್ಗು ಪ್ರದೇಶದಲ್ಲಿ ಕೆರೆ ನೀರು ಹರಿದು ಗದ್ದೆ, ರಾಗಿ, ಮುಸುಕಿನ ಜೋಳ ಬೆಳೆ ಜಲಾವೃತಗೊಂಡಿತು. ಗಾವಡಗೆರೆ ಹೋಬಳಿ ಭಾಗದ ಹೊಡಿಜೆ ಕಟ್ಟೆ, ಮೋದೂರು ಕೆರೆ, ನಾಗನಹಳ್ಳಿ ಕೆರೆ ಮತ್ತು ಹಿರಿಕದಯಾತನಗಳ್ಳಿ ಭಾಗದಲ್ಲಿ ಅಂದಾಜು‌ 50 ಎಕರೆಯಷ್ಟು ಬತ್ತದ ಗದ್ದೆ ಕೊಚ್ಚಿಹೋಗಿದೆ. ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಭೇಟಿ ನೀಡಿ ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.