
ಮೈಸೂರು: ಜಿಲ್ಲೆಯಲ್ಲಿ 2025ರ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ ಸಂಭವಿಸಿರುವ ಶಿಶು ಮರಣ ಪ್ರಕರಣಗಳ ಕುರಿತು ಅಧಿಕಾರಿಗಳು ಪರಿಶೋಧನೆ ನಡೆಸಿದರು.
ಇಲ್ಲಿನ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (ಎಂಎಂಸಿಆರ್‌ಐ) ಸಭಾಂಗಣದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಯುಕೇಶ್‌ಕುಮಾರ್ ಹಾಗೂ ತಜ್ಞ ವೈದ್ಯರು ಪಾಲ್ಗೊಂಡಿದ್ದರು.
ಡಿಸೆಂಬರ್ ಅಂತ್ಯದವರೆಗೆ 311 ಶಿಶು ಮರಣ ಪ್ರಕರಣಗಳು ಸಂಭವಿಸಿರುವ ಬಗ್ಗೆ ಕಳವಳ ವ್ಯಕ್ತವಾಯಿತು.
ಶಿಶು ಮರಣಗಳಿಗೆ ಕಾರಣವಾದ ಅಂಶಗಳ ಕುರಿತು ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸಲಾಯಿತು. ಇಂತಹ ಪ್ರಕರಣ ತಡೆಗಟ್ಟಬಹುದಾದ ವಿವಿಧ ಹಂತಗಳ ಚಿಕಿತ್ಸಾ ವಿಧಾನದ ಬಗ್ಗೆ ಚರ್ಚಿಸಲಾಯಿತು.
‘ಕ್ಷೇತ್ರ ಭೇಟಿ ನೀಡಿ, ಸೂಕ್ತ ಶಿಫಾರಸುಗಳನ್ನು ಮಾಡಬೇಕು. ಹೆಚ್ಚುವರಿಯಾಗಿ ಹೆರಿಗೆ ಕೊಠಡಿ ಮತ್ತು ಶಸ್ತ್ರಚಿಕಿತ್ಸಾ ಕೊಠಡಿಗಳನ್ನು ಪ್ರಾರಂಭಕ್ಕೆ, ಎಸ್‌ಎನ್‌ಸಿಯು ಘಟಕಕ್ಕೆ ಹೆಚ್ಚುವರಿ ಬೇಬಿ ವಾರ್ಮರ್ ಉಪಕರಣ ಖರೀದಿಸುವುದಕ್ಕೆ ಸಂಬಂಧಿಸಿದಂತೆ ಪ್ರಸ್ತಾವ ಸಲ್ಲಿಸಬೇಕು’ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದರು.
‘ಜಿಲ್ಲೆಯ ಶಿಶು ಮರಣ ಪ್ರಮಾಣವು ಸರಾಸರಿ ಶೇ 11ರಷ್ಟಿದೆ. ಈ ಪ್ರಮಾಣವನ್ನು ಶೂನ್ಯಕ್ಕೆ ಇಳಿಸುವ ಸಂಬಂಧ ಸಮುದಾಯದ ಮಟ್ಟದಲ್ಲಿ ಮತ್ತು ಆರೋಗ್ಯ ಸಂಸ್ಥೆಗಳಲ್ಲಿ ನಿಯಮಾನುಸಾರ ಚಿಕಿತ್ಸಾ ವಿಧಾನವನ್ನು ಅನುಸರಿಸಬೇಕು’ ಎಂದು ತಿಳಿಸಿದರು.
‘ಚೆಲುವಾಂಬ ಆಸ್ಪತ್ರೆಯ ಮಕ್ಕಳ ತಜ್ಞ ವೈದ್ಯರು ಹಾಗೂ ಡಿಎಚ್‌ಒ ಕಚೇರಿ ಅಧೀನದಲ್ಲಿರುವ ಎಲ್ಲಾ ತಜ್ಞ ವೈದ್ಯರು, ಕ್ಷೇತ್ರ ಸಿಬ್ಬಂದಿಯಾದ ಪಿ.ಎಚ್.ಸಿ.ಒ, ಎಚ್.ಐ.ಒ. ಮತ್ತು ಆಶಾ ಕಾರ್ಯಕರ್ತೆಯರು ಕ್ಷೇತ್ರ ಮಟ್ಟದಲ್ಲಿ ಆದ್ಯತೆಯ ಮೇರೆಗೆ ಕರ್ತವ್ಯ ನಿರ್ವಹಿಸಬೇಕು’ ಎಂದು ನಿರ್ದೇಶನ ನೀಡಿದರು.
ಚೆಲುವಾಂಬ ಆಸ್ಪತ್ರೆಗೆ ಭೇಟಿ ನೀಡಿದ ಅವರು, ಅಲ್ಲಿನ ಒಳರೋಗಿಗಳ ಆರೋಗ್ಯ ವಿಚಾರಿಸಿದರು. ರೋಗಿಗಳಿಗೆ ಸೌಲಭ್ಯ ಕಲ್ಪಿಸುವಲ್ಲಿ ಯಾವುದೇ ವ್ಯತ್ಯಯ ಆಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಡಿಎಚ್‌ಒ ಡಾ.ಪಿ.ಸಿ. ಕುಮಾರಸ್ವಾಮಿ ಪಿಸಿ, ಎಂಎಂಸಿಆರ್‌ಐ ಡೀನ್ ಡಾ.ದಾಕ್ಷಾಯಣಿ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಮಹಮ್ಮದ್ ಸಿರಾಜ್ ಅಹಮದ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.