ಮೈಸೂರು: ‘ಸಿದ್ದರಾಮಯ್ಯ ಮುಖ್ಯಮಂತ್ರಿ ಆದಾಗಲೆಲ್ಲ ಅರಮನೆ ವಿಚಾರದಲ್ಲಿ ಜನರಲ್ಲಿ ಗೊಂದಲ–ಅಪನಂಬಿಕೆ ಮೂಡಿಸುವ ಕೆಲಸ ಮಾಡಿದ್ದಾರೆ’ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ದೂರಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಬೆಂಗಳೂರು ಅರಮನೆ ಆಸ್ತಿ ವಿಚಾರದಲ್ಲಿ ಸರ್ಕಾರ ಸುಗ್ರೀವಾಜ್ಞೆ ತರುವುದು ಸರಿಯಲ್ಲ. ನ್ಯಾಯಾಲಯದ ತೀರ್ಪಿನ ಬಗ್ಗೆ ಗೌರವವಿಲ್ಲವೇ? ಯದುವಂಶದವರನ್ನು ಕೂರಿಸಿ ಸೆಟ್ಲ್ಮೆಂಟ್ ಮಾಡಿಕೊಳ್ಳಬಹುದು’ ಎಂದು ಸಲಹೆ ನೀಡಿದರು.
‘ಮೈಸೂರು ರಾಜವಂಶಸ್ಥರ ಬಗ್ಗೆ ಚೇಷ್ಟೆ ಮಾಡುವುದು, ಕಿರುಕುಳ ಕೊಡುವುದನ್ನು ಸಿದ್ದರಾಮಯ್ಯ ಮಾಡುತ್ತಲೇ ಇರುತ್ತಾರೆ. ರಸ್ತೆ ಹೆಸರು ಬದಲಿಸಿ ತನ್ನ ಹೆಸರಿಡಲು ಹೊರಟಿದ್ದರು. ನಾನು ಡೆಮಾಕ್ರೆಟಿಕ್ ಎನ್ನುವುದು ಬರೀ ತೋರಿಕೆಯ ಮಾತು’ ಎಂದು ಟೀಕಿಸಿದರು.
‘ಮುಡಾ ನಿವೇಶನಗಳ ಹಂಚಿಕೆ ವಿಚಾರದಲ್ಲಿ ಲೋಕಾಯುಕ್ತ ತನಿಖೆ ಪಾರದರ್ಶಕವಾಗಿ ನಡೆದಿಲ್ಲ. ₹5 ಸಾವಿರ ಕೋಟಿಗೂ ಹೆಚ್ಚಿನ ಮೊತ್ತದ ಅಕ್ರಮ ನಡೆದಿದೆ. ಹೀಗಿರುವಾಗ ಕ್ಲೀನ್‌ಚಿಟ್ ನೀಡುವುದು ಎಂದರೆ ಏನು? ಲೋಕಾಯುಕ್ತ ಅಧಿಕಾರಿಗಳನ್ನು ಸರ್ಕಾರವೇ ನೇಮಿಸುವುದರಿಂದ ಅವರು ಅದರ ಕೈಗೊಂಬೆಯಾಗಿಯೇ ಕೆಲಸ ಮಾಡುತ್ತಾರೆ’ ಎಂದರು.
‘ಮುಡಾ ನಿವೇಶನ ಹಗರಣದಲ್ಲಿ ಶಾಸಕ ಜಿ.ಟಿ. ದೇವೇಗೌಡರ ಪಾಲೂ ಇದೆ. ಅದರಿಂದ ಬಚಾವಾಗಲು ಸಿದ್ದರಾಮಯ್ಯ ಅವರನ್ನು ಮೆಚ್ಚಿಸುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. ಅವರು ಜೆಡಿಎಸ್ ಬಿಟ್ಟರೂ ನಷ್ಟವಾಗದು’ ಎಂದರು.
‘ದರೋಡೆಗಳು, ಮೈಕ್ರೋ ಫೈನಾನ್ಸ್ ಹಾವಳಿ ನೋಡಿದರೆ ರಾಜ್ಯದಲ್ಲಿ ಸರ್ಕಾರ ಇಲ್ಲ ಎನಿಸುತ್ತದೆ. ಪರಮೇಶ್ವರ್ಗೆ ಸಬ್ ಇನ್ಸ್ಪೆಕ್ಟರ್ ಅನ್ನು ವರ್ಗಾವಣೆ ಮಾಡುವ ಅಧಿಕಾರವಷ್ಟೇ ಇದೆ. ಉಳಿದ ಅಧಿಕಾರವನ್ನು ಮುಖ್ಯಮಂತ್ರಿಯೇ ನಿಭಾಯಿಸುತ್ತಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.