ADVERTISEMENT

ಮೈಸೂರು: ಎಲ್ಲೆಡೆ ಶಿವನಾಮ ಸ್ಮರಣೆ, ಜಾಗರಣೆ

ಜಿಲ್ಲೆಯಾದ್ಯಂತ ಶಿವ ದೇಗುಲಗಳಲ್ಲಿ ತ್ರಿಕಾಲ ಪೂಜೆ, ಭಜನೆ l ಪ್ರಸಾದ ವಿತರಣೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2026, 4:13 IST
Last Updated 16 ಫೆಬ್ರುವರಿ 2026, 4:13 IST
ಮೈಸೂರಿನ ಅರಮನೆ ಆವರಣದಲ್ಲಿರುವ ತ್ರಿನೇಶ್ವರಸ್ವಾಮಿ ದೇಗುಲದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಭಾನುವಾರ ಶಿವಲಿಂಗಕ್ಕೆ ಚಿನ್ನದ ಕೊಳಗ ಹಾಕಿ ಪೂಜೆ ಸಲ್ಲಿಸಲಾಯಿತು
 ಪ್ರಜಾವಾಣಿ ಚಿತ್ರಗಳು: ಅನೂಪ್‌ ರಾಘ ಟಿ.
ಮೈಸೂರಿನ ಅರಮನೆ ಆವರಣದಲ್ಲಿರುವ ತ್ರಿನೇಶ್ವರಸ್ವಾಮಿ ದೇಗುಲದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಭಾನುವಾರ ಶಿವಲಿಂಗಕ್ಕೆ ಚಿನ್ನದ ಕೊಳಗ ಹಾಕಿ ಪೂಜೆ ಸಲ್ಲಿಸಲಾಯಿತು  ಪ್ರಜಾವಾಣಿ ಚಿತ್ರಗಳು: ಅನೂಪ್‌ ರಾಘ ಟಿ.   

ಮೈಸೂರು: ನಗರವೂ ಸೇರಿದಂತೆ ಜಿಲ್ಲೆಯೆಲ್ಲೆಡೆ ಮಹಾಶಿವರಾತ್ರಿ ಹಬ್ಬವನ್ನು ಜನರು ಸಂಭ್ರಮದಿಂದ ಆಚರಿಸಿದರು. ಭಾನುವಾರ ಮುಂಜಾನೆಯಿಂದಲೇ ಶಿವನ ದೇಗುಲಗಳಲ್ಲಿ ಪೂಜೆ ಆರಂಭವಾದವು. ರಾತ್ರಿ ಭಕ್ತರು ಶಿವನಾಮ ಸ್ಮರಣೆ, ಜಾಗರಣೆಯಲ್ಲಿ ಮುಳುಗೆದ್ದರು. 

ಪರಶಿವನ ದೇಗುಲಗಳು ವಿಶೇಷ ಅಲಂಕಾರದಿಂದ ಕಂಗೊಳಿಸಿದರೆ, ಭಕ್ತರು ರಾತ್ರಿಯಿಡಿ ದೇಗುಲಗಳಲ್ಲಿ ಸರದಿ ಸಾಲಿನಲ್ಲಿ ಬಂದು ದರ್ಶನ ಪಡೆದರು.

ಅಂಬಾವಿಲಾಸ
 ಅರಮನೆಯ ತ್ರಿನೇಶ್ವರ ದೇಗುಲದಲ್ಲಿ ಬೆಳಗ್ಗಿನಿಂದಲೇ ಸಾವಿರಾರು ಜನರು ಜಮಾಯಿಸಿದ್ದರು. ಚಾಮುಂಡಿಬೆಟ್ಟದ ಮಹಾಬಲೇಶ್ವರ, ನಂಜನಗೂಡಿನ ನಂಜುಂಡೇಶ್ವರ, ತಲಕಾಡಿನ ವೈದ್ಯನಾಥೇಶ್ವರ, ಕೆ.ಆರ್.ನಗರದ ಅರ್ಕೇಶ್ವರ ಸೇರಿದಂತೆ ಜಿಲ್ಲೆಯ ಶಿವ ದೇವಾಲಯಗಳು ಭಕ್ತ ಸಾಗರದಿಂದ ತುಂಬಿದ್ದವು.

