
ಮೈಸೂರು: ಸ್ವಚ್ಛ ನಗರ ನಿರ್ಮಾಣ, ಸ್ವಚ್ಛ ಭಾರತ ಅಭಿಮಾನದ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಇಲ್ಲಿನ ಮಹಾನಗರಪಾಲಿಕೆಯು ರಾಯಚೂರು ನಗರಪಾಲಿಕೆಗೆ ಮೆಂಟರ್ (ಮಾರ್ಗದರ್ಶಕ) ಆಗಿ ಕಾರ್ಯನಿರ್ವಹಿಸುತ್ತಿದೆ.
ಈ ಸಂಬಂಧ ರಾಯಚೂರು ನಗರಪಾಲಿಕೆ ಅಧಿಕಾರಿಗಳಿಗಾಗಿ ಇಲ್ಲಿ ಶುಕ್ರವಾರದಿಂದ ಎರಡು ದಿನಗಳವರೆಗೆ ಹಮ್ಮಿಕೊಂಡಿರುವ ‘ಸ್ವಚ್ಛ ಶೆಹರ್ ಜೋಡಿ’ ಕಾರ್ಯಾಗಾರಕ್ಕೆ ಚಾಲನೆ ನೀಡಲಾಯಿತು. ಎರಡೂ ನಗರಪಾಲಿಕೆ ಅಧಿಕಾರಿಗಳು, ನಗರ ಸ್ವಚ್ಛತೆ, ಘನ ತ್ಯಾಜ್ಯ ನಿರ್ವಹಣೆ ಮೊದಲಾದವುಗಳಿಗೆ ಸಂಬಂಧಿಸಿದ ಅನುಭವ ಹಾಗೂ ಉತ್ತಮ ಕ್ರಮಗಳನ್ನು ಹಂಚಿಕೊಂಡರು.
ಉದ್ಘಾಟಿಸಿದ ಮೈಸೂರು ಮಹಾನಗರಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್, ‘ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಜಾರಿಯಲ್ಲಿರುವ ‘ಸ್ವಚ್ಛ ಶೆಹರ್ ಜೋಡಿ’ ಕಾರ್ಯಕ್ರಮ ನಗರಗಳು ಪರಸ್ಪರ ಅನುಭವ ಹಂಚಿಕೆ ಮಾಡಿಕೊಳ್ಳುವುದಕ್ಕೆ ಸಹಕಾರಿಯಾಗಿದೆ. ಉತ್ತಮ ಕ್ರಮಗಳು ಹಾಗೂ ಕಾರ್ಯತಂತ್ರಗಳನ್ನು ಹಂಚಿಕೊಳ್ಳುವ ಮಹತ್ವದ ವೇದಿಕೆಯಾಗಿದೆ. ಇದರ ಮೂಲಕ ನಗರಾಡಳಿತ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಬಹುದು’ ಎಂದು ತಿಳಿಸಿದರು.
‘ಸ್ವಚ್ಛ ಸರ್ವೇಕ್ಷಣ್–2025ರ ಮಾರ್ಗಸೂಚಿಗಳು ಮತ್ತು ಟೂಲ್‌ಕಿಟ್‌ಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ ಕಾರ್ಯನಿರ್ವಹಿಸಬೇಕು. ಇದು ಸ್ವಚ್ಛ ಸರ್ವೇಕ್ಷಣ್‌ನಲ್ಲಿ ಉತ್ತಮ ಸ್ಥಾನ ಪಡೆಯುವುದಕ್ಕೆ ಅಗತ್ಯವಾಗಿದೆ. ಮೈಸೂರು ನಗರಪಾಲಿಕೆಯು ಮೆಂಟರ್ ನಗರ ಆಗಿದೆ. ಇದರಿಂದಾಗಿ, ರಾಯಚೂರು ನಗರದ ಸಾಧನೆಯು ಮೆಂಟರ್ ನಗರವಾದ ಮೈಸೂರಿನ ಕಾರ್ಯಕ್ಷಮತೆಯನ್ನೂ ಪ್ರತಿಬಿಂಬಿಸುತ್ತದೆ’ ಎಂದು ಹೇಳಿದರು.
‘ಮೂಲದಲ್ಲೇ ತ್ಯಾಜ್ಯ ವಿಂಗಡಣೆ, ಸಂಸ್ಕರಣೆ, ಐಇಸಿ (ಮಾಹಿತಿ, ಶಿಕ್ಷಣ, ಸಂವಹನ) ಚಟುವಟಿಕೆಗಳು ಹಾಗೂ ಮೇಲ್ವಿಚಾರಣೆ ವ್ಯವಸ್ಥೆಗಳನ್ನು ಬಲಪಡಿಸುವ ಅಗತ್ಯವಿದೆ. ಕಾರ್ಯಾಗಾರದಲ್ಲಿ ಪಡೆದ ಜ್ಞಾನವನ್ನು ಕಾಲಬದ್ಧ ಕ್ರಿಯಾಯೋಜನೆಯ ಸಿದ್ಧತೆ ಹಾಗೂ ಅನುಷ್ಠಾನಕ್ಕೆ ಬಳಸಬೇಕು’ ಎಂದು ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.