ಮೈಸೂರು: ರೇಷನ್ ಈಸ್ ತಂಡವು ಮೈಸೂರು–ಕೊಡಗು ಸಂಸದರ ಕಚೇರಿಯಿಂದ ಆಯೋಜಿಸಿದ್ದ ‘ಮೈ ಮೈಸೂರು ಐಡಿಯಾಥಾನ್’ನಲ್ಲಿ ಪ್ರಥಮ ಸ್ಥಾನ ಗಳಿಸಿತು.
ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯನ್ನು ತಂತ್ರಜ್ಞಾನದೊಂದಿಗೆ ಹೆಚ್ಚು ದಕ್ಷವಾಗಿ ಹಾಗೂ ಸುಲಭವಾಗಿ ವಿತರಿಸುವ ಪರಿಕಲ್ಪನೆಯನ್ನು ಪ್ರಸ್ತುತಪಡಿಸಿದ ಈ ತಂಡವನ್ನು ವಿಜೇತರನ್ನಾಗಿ ಆಯ್ಕೆ ಮಾಡಲಾಯಿತು (₹25ಸಾವಿರ). ಪ್ರವಾಸೋದ್ಯಮದ ಅಭಿವೃದ್ಧಿಯ ಸರಳ ಮತ್ತು ನವೀನ ಪರಿಕಲ್ಪನೆ ಪ್ರಸ್ತುತಪಡಿಸಿದ ‘ಚಾಮುಂಡಿ ಕೋಡರ್ಸ್’ ತಂಡವನ್ನು ಪ್ರಥಮ ರನ್ನರ್ ಅಪ್ (₹ 18ಸಾವಿರ) ಹಾಗೂ ತ್ಯಾಜ್ಯ ನಿರ್ವಹಣೆ ಬಗ್ಗೆ ತಮ್ಮ ಆಲೋಚನೆ ಮಂಡಿಸಿದ ‘ಇಕೊ ಸ್ಮಾರ್ಟ್ ಇನ್ನೋವೇಟರ್ಸ್’ 2ನೇ ರನ್ನರ್ ಅಪ್ (₹ 12ಸಾವಿರ) ಆಯಿತು.
ಮೈಸೂರು–2030ರ ರಚನಾತ್ಮಕ ನಿರ್ಮಾಣದ ಪರಿಕಲ್ಪನೆಯ ಉದ್ದೇಶದಿಂದ ಈ ಹ್ಯಾಕಥಾನ್ ನಡೆಸಲಾಯಿತು. ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು. ಅವರ ಪರಿಕಲ್ಪನೆಯಂತೆ ಮೈಸೂರು ನಗರವನ್ನು 2030ರ ವೇಳೆಗೆ ಸ್ವಚ್ಛ, ಸುಂದರ, ಹಸಿರು ಹಾಗೂ ರಚನಾತ್ಮಕವಾಗಿ ಅಭಿವೃದ್ಧಿಪಡಿಸುವ ಉದ್ದೇಶದ ಭಾಗವಾಗಿ ಕಾರ್ಯಕ್ರಮ ನಡೆಸಲಾಯಿತು.
ಪರಿಸರ ಸಂರಕ್ಷಣೆ, ಸಂಚಾರ ದಟ್ಟಣೆ ನಿವಾರಣೆ, ಪರಂಪರೆ, ಆರೋಗ್ಯ, ಆಡಳಿತ, ಗ್ರಾಮೀಣ- ನಗರ ಏಕೀಕರಣ ಹಾಗೂ ಇತರ ಒಂಬತ್ತು ಅಂಶಗಳ ಕುರಿತು ಆಲೋಚನೆ ಸಲ್ಲಿಸಲು ಅವಕಾಶ ನೀಡಲಾಗಿತ್ತು. ನಾಗರಿಕರು, ವಿದ್ಯಾರ್ಥಿಗಳು ಹಾಗೂ ವೃತ್ತಿಪರದಿಂದ 2,500ಕ್ಕೂ ಹೆಚ್ಚು ಐಡಿಯಾಗಳು ಸಲ್ಲಿಕೆಯಾಗಿದ್ದವು. ಇವುಗಳನ್ನು ಸಂಸದರ ಅಧ್ಯಕ್ಷತೆಯ ವಿಷಯ ಪರಿಣಿತರ ತಂಡ ಪರಿಶೀಲಿಸಿ ಅಂತಿಮ ಹಂತಕ್ಕೆ 10 ತಂಡಗಳನ್ನು ಆಯ್ಕೆ ಮಾಡಲಾಗಿತ್ತು. ವಿಜೇತರಿಗೆ ನಗದು ಹಾಗೂ ಸ್ಮರಣಿಕೆ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.