ADVERTISEMENT

ತ್ರಿನೇಶ್ವರ ದೇಗುಲದ ಆವರಣವನ್ನು ಫಲ–ಪುಷ್ಪಗಳಿಂದ ಸಿಂಗರಿಸಲಾಗಿತ್ತು. ಬೆಳಿಗ್ಗೆ ಪಂಚಾಮೃತ, ಬಿಲ್ವಪತ್ರೆ, ಏಕವಾರ ರುದ್ರಾಭಿಷೇಕ ನೆರವೇರಿಸಿ ಅರ್ಧನಾರೀಶ್ವರ ಅಲಂಕಾರವನ್ನು ಲಿಂಗಕ್ಕೆ ಲೇಪನ ಮಾಡಲಾಯಿತು. ಅರ್ಧಲಿಂಗಕ್ಕೆ ಗಂಧ, ಅರಿಶಿಣ, ಮತ್ತೊಂದು ವಿಭೂತಿ ಭಾಗಕ್ಕೆ ಲೇಪನ ಮಾಡಿ ಶಿವ–ಪಾರ್ವತಿ ಚಿಹ್ನೆಗಳನ್ನು ಮೂಡಿಸಲಾಯಿತು. ನಂತರ ಮೂರನೇ ಕಣ್ಣಿನ ಚಿನ್ನದ ಆಭರಣದ ಪಟ್ಟಿ ಧರಿಸಿ, ಪ್ರಾರ್ಥಿಸಲಾಯಿತು. ಹಾಲು, ಮೊಸರು, ಜೇನುತುಪ್ಪ, ಶರ್ಕರ, ಎಳನೀರು ಅಭಿಷೇಕ ಮಾಡಿ, ಗಂಧ ಲೇಪನ ಮಾಡಲಾಯಿತು. ಪೂಜೆಯ ನಂತರ ಚಿನ್ನದ ಕೊಳಗ ಹಾಕಲಾಯಿ ತು. 

ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ವರಾಹ ದ್ವಾರದಿಂದ ಪ್ರವೇಶ ನೀಡಲಾಗಿತ್ತು.

ಕೆ.ಜಿ.ಕೊಪ್ಪಲಿನ ಚಂದ್ರಮೌಳೇಶ್ವರ ದೇಗುಲ, ಕುವೆಂಪುನಗರದ ವಿಶ್ವಮಾನವ ಜೋಡಿ ರಸ್ತೆಯ ಪ್ರಸನ್ನ ಶಿವಲಿಂಗೇಶ್ವರ ಸ್ವಾಮಿ ದೇಗುಲದ ಆವರಣದಲ್ಲಿ ಶಿವ ಹಾಗೂ ಪಾರ್ವತಿಯ ಮೂರ್ತಿಗಳನ್ನು ಇರಿಸಿ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಭಕ್ತರು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. 

ರಾಮಾನುಜ ರಸ್ತೆಯ ಗುರುಕುಲದ ನೂರೊಂದು ಶಿವಲಿಂಗಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಮೈಮುಲ್‌ ಡೇರಿ ಸಮೀಪದಲ್ಲಿರುವ ಮಲೆ ಮಹದೇಶ್ವರ ದೇವಸ್ಥಾನ, ಜಯಲಕ್ಷ್ಮಿಪುರಂನ ಚಂದ್ರಮೌಳೇಶ್ವರ ದೇಗುಲ, ಚಾಮರಾಜಪುರಂನ
ಗೀತಾ ರಸ್ತೆಯಲ್ಲಿನ ಪ್ರಸನ್ನ ವಿಶ್ವೇಶ್ವರ ಸ್ವಾಮಿ, ಖಿಲ್ಲೆ ಮೊಹಲ್ಲಾದ ಭೈರವೇಶ್ವರಸ್ವಾಮಿ, ಅಶೋಕ ರಸ್ತೆಯ ಮುಕ್ಕಣ್ಣೇಶ್ವರ ಸ್ವಾಮಿ, ದಿವಾನ್ಸ್ ರಸ್ತೆಯ ಅಮೃತೇಶ್ವರ ದೇವಸ್ಥಾನ, ಬೋಗಾದಿಯ ನಾಗೇಶ್ವರ ಭೋಗೇಶ್ವರಸ್ವಾಮಿ, ಕುಂಬಾರ ಕೊಪ್ಪಲು, ಸಿದ್ದಪ್ಪ ಚೌಕ, ಹೊಸಕೇರಿ, ಬನ್ನೂರು ರಸ್ತೆ ಸೇರಿದಂತೆ ವಿವಿಧೆಡೆ ಇರುವ ಮಹದೇಶ್ವರ ದೇವಾಲಯಗಳಲ್ಲೂ ಪೂಜೆ ನಡೆದವು.

