
ಮೈಸೂರು: ಕೈಗಾರಿಕಾ ಉದ್ಯಮಗಳು (ಎಲ್‌ಟಿ5 ಮತ್ತು ಎಚ್‌ಟಿ2ಎ ಸಂಪರ್ಕ) ಬಳಸುವ ಪ್ರತಿ ಎಚ್‌ಪಿಗೆ ಕಡ್ಡಾಯ ಶುಲ್ಕವನ್ನು ₹15ರಿಂದ ₹20ಕ್ಕೆ ಹಾಗೂ ಪ್ರತಿ ಯೂನಿಟ್‌ಗೆ 10 ಪೈಸೆಯಿಂದ 70 ಪೈಸೆವರೆಗೆ ಏರಿಸಿ ಪರಿಷ್ಕರಿಸುವ ಪ್ರಸ್ತಾವಕ್ಕೆ ಆಕ್ಷೇಪ ವ್ಯಕ್ತವಾಯಿತು.
ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ) ಅಧ್ಯಕ್ಷ ರವಿಕುಮಾರ್ ಅವರು ಬೆಂಗಳೂರಿನಿಂದ ಆನ್‌ಲೈನ್‌ನಲ್ಲಿ ನಡೆಸಿದ ವಿಚಾರಣಾ ಸಭೆಯಲ್ಲಿ ಮೈಸೂರಿನ ಉದ್ಯಮಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಇಲ್ಲಿನ ಸೆಸ್ಕ್ ಕಚೇರಿಯಿಂದ ಮೈಸೂರು ಕೈಗಾರಿಕೆಗಳ ಸಂಘ ಮತ್ತು ಎಂಎಸ್‌ಎಂಇ ಕೌನ್ಸಿಲ್ ಪ್ರತಿನಿಧಿಯಾಗಿ ಭಾಗವಹಿಸಿದ್ದ ಸುರೇಶ್‌ಕುಮಾರ್ ಜೈನ್ ಅವರು ದರ ಏರಿಕೆಗೆ ವಿರೋಧ ವ್ಯಕ್ತಪಡಿಸಿದರು.
‘ನಮ್ಮ ಮೇಲೆ ಹೊರೆ ಹಾಕಿ, ಒತ್ತಡಕ್ಕೆ ಸಿಲುಕಿಸುವುದು ಸರಿಯಲ್ಲ. 2022ರಿಂದ ಹಂತ ಹಂತವಾಗಿ ಕೈಗಾರಿಕೆ ಹಾಗೂ ವಾಣಿಜ್ಯ ಘಟಕಕ್ಕೆ ದರ ಕಡಿಮೆ ಮಾಡುತ್ತಾ ಬರಲಾಗಿತ್ತು. ಹೋದ ವರ್ಷ ₹ 1.60ವರೆಗೂ ಇಳಿಸಲಾಗಿತ್ತು. ಈಗ ಏರಿಕೆಗೆ ಮುಂದಾಗಿರುವುದು ಖಂಡನೀಯ’ ಎಂದು ತಿಳಿಸಿದರು.
‘ಎಸ್ಕಾಂಗಳ ಅಧ್ಯಕ್ಷರು ಸರ್ಕಾರದ ಭಾಗ. ಅವರು ಬಜೆಟ್‌ನಲ್ಲಿ ಅನುದಾನ ತರಲಾಗದೇ, ಅವರ ದೋಷದ ಕಾರಣದಿಂದಾಗಿ ನಮ್ಮ ಮೇಲೆ ಹೊರೆ ಹೊರಿಸಲು ಮುಂದಾಗಿದ್ದಾರೆ’ ಎಂದು ದೂರಿದರು. ‘ನೀರಾವರಿಗೆ ಕಡಿಮೆ ಮಾಡುವುದು ಬೇಡ, ನಮಗೆ ಹೆಚ್ಚಿಸಲೂಬಾರದು’ ಎಂದು ಕೋರಿದರು.
