
ಮೈಸೂರು: ‘ನಾಗರಿಕ ಸೇವೆಯಲ್ಲಿ ಅಧಿಕಾರ ಎನ್ನುವುದು ಅಂತಃಕರಣವಾಗಲಿ’ ಎಂದು ಐಪಿಎಸ್ ಅಧಿಕಾರಿ ಎಸ್.ಎಲ್.ಚನ್ನಬಸವಣ್ಣ ಹೇಳಿದರು.
ನಗರದ ಲಕ್ಷ್ಮೀಪುರಂನ ಸರ್ಕಾರಿ ಪ್ರೌಢಶಾಲೆ ಮತ್ತು ಪಿಯು ಕಾಲೇಜು ಆವರಣದಲ್ಲಿ ಜ್ಞಾನಬುತ್ತಿ ಸಂಸ್ಥೆಯಿಂದ ಸೋಮವಾರ ನಡೆದ ಐಎಎಸ್, ಕೆಎಎಸ್ ಪರೀಕ್ಷಾ ಉಚಿತ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ‘ಅಧ್ಯಯನ ಪುಸ್ತಕ’ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
‘ನಾಗರಿಕ ಸೇವೆ ಸರ್ಕಾರದ ನೀತಿ, ಕಾರ್ಯಕ್ರಮ ರೂಪಿಸುವ, ಅನುಷ್ಠಾನಗೊಳಿಸುವ ಆಡಳಿತಾತ್ಮಕ ವಿಭಾಗವಾಗಿದೆ. ಹಾಗಾಗಿ ಸೇವೆಯನ್ನು ರಾಜಕೀಯವಾಗಿ ತಟಸ್ಥರಾಗಿ, ನಿಷ್ಪಕ್ಷಪಾತವಾಗಿ ಮಾಡಬೇಕು. ಇಲ್ಲಿ ಸೇವೆ ಮಾಡುವ ಮನೋಭಾವ ಮುಖ್ಯ’ ಎಂದು ತಿಳಿಸಿದರು.
‘ಪರೀಕ್ಷಾ ತರಬೇತಿ ಯಾವುದೇ ತರಹದ ಶೈಕ್ಷಣಿಕ ಕೋರ್ಸ್‌ಗಳಲ್ಲ. ಇಲ್ಲಿ ಪಾಂಡಿತ್ಯ ಪಡೆಯುವ ಉದ್ದೇಶವಿಲ್ಲ. ಒಂದು ವಿಷಯವನ್ನು ಅರ್ಥೈಸಿಕೊಳ್ಳುವ ದೃಷ್ಟಿಕೋನ ಮುಖ್ಯ. ವಿಷಯವನ್ನು ವಿವಿಧ ಮಜಲುಗಳಾಗಿ ವಿಶ್ಲೇಷಣೆ ಮಾಡುವ ಕೌಶಲ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
‘ವಿದ್ಯಾರ್ಥಿಗಳು ಏನೋ ಆಗಬೇಕು ಎನ್ನುವ ಭಾವನೆ ಬೇಡ. ಇಂತದ್ದೇ ಆಗಬೇಕು ಎನ್ನುವ ಮನೋಭಾವ ಅಗತ್ಯ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ನಿರಂತರ ಪ್ರಯತ್ನ ಬೇಕು. ಇದು ಗುರಿ ತಲುಪುವವರೆಗೂ ಮುಂದುವರಿಯಬೇಕು’ ಎಂದರು.
‘ಪ್ರಚಲಿತ ಘಟನೆಗಳ ಅರಿವು ಹೊಂದಬೇಕು. ದೇಶದ ಗಡಿ ರಾಷ್ಟ್ರಗಳೊಂದಿಗಿನ ಬಾಂಧವ್ಯ, ಸುಪ್ರೀಂ ಕೋರ್ಟ್ ತೀರ್ಪು, ತಂತ್ರಜ್ಞಾನ, ಹವ್ಯಾಸ, ವಿಷಯದ ವಾಸ್ತವಾಂಶ, ಚುನಾವಣೆ, ಅರ್ಜಿ ನಮೂನೆಯಲ್ಲಿನ ವಿವರಣೆ, ಹವಾಮಾನ ಬದಲಾವಣೆ ನೀತಿ, ಸ್ಥಳೀಯ ಮತ್ತು ರಾಜ್ಯ ಸಂಬಂಧಿತ ವಿಷಯ ಹಾಗೂ ಮುಖ್ಯವಾಗಿ ಸಂದರ್ಶನ ಸಂಬಂಧಿಸಿದಂತೆ ಅಭ್ಯರ್ಥಿಗಳು ತಯಾರಿ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ವಿಭಾಗದ ಹೆಚ್ಚುವರಿ ಪ್ರಾದೇಶಿಕ ಆಯುಕ್ತೆ ಕವಿತಾ ರಾಜಾರಾಂ ಉಪಸ್ಥಿತರಿದ್ದರು.
ಜೈನಹಳ್ಳಿ ಸತ್ಯನಾರಾಯಣ ಗೌಡ, ಟಿ.ಸಿ.ಸುದೀಪ, ಪ್ರೊ.ಹೊನ್ನಯ್ಯ, ಪ್ರೊ.ಈ.ಶಿವಪ್ರಸಾದ್, ಪ್ರೊ.ವಿ.ಜಯಪ್ರಕಾಶ್, ಎಸ್.ಗಣೇಶ್, ರಾಜೀವ್ ಶರ್ಮ, ಮಂಜುನಾಥ್ ಮಹದೇವಪ್ಪ, ಯು.ಎಂ.ಶರದ್‌ರಾವ್, ಕೃಷ್ಣಕುಮಾರ್, ನಾಗರಾಜು ಬೀಜಗನಹಳ್ಳಿ, ರೋಹನ್ ರವಿಕುಮಾರ್, ಕೃಷ್ಣ, ಮೋಹನ್ ಹಾರೋಹಳ್ಳಿ, ಪ್ರೊ.ಕೃ.ಪ.ಗಣೇಶ, ಎಸ್.ಬಿ.ಎಂ.ಪ್ರಸನ್ನ, ಪ್ರೊ.ಸಿ.ಕೆ.ಕಿರಣ್ ಕೌಶಿಕ್, ಕೆ.ವೈ.ನಾಗೇಂದ್ರ, ಸಂಸ್ಥೆಯ ಕಾರ್ಯದರ್ಶಿ ಎಚ್.ಬಾಲಕೃಷ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.