ದೇಗುಲಗಳಲ್ಲಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿತ್ತು. 

ಸುತ್ತೂರು ಕ್ಷೇತ್ರದಲ್ಲಿ ಮಹಾಶಿವರಾತ್ರಿ ಅಂಗವಾಗಿ ಶಿವರಾತ್ರೀಶ್ವರ ಶಿವಯೋಗಿಗಳ ಕರ್ತೃಗದ್ದುಗೆಗೆ ವಿಶೇಷ ಪೂಜೆ ನಡೆಯಿತು.

ಶಿವ ದೀಕ್ಷೆ, ಬೆಳ್ಳಿರಥ ಪ್ರಾಕಾರೋತ್ಸವ ನಡೆಯಿತು.

ಮಹದೇಶ್ವರ ಹಾಗೂ ಸೋಮೇಶ್ವರ, ವೀರಭದ್ರೇಶ್ವರ, ನಂಜುಂಡೇಶ್ವರ ಮತ್ತು ನಾರಾಯಣಸ್ವಾಮಿ
ದೇವಸ್ಥಾನಗಳಲ್ಲಿಯೂ ಪೂಜೆ ನಡೆಯಿತು. ಎಲ್ಲ ಶಿವ ದೇಗುಲಗಳಲ್ಲಿ ತ್ರಿಕಾಲ ಪೂಜೆ ನಡೆಯಿತು. 
ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.

ಗ್ರಾಮೀಣರ ಸೊಗಡಿನ ಹಬ್ಬ 

ಗ್ರಾಮೀಣ ಭಾಗದಲ್ಲೂ ಶಿವರಾತ್ರಿ ಹಬ್ಬ ಜೋರಾಗಿತ್ತು. ಅಸಂಖ್ಯಾತ ಭಕ್ತರು ಉಪವಾಸ ವ್ರತಾಚರಣೆ ನಡೆಸಿದರು.  ಬೆಳಿಗ್ಗೆಯೇ ಸೋದರರು ತವರಿನ ಲಿಂಗವಸ್ತ್ರಗಳನ್ನು ಸೋದರಿಯರ ಮನೆಗೆ ತಲುಪಿಸಿ ಬಂದರು. ಬಿಲ್ವ‍ಪತ್ರೆ ಬನ್ನಿ ಪತ್ರೆ ಬೇಲದ ಪತ್ರೆ ಗಂಧದ ಪತ್ರೆ ಸೇರಿದಂತೆ 13 ಮಾದರಿಯ ಪತ್ರೆಗಳು ಕೊಳಗ ಕೇದಿಗೆ ಸೇರಿದಂತೆ ಹತ್ತಾರು ಹೂಗಳನ್ನು ಸಂಗ್ರಹಿಸಿ ಮನೆಮನೆಗಳಿಗೆ ಹಂಚಿದರು. ರಾತ್ರಿ ಶಿವಪೂಜೆ ಹಾಗೂ ಲಿಂಗವಸ್ತ್ರ ಧಾರಣೆ ನಂತರ ಉತ್ತರಾಣಿ ಕಡ್ಡಿಯಿಂದ ದೀಪಾರತಿ ಬೆಳಗಿದರು.  ಮನೆಗಳಲ್ಲಿನ ಗತಿಸಿದ ಹಿರಿಯರ ಫೋಟೊಗಳು ಹಸು ಎತ್ತುಗಳಿಗೆ ವಸ್ತ್ರ ಧಾರಣೆ ಮಾಡಿ ಪೂಜೆ ಸಲ್ಲಿಸಿದರು. ಉಪ್ಪಿಟ್ಟು ತಂಬಿಟ್ಟು ಹೆಸರುಬೇಳೆ ಸೇರಿದಂತೆ ಉಪಾಹಾರದ ಹಬ್ಬದೂಟದ ನಂತರ ಊರಿನ ಶಿವ ದೇಗುಲಗಳಿಗೆ ತೆರಳಿ ದರ್ಶನ ಪಡೆದರು. 

