ADVERTISEMENT

ಮೈಸೂರು | ಭಾವನೆ ಹೊತ್ತು ತರುವ ಅಂಚೆ ಕಾಗದ: ಎಂ. ಮಂಜುನಾಥ್‌

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 3:19 IST
Last Updated 17 ಫೆಬ್ರುವರಿ 2026, 3:19 IST
ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕಾವೇರಿ ಸಭಾಂಗಣದಲ್ಲಿ ಅಂಚೆ ಇಲಾಖೆಯು ಸೋಮವಾರದಿಂದ ಆಯೋಜಿಸಿರುವ 38ನೇ ಅಖಿಲ ಭಾರತೀಯ ಅಂಚೆ ಸಾಂಸ್ಕೃತಿಕ ಸಮ್ಮೇಳನವನ್ನು ಜಿತೇಂದ್ರ ಗುಪ್ತಾ ಉದ್ಘಾಟಿಸಿದರು ಪ್ರಜಾವಾಣಿ ಚಿತ್ರ
ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕಾವೇರಿ ಸಭಾಂಗಣದಲ್ಲಿ ಅಂಚೆ ಇಲಾಖೆಯು ಸೋಮವಾರದಿಂದ ಆಯೋಜಿಸಿರುವ 38ನೇ ಅಖಿಲ ಭಾರತೀಯ ಅಂಚೆ ಸಾಂಸ್ಕೃತಿಕ ಸಮ್ಮೇಳನವನ್ನು ಜಿತೇಂದ್ರ ಗುಪ್ತಾ ಉದ್ಘಾಟಿಸಿದರು ಪ್ರಜಾವಾಣಿ ಚಿತ್ರ   

ಮೈಸೂರು: ‘ಅಂಚೆ ಕಾಗದವು ಭಾವನೆಗಳನ್ನು ಹೊತ್ತು ತರುತ್ತವೆ. ಹೀಗಾಗಿ ಆಧುನಿಕ ಉಪಕರಣಗಳ ಮಧ್ಯೆಯೂ ಅಂಚೆ ಇಲಾಖೆಯು ಜನರಿಗೆ ಮನೆಯ ವಾತಾವರಣ ನೀಡುತ್ತದೆ’ ಎಂದು ಪಿಟೀಲು ವಾದಕ ವಿದ್ವಾನ್‌ ಡಾ.ಮೈಸೂರು ಎಂ. ಮಂಜುನಾಥ್‌ ತಿಳಿಸಿದರು.

ಅಂಚೆ ಇಲಾಖೆಯು ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕಾವೇರಿ ಸಭಾಂಗಣದಲ್ಲಿ ಸೋಮವಾರದಿಂದ ಆಯೋಜಿಸಿರುವ 38ನೇ ಅಖಿಲ ಭಾರತೀಯ ಅಂಚೆ ಸಾಂಸ್ಕೃತಿಕ ಸಮ್ಮೇಳನದಲ್ಲಿ ಮಾತನಾಡಿದರು.

‘ಎಲ್ಲಾ ದೇಶಗಳಲ್ಲೂ ಅಂಚೆ ಇಲಾಖೆಯು ಗೌರವ ಸಂಪಾದಿಸಿದೆ. ಸಾಮಾಜಿಕ ಮಾಧ್ಯಮಗಳಿದ್ದರೂ ಇಂದಿಗೂ ಪ್ರೀತಿ ಪಾತ್ರರಿಗೆ ಪತ್ರ ಬರೆಯುವವರಿದ್ದಾರೆ. ಪತ್ರದಲ್ಲಿನ ಆಪ್ತತೆ ಇನ್ನೆಲ್ಲೂ ಕಾಣಲು ಸಾಧ್ಯವಿಲ್ಲ. ಅಂಚೆ ಚೀಟಿಗಳು ಭಾರತೀಯ ಸಂಸ್ಕೃತಿಯನ್ನು ಪ್ರತಿನಿಧಿಸುತ್ತವೆ. ಹೀಗಾಗಿ ನಾವೆಲ್ಲಾ ಭಾರತದ ಪರಂಪರೆಯನ್ನು ಮುಂದೆ ಕೊಂಡೊಯ್ಯುತ್ತಿದ್ದೇವೆ ಎಂಬ ಹೆಮ್ಮೆ ಇರಬೇಕು’ ಎಂದರು.