‘₹ 4,619 ಕೋಟಿ ಖೋತಾ ಆಗಿರುವುದನ್ನು ಸರ್ಕಾರದಿಂದ ಪಡೆದುಕೊಳ್ಳಬೇಕಾಗಿತ್ತು. ಪೂರಕ ಬಜೆಟ್‌ನಲ್ಲಿಯಾದರೂ ತೆಗೆದುಕೊಳ್ಳಬೇಕಿತ್ತು. ಆದರೆ, ಆಗಲಿಲ್ಲ. ಈಗ ಮುಂಬರುವ ಬಜೆಟ್‌ನಲ್ಲಾದರೂ ಪಡೆದುಕೊಳ್ಳಬೇಕು. ನಮ್ಮ ಮೇಲೆ ವಿಧಿಸಬಾರದು’ ಎಂದು ಮನವಿ ಮಾಡಿದರು.
‘ಎಸ್ಕಾಂಗಳಿಗೆ ಸ್ಥಳೀಯ ಸಂಸ್ಥೆಗಳಿಂದ, ಗೃಹಜ್ಯೋತಿ ಮೊದಲಾದ ಯೋಜನೆಗಳಿಂದ ಸರ್ಕಾರಕ್ಕೆ ಹಳೆಯ ಬಾಕಿಯೇ ₹ 1,398 ಕೋಟಿ ಇದೆ. ಅದನ್ನು ವಸೂಲಿ ಮಾಡಿಲ್ಲ. ಅದರ ಬಡ್ಡಿಯನ್ನೆಲ್ಲಾ ನಮ್ಮ ಮೇಲೆ ಹಾಕುತ್ತಿದ್ದಾರೆ. ಎಲ್‌ಟಿ5 ಮತ್ತು ಎಚ್‌ಟಿ2ಎ ಸಂಪರ್ಕ ಪಡೆದಿರುವ ಕೈಗಾರಿಕೆಗಳಿಂದ ಬರಬೇಕಾದ ಬಡ್ಡಿ ₹ 85 ಕೋಟಿ ಮಾತ್ರ. ಹಲವು ಕಾರಣದಿಂದ ಕೈಗಾರಿಕೆಗಳು ಮುಚ್ಚಿ ಹೋಗಿರುವುದರಿಂದಾಗಿ ಬಾಕಿ ಇದೆ. ಹಾಗೆಂದು ಎಸ್ಕಾಂಗಳು ಬಿಡುವುದಿಲ್ಲ. ಬಡ್ಡಿ, ಚಕ್ರಬಡ್ಡಿ ಸೇರಿಸಿ ವಸೂಲಿ ಮಾಡಿಯೇ ಮಾಡುತ್ತವೆ. ಆದರೆ, ಸರ್ಕಾರದಿಂದ ಬರಬೇಕಾಗಿರುವ ₹ 1,398 ಕೋಟಿ ವಸೂಲಿಗೆ ಕ್ರಮ ಕೈಗೊಳ್ಳದಿರುವುದು ಎಸ್ಕಾಂಗಳ ಲೋಪವೇ ಹೊರತು ಕೈಗಾರಿಕೆಯವರದು ಅಥವಾ ಗ್ರಾಹಕರದಲ್ಲ’ ಎಂದು ತಿಳಿಸಿದರು.
‘ವಿದ್ಯುತ್ ದರ ಪರಿಷ್ಕರಿಸಿದಲ್ಲಿ ಕೈಗಾರಿಕೆಗಳು ಸಂಕಷ್ಟಕ್ಕೆ ಒಳಗಾಗಲಿವೆ. ಮೈಸೂರು ವಿಭಾಗದಲ್ಲಿ ಶೇ 30ರಷ್ಟು ಮುಚ್ಚಿವೆ. ಶೇ 40ರಷ್ಟು ಮಾತ್ರ ನಡೆಯುತ್ತಿವೆ. ಹೀಗಾಗಿ, ಯಾವುದೇ ಕಾರಣಕ್ಕೂ ಎಸ್ಕಾಂಗಳ ಅರ್ಜಿಯನ್ನು ಪರಿಗಣಿಸಬಾರದು. ಒಂದೊಮ್ಮೆ ದರ ಏರಿಕೆಯಾದಲ್ಲಿ ನ್ಯಾಯಾಲಯಕ್ಕೆ ಹೋಗಬೇಕಾಗುತ್ತದೆ’ ಎಂದು ಹೇಳಿದರು.
ಕೈಗಾರಿಕೋದ್ಯಮಿ ಅಶ್ವತ್ಥನಾರಾಯಣ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.