ಅವಧೂತ ದತ್ತಪೀಠದಲ್ಲಿ 60ನೇ ಶಿವರಾತ್ರಿ 

ಮೈಸೂರಿನ ಊಟಿ ರಸ್ತೆಯ ಅವಧೂತ ದತ್ತಪೀಠದ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ವಿವಿಧಡೆಯಿಂದ ಬಂದಿದ್ದ ಭಕ್ತರು ಪೀಠದ 60ನೇ ಶಿವರಾತ್ರಿ ಮಹೋತ್ಸವದಲ್ಲಿ ಪಾಲ್ಗೊಂಡರು.  ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ವಿಶ್ವ ಪ್ರಾರ್ಥನಾ ಮಂದಿರದಲ್ಲಿರುವ ಸಚ್ಚಿದಾನಂದೇಶ್ವರ ಶಿವಲಿಂಗಕ್ಕೆ ವಿಶೇಷ ಅಭಿಷೇಕ ಮಾಡಿದರು. ನಂತರ ಮಂಗಳಾರತಿ ಬೆಳಗಿದರು. ‌ದಿನವಿಡೀ ಶಿವನಾಮ ಸ್ಮರಣೆ ಜಾಗರಣೆ ಸಂಗೀತ ಮತ್ತು ಭಜನೆಗಳು ನಡೆದವು.  ತಮಿಳುನಾಡಿನಿಂದ ಆಗಮಿಸಿದ್ದ ಕಲಾವಿದರು ಪಂಚಭೂತಗಳಿಗೆ ಸಂಬಂಧಿಸಿದಂತೆ 11 ಬಗೆಯ ವಿಶೇಷ ಅಲಂಕಾರ ಮಾಡಿದ್ದರು. ಭಕ್ತರ ಅನುಕೂಲಕ್ಕಾಗಿ ಒಳಗೆ ಮತ್ತು ಹೊರಗೆ ಎಂದು ಎರಡು ಕಡೆ ಶಿವಲಿಂಗ ದರ್ಶನ ಮತ್ತು ಅಭಿಷೇಕಕ್ಕೆ ವ್ಯವಸ್ಥೆ ಕ‌ಲ್ಪಿಸಲಾಗಿತ್ತು.  ‘ಶಿವ ನಿರ್ವಿಕಾರ ಸ್ವರೂಪಿ. ಆತನು ಭಕ್ತರು ಬೇಡಿದ ರೂಪದಲ್ಲಿ ಕಾಣಿಸಿಕೊಳ್ಳುವ ವಿಶ್ವರೂಪಿ. ನಮ್ಮ ಕ್ಷೀರಪಥವೇ ಲಿಂಗಾಕಾರದಲ್ಲಿದೆ. ಹರಿ ಮತ್ತು ಹರರಲ್ಲಿ ಯಾವುದೇ ಭೇದವಿಲ್ಲ’ ಎಂದು ಗಣಪತಿ ಸಚ್ಚಿದಾನಂದ ಸ್ವಾಮೀಜಿ ಹೇಳಿದರು. 

ತ್ರಿನೇಶ್ವರಸ್ವಾಮಿ ದೇಗುಲದಲ್ಲಿ ದರ್ಶನ ಪಡೆಯಲು ಬಂದಿದ್ದ ಭಕ್ತರು
ರಾಮಾನುಜ ರಸ್ತೆಯಲ್ಲಿರುವ 101 ಶಿವಲಿಂಗಗಳ ದೇವಾಲಯದಲ್ಲಿ ಸಂಭ್ರಮ
ಕೆ.ಜಿ.ಕೊಪ್ಪಲಿನ ಚಂದ್ರಮೌಳೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಕಂಗೊಳಿಸಿದ ಆವರಣ
ಕುವೆಂಪುನಗರದ ವಿಶ್ವಮಾನವ ಜೋಡಿ ರಸ್ತೆಯಲ್ಲಿರುವ ಪ್ರಸನ್ನ ಶಿವಲಿಂಗೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಅಲಂಕಾರ ಮತ್ತು ಸರದಿ ಸಾಲಿನಲ್ಲಿ ನಿಂತ ಭಕ್ತರು
ಅವಧೂತ ದತ್ತಪೀಠದಲ್ಲಿ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಶಿವಲಿಂಗಪೂಜೆ ನೆರವೇರಿಸಿದರು
ಸುತ್ತೂರು ಮಠದಲ್ಲಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಭಕ್ತರೊಂದಿಗೆ ಇಷ್ಟಲಿಂಗ ಪೂಜೆ ಮಾಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.