ADVERTISEMENT

‘ಸಂಗೀತ ಹಾಗೂ ನೃತ್ಯ ಪ್ರಕಾರಗಳಿಂದ ವಿದೇಶಿಗರು ಭಾರತವನ್ನು ಗೌರವಿಸುತ್ತಾರೆ. ಇಲ್ಲಿನ ಪ್ರದರ್ಶಕ ಕಲೆಗಳು ಸಂತೋಷ ಹಂಚುತ್ತವೆ. ಸಾಂಸ್ಕೃತಿಕ ಪರಂಪರೆಯು ಸಮಾಜವನ್ನು ಶ್ರೀಮಂತಗೊಳಿಸುತ್ತದೆ. ಹೀಗಾಗಿ ಅದರ ಬಗ್ಗೆ ಪ್ರೀತಿ, ಕಾಳಜಿ ಅಗತ್ಯ. ಮಕ್ಕಳಿಗೆ ನಮ್ಮ ಕಲೆಗಳನ್ನು ಪರಿಚಯಿಸಿ, ಅವರಿಗೆ ವೇದಿಕೆ ನೀಡಿ ಸಾಧಕರನ್ನಾಗಿಸುವುದು ನಮ್ಮ ಕರ್ತವ್ಯ’ ಎಂದು ಅಭಿಪ್ರಾಯಪಟ್ಟರು.

ಅಂಚೆ ಸೇವೆಗಳ ಮಹಾನಿರ್ದೇಶಕ ಜಿತೇಂದ್ರ ಗುಪ್ತಾ ಮಾತನಾಡಿ, ‘ಭಾರತವು ವೈವಿಧ್ಯತೆಯಿಂದ ಕೂಡಿದ್ದು, ಸಂಗೀತ ಹಾಗೂ ನೃತ್ಯ ಇಲ್ಲಿನ ಮಾತೃ ಭಾಷೆಯಾಗಿದೆ. ದೇಶದ ವೈಶಿಷ್ಟ್ಯವನ್ನು ತಿಳಿಯುವ ಕೆಲಸವಾಗಬೇಕಿದೆ’ ಎಂದು ಹೇಳಿದರು.

ಸಮ್ಮೇಳನದ ನೆನಪಿನ ವಿಶೇಷ ಅಂಚೆ ಲಕೋಟೆಯನ್ನು ಜಿತೇಂದ್ರ ಗುಪ್ತಾ ಬಿಡುಗಡೆ ಮಾಡಿದರು.

ಪಿಟೀಲು ವಾದಕ ವಿದ್ವಾನ್ ಮೈಸೂರು ಎಂ. ನಾಗರಾಜ್, ಕರ್ನಾಟಕ ಅಂಚೆ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಪ್ರಕಾಶ್, ಸ್ಥಾನಿಕ ನಿರ್ದೇಶಕ ಸಂದೇಶ್ ಮಹದೇವಪ್ಪ, ಬೆಂಗಳೂರು ಕೇಂದ್ರ ವಲಯದ ನಿರ್ದೇಶಕಿ ವಿ. ತಾರಾ, ಮೈಸೂರು ಅಂಚೆ ತರಬೇತಿ ಕೇಂದ್ರದ ನಿರ್ದೇಶಕ ಆಶಿಶ್ ಸಿಂಗ್ ಠಾಕೂರ್ ಇದ್ದರು.

ವಿಶೇಷ ಅಂಚೆ ಲಕೋಟೆ ಬಿಡುಗಡೆ ಡೊಳ್ಳು ಕುಣಿತಕ್ಕೆ ನಲಿದ ಪ್ರೇಕ್ಷಕರು ನಾಲ್ಕು ದಿನ ನಡೆಯಲಿರುವ ಸಮ್ಮೇಳನ

ಅಂಚೆ ವೃತ್ತಗಳ 335 ಸಿಬ್ಬಂದಿ ಭಾಗಿ ನಾಲ್ಕು ದಿನಗಳ ಕಾಲ ನಡೆಯಲಿರುವ 38ನೇ ಅಖಿಲ ಭಾರತೀಯ ಅಂಚೆ ಸಾಂಸ್ಕೃತಿಕ ಸಮ್ಮೇಳನದಲ್ಲಿ ದೇಶದ 21 ಅಂಚೆ ವೃತ್ತಗಳಿಂದ ಒಟ್ಟು 335 ಸಿಬ್ಬಂದಿ ಪ್ರದರ್ಶನ ನೀಡಲಿದ್ದಾರೆ. ಮೊದಲ ದಿನ ಮುಕ್ತ ಗಂಗೋತ್ರಿಯ ಕಾವೇರಿ ಸಭಾಂಗಣದಲ್ಲಿ ಶಾಸ್ತ್ರೀಯ ಏಕವ್ಯಕ್ತಿ ನೃತ್ಯ ಕೂಚುಪುಡಿ ಕಥಕ್ ನಳ ಸಭಾಂಗಣದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಮೃದಂಗ ಕೊಳಲು ವಯೋಲಿನ್‌ ಘಟಂ ವೀಣೆ ನಾದಸ್ವರ ಹಿಂದೂಸ್ಥಾನಿ ಗಾಯನ ಸ್ಪರ್ಧೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.