
ಮೈಸೂರು: ಸಿ.ಎಸ್. ಲಕ್ಷ್ಮೀಶ ಹಾಗೂ ಬಿಜೋಯಾ ಬರ್ಮನ್ ಅವರು ಭಾನುವಾರ ಇಲ್ಲಿ ನಡೆದ ಮ್ಯಾರಥಾನ್ ಓಟದಲ್ಲಿ ಕ್ರಮವಾಗಿ ಪುರುಷ ಹಾಗೂ ಮಹಿಳೆಯರ ವಿಭಾಗದಲ್ಲಿ ಅಗ್ರ ಪ್ರಶಸ್ತಿ ಗೆದ್ದರು.
42.2 ಕಿಲೋಮೀಟರ್ ದೂರವನ್ನು ಲಕ್ಷ್ಮೀಶ 3 ಗಂಟೆ, 10 ನಿಮಿಷ, 9 ಸೆಕೆಂಡ್‌ಗಳಲ್ಲಿ ಕ್ರಮಿಸಿ ಮೊದಲಿಗರಾಗಿ ಗುರಿ ತಲುಪಿದರು. ಬಿಜೋಯಾ ಇಷ್ಟೇ ದೂರದ ಗುರಿಯನ್ನು 3ಗಂಟೆ, 40 ನಿಮಿಷ, 04 ಸೆಕೆಂಡ್‌ಗಳಲ್ಲಿ ಕ್ರಮಿಸಿ ಪ್ರಶಸ್ತಿ ಎತ್ತಿ ಹಿಡಿದರು.
ಪುರುಷರ ಮ್ಯಾರಥಾನ್‌ನಲ್ಲಿ ಅಕ್ಷಯ್ ಶ್ರೀಧರ್ 3 ಗಂಟೆ, 10 ನಿಮಿಷ, 51 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟರು. ಎಸ್. ಸಾತ್ವಿಕ್ 3 ಗಂಟೆ, 15 ನಿಮಿಷ, 16 ಸೆಕೆಂಡ್‌ಗಳಲ್ಲಿ ಕ್ರಮಿಸಿ 3ನೇ ಸ್ಥಾನ ಪಡೆದರು.
ಮಹಿಳೆಯರ ವಿಭಾಗದಲ್ಲಿ ಎಚ್.ಕೆ. ಅನುರಾಧ 4 ಗಂಟೆ, 26 ನಿಮಿಷದಲ್ಲಿ ಗುರಿ ಮುಟ್ಟಿ ದ್ವಿತೀಯ ಸ್ಥಾನ ಪಡೆದರೆ, ಎಚ್.ಕೆ. ಹರ್ಷಿತಾ 4 ಗಂಟೆ 37 ನಿಮಿಷಗಳಲ್ಲಿ ಗುರಿ ತಲುಪಿದರು.
ಭಾರತೀಯ ಅಂಚೆ ಇಲಾಖೆಯು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಎನ್‌ಇಬಿ ಸ್ಪೋರ್ಟ್ಸ್ ಆಂಡ್ ಎಂಟರ್ಟೈನ್ಮೆಂಟ್ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ಈ ಮ್ಯಾರಥಾನ್‌ನಲ್ಲಿ ರಾಷ್ಟ್ರದ ವಿವಿಧ ರಾಜ್ಯಗಳಿಂದ ಬರೋಬ್ಬರಿ 3417 ಸ್ಪರ್ಧಿಗಳು ಓಡಿದರು.
ಹಾಫ್ ಮ್ಯಾರಥಾನ್ ( 21.1 ಕಿ.ಮೀ), 10 ಕಿ.ಮೀ. ಹಾಗೂ 5 ಕಿ.ಮೀ. ವಿಭಾಗದಲ್ಲಿ ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ಸ್ಪರ್ಧೆಗಳು ನಡೆದವು. ಮ್ಯಾರಥಾನ್ ಅಂಚೆ ತರಬೇತಿ ಕೇಂದ್ರದಿಂದ ಹೊರಟು, ದೇವೇಗೌಡ ವೃತ್ತ, ಮಣಿಪಾಲ್ ಆಸ್ಪತ್ರೆ ವೃತ್ತ, ಆರ್ಕಿಡ್ ಹೋಟೆಲ್ ರಸ್ತೆ, ನಂದಿ, ತಾವರೆ ಕಟ್ಟೆ, ಉತ್ತನಹಳ್ಳಿ ಮಾರ್ಗವಾಗಿ ಸಾಗಿ ಅಂಚೆ ತರಬೇತಿ ಕೇಂದ್ರದಲ್ಲಿ ಮುಕ್ತಾಯ ಕಂಡಿತು.
