ADVERTISEMENT

ಪಾರಂಪರಿಕ ಮಾತ್ರವಲ್ಲ, ಐತಿಹಾಸಿಕ ನಗರ: ಗವಿಸಿದ್ದಯ್ಯ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2025, 4:09 IST
Last Updated 27 ಅಕ್ಟೋಬರ್ 2025, 4:09 IST
ಮೈಸೂರಿನ ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಈಚನೂರು ಕುಮಾರ್ ಅವರ 50 ವರ್ಷಗಳ ಅಕ್ಷರಯಾನ ನೆನಪಿನಲ್ಲಿ ‘ಭವ್ಯ ಚಿತ್ರಪಟ ಮೈಸೂರು’ ಕೃತಿಯನ್ನು ಗವಿಸಿದ್ದಯ್ಯ ಬಿಡುಗಡೆಗೊಳಿಸಿದರು. ಪತ್ರಕರ್ತರಾದ ಅಜಿತ್, ಕೆ.ದೀಪಕ್, ಜಿ.ಸತ್ಯನಾರಾಯಣ ಪಾಲ್ಗೊಂಡಿದ್ದರು
ಮೈಸೂರಿನ ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಈಚನೂರು ಕುಮಾರ್ ಅವರ 50 ವರ್ಷಗಳ ಅಕ್ಷರಯಾನ ನೆನಪಿನಲ್ಲಿ ‘ಭವ್ಯ ಚಿತ್ರಪಟ ಮೈಸೂರು’ ಕೃತಿಯನ್ನು ಗವಿಸಿದ್ದಯ್ಯ ಬಿಡುಗಡೆಗೊಳಿಸಿದರು. ಪತ್ರಕರ್ತರಾದ ಅಜಿತ್, ಕೆ.ದೀಪಕ್, ಜಿ.ಸತ್ಯನಾರಾಯಣ ಪಾಲ್ಗೊಂಡಿದ್ದರು   

ಮೈಸೂರು: ‘ಮೈಸೂರು ಪಾರಂಪರಿಕ ನಗರ ಮಾತ್ರವಲ್ಲ, ಐತಿಹಾಸಿಕ ನಗರವೂ ಹೌದು’ ಎಂದು ರಾಜ್ಯ ಪತ್ರಾಗಾರ ಇಲಾಖೆಯ ನಿರ್ದೇಶಕ ಗವಿಸಿದ್ದಯ್ಯ ಹೇಳಿದರು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಜಿಲ್ಲಾ ಪತ್ರಕರ್ತರ ಸಂಘ ಹಾಗೂ ವಿಜಯಲಕ್ಷ್ಮಿ ಪ್ರಕಾಶನ ಸಹಯೋಗದಲ್ಲಿ ನಡೆದ ಸಮಾರಂಭದಲ್ಲಿ ಪತ್ರಕರ್ತ, ದಿವಂಗತ ಈಚನೂರು ಕುಮಾರ್ ಅವರ 50 ವರ್ಷಗಳ ಅಕ್ಷರಯಾನ ನೆನಪಿನಲ್ಲಿ ‘ಭವ್ಯ ಚಿತ್ರಪಟ ಮೈಸೂರು’ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಮೈಸೂರಿನ ಹಲವಾರು ಪಾರಂಪರಿಕ ಕಟ್ಟಡ ನಶಿಸುತ್ತಿವೆ. ಹೀಗಾಗಿ ಮೈಸೂರನ್ನು ಈಗಿನಂತೆಯೇ ಉಳಿಸಿಕೊಳ್ಳಬೇಕಾದ ಅಗತ್ಯವಿದೆ’ ಎಂದರು. 

ADVERTISEMENT

‘ಈಚನೂರು ಕುಮಾರ್‌ ಅವರಿಗೆ ಮೈಸೂರಿನ ಬಗ್ಗೆ ವಿಶೇಷ ಪ್ರೀತಿ ಇತ್ತು. ಹೀಗಾಗಿಯೇ ಪತ್ರಾಗಾರ ಇಲಾಖೆಯನ್ನು ಸಮರ್ಥವಾಗಿ ಬಳಸಿಕೊಂಡು ಮೈಸೂರಿನ ಬಗ್ಗೆ ಹಲವಾರು ಉಪಯುಕ್ತ ಲೇಖನ ಬರೆಯುತ್ತಿದ್ದರು. ಯಾವೊಬ್ಬ ಇತಿಹಾಸ ಸಂಶೋಧನಾ ವಿದ್ಯಾರ್ಥಿಗೂ ಕಡಿಮೆ ಇಲ್ಲದಂತೆ ಅವರು ಅಧ್ಯಯನ ಮಾಡುತ್ತಿದ್ದರು. ಸರಳ ಜೀವಿಯೂ ಆಗಿದ್ದರು. ಅರಮನೆಗೆ ಸಂಬಂಧಿಸಿದ ಪ್ರತಿಯೊಂದೂ ಮಾಹಿತಿಯನ್ನೂ ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಿದ್ದರು’ ಎಂದು ಸ್ಮರಿಸಿದರು.

‘ಮೈಸೂರು ಹಾಗೂ ಪತ್ರಾಗಾರ ಇಲಾಖೆ ನಡುವೆ ಅವಿನಾಭಾವ ಸಂಬಂಧವಿದೆ. ಅರಮನೆಗೆ ಸಂಬಂಧಿಸಿದ ಸಾಕಷ್ಟು ದಾಖಲೆಗಳು ಇಲ್ಲಿವೆ’ ಎಂದು ತಿಳಿಸಿದರು.

ಪತ್ರಕರ್ತ ಜಿ.ಸತ್ಯನಾರಾಯಣ ಮಾತನಾಡಿ, ಮೈಸೂರು ಸುತ್ತಮುತ್ತಲೂ ಇತಿಹಾಸದ ಕುರುಹು ಹೊಂದಿರುವ ಅನೇಕ ಜಾಗಗಳಿವೆ. ಅವುಗಳ ಬಗೆಗೂ ಹೆಚ್ಚಿನ ಗಮನ ಅಗತ್ಯವಾಗಿದೆ’ ಎಂದರು.

‘ಬೇರೆ ರಾಷ್ಟ್ರಗಳ ಬಗ್ಗೆ ಮಾತನಾಡುವುದಲ್ಲ, ಮೊದಲಿಗೆ ನಮ್ಮ ಬೇರು ಇರುವ ಮೈಸೂರಿನ ಬಗ್ಗೆ ತಿಳಿದುಕೊಳ್ಳಬೇಕು. ಇಲ್ಲಿನ ಇತಿಹಾಸ ಅಧ್ಯಯನ ಮಾಡಿ ಹೊರ ತೆಗೆಯಬೇಕಾಗಿದೆ. ಈ ನಿಟ್ಟಿನಲ್ಲಿ ಈಚನೂರು ಕುಮಾರ್ ಹೆಚ್ಚಿನ ಕೆಲಸ ಮಾಡಿದ್ದಾರೆ’ ಎಂದು ತಿಳಿಸಿದರು.

ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ, ಈಚನೂರು ಕುಮಾರ್ ಅವರ ಪುತ್ರ ಅಜಿತ್, ಪುತ್ರಿ ಅಕ್ಷರಾ ಪಾಲ್ಗೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.