ಚಾಲನೆ: ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮ್ಯಾರಥಾನ್‌ಗೆ ಹಸಿರು ನಿಶಾನೆ ತೋರಿದರು. ಅಂಚೆ ಇಲಾಖೆಯ ಕರ್ನಾಟಕ ವೃತ್ತದ ಮುಖ್ಯ ಪ್ರಧಾನ ಪೋಸ್ಟ್ ಮಾಸ್ಟರ್ ಕೆ. ಪ್ರಕಾಶ್, ದಕ್ಷಿಣ ಕರ್ನಾಟಕ ವಿಭಾಗದ ಪ್ರಧಾನ ಪೋಸ್ಟ್ ಮಾಸ್ಟರ್ ಚಂದ್ರಶೇಖ್ ಕಾಕುಮನು, ಅಂಚೆ ತಂತ್ರಜ್ಞಾನ ಉತ್ಕೃಷ್ಟತಾ ಕೇಂದ್ರದ ಪ್ರಧಾನ ವ್ಯವಸ್ಥಾಪಕ ಶರವಣ, ಅಂಚೆ ಇಲಾಖೆಯ ನಿರ್ದೇಶಕ ಸಂದೇಶ್ ಮಹದೇವಪ್ಪ ಜೊತೆಗಿದ್ದರು.
ಫಲಿತಾಂಶ: ಪುರುಷರು: ಹಾಫ್ ಮ್ಯಾರಥಾನ್ (21.1 ಕಿ.ಮೀ): ಕೆ. ಶೈಲೇಶ್ (ಸಮಯ: 1 ಗಂಟೆ, 12 ನಿಮಿಷ, 53 ಸೆಕೆಂಡ್)–1, ಎಸ್.ಎನ್. ಶ್ರೀಧರ–2, ವೈ.ಎಸ್. ದೀಕ್ಷಿತ್–3; 10 ಕಿ.ಮೀ. ಓಟ: ಗಣಪತಿ (ಸಮಯ: 37 ನಿಮಿಷ, 12 ಸೆಕೆಂಡ್)–1, ಎಸ್. ಸುಮಂತ್–2, ಮಾನಷ್ ಬರ್ಮನ್–3.
ಮಹಿಳೆಯರು: ಹಾಫ್ ಮ್ಯಾರಥಾನ್ (21.1 ಕಿ.ಮೀ): ಸುಧಾ ಕಂಡಿ (ಸಮಯ: 2ಗಂಟೆ, 8 ನಿಮಿಷ, 30 ಸೆಕೆಂಡ್)–1, ಮೀರಾ ಅಶೋಕ್–2, ಅರತ್ರಿಕಾ ಪೌಲ್–3; 10 ಕಿ.ಮೀ. ಓಟ: ಎಂ. ವೀಣಾ (ಸಮಯ: 55 ನಿಮಿಷ, 50 ಸೆಕೆಂಡ್)–1, ಆರ್. ರಚನಾ–2, ಎನ್.ಆರ್. ಶೋಭಾ–3.
ಸ್ಪರ್ಧಿಗಳೊಂದಿಗೆ ಯದುವೀರ್ ಓಟ
ಮ್ಯಾರಥಾನ್‌ಗೆ ಚಾಲನೆ ನೀಡಿದ ಯದುವೀರ್ ತಾವೂ ಓಡುವ ಮೂಲಕ ಗಮನಸೆಳೆದರು. ಅವರು 10 ಕಿ.ಮೀ. ಓಟವನ್ನು 1 ಗಂಟೆ 16 ನಿಮಿಷ ಹಾಗೂ 45 ಸೆಕೆಂಡ್‌ಗಳಲ್ಲಿ ತಲುಪಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.