ADVERTISEMENT

ಮೈಸೂರು ಪೊಲೀಸರ ಕಾರ್ಯಾಚರಣೆ: ಕಾನೂನು ಬಾಹಿರ ಚಟುವಟಿಕೆಗೆ ಕಡಿವಾಣ, ಗಸ್ತು ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 7:23 IST
Last Updated 13 ಅಕ್ಟೋಬರ್ 2025, 7:23 IST
   

ಮೈಸೂರು: ನಗರದಲ್ಲಿ ಎರಡು ಅಪರಾಧ ಕೃತ್ಯಗಳು ನಡೆದ ದೊಡ್ಡಕೆರೆ ವಸ್ತು ಪ್ರದರ್ಶನ ಪ್ರಾಧಿಕಾರದ ಮೈದಾನ ಸೇರಿದಂತೆ ಪಾರ್ಕಿಂಗ್ ತಾಣಗಳು, ಅರಮನೆ ಹಾಗೂ ಸುತ್ತಮುತ್ತಲ ಪ್ರದೇಶ, ಗ್ರಾಮೀಣ ಹಾಗೂ ನಗರ ಬಸ್‌ ನಿಲ್ದಾಣ ಸೇರಿದಂತೆ ವಿವಿಧೆಡೆ ನಗರ ಪೊಲೀಸರು ಗಸ್ತು ಹೆಚ್ಚಿಸಿದ್ದು, ಅನೈತಿಕ ಚಟುವಟಿಕೆ ತಡೆಗೆ ಕಾರ್ಯಾಚರಣೆ ನಡೆಸಿದ್ದಾರೆ. 

ನಗರ ಪೊಲೀಸ್‌ ಆಯುಕ್ತೆ ಸೀಮಾ ಲಾಟ್ಕರ್, ಡಿಸಿಪಿಗಳಾದ ಆರ್.ಎನ್‌. ಬಿಂದುಮಣಿ, ಕೆ.ಎಸ್.ಸುಂದರ್‌ರಾಜ್‌ ಮಾರ್ಗದರ್ಶನದಲ್ಲಿ ಎಸಿಪಿ, ಇನ್‌ಸ್ಪೆಕ್ಟರ್, ಸಬ್‌ ಇನ್‌ಸ್ಪೆಕ್ಟರ್ ನೇತೃತ್ವದಲ್ಲಿ ಸಿಬ್ಬಂದಿ ವಿವಿಧೆಡೆ ಪರಿಶೀಲನೆ ನಡೆಸಿದರು. 

‘ಕಾರ್ಯಾಚರಣೆ ನಿರಂತರವಾಗಿರಲಿದ್ದು, ಸಾರ್ವಜನಿಕರು ಸಹಕರಿಸಬೇಕು. ಅನುಮಾನಾಸ್ಪದ ಚಟುವಟಿಕೆ ನಡೆಯುತ್ತಿದ್ದರೆ, ತಕ್ಷಣವೇ ಮಾಹಿತಿ ನೀಡಬೇಕು. ಮಾಹಿತಿದಾರರ ಹೆಸರನ್ನು ಗೌಪ್ಯವಾಗಿಡಲಾಗುವುದು’ ಎಂದು ನಗರ ಪೊಲೀಸ್‌ ಆಯುಕ್ತೆ ಸೀಮಾ ಲಾಟ್ಕರ್ ಹೇಳಿದ್ದಾರೆ. 

ADVERTISEMENT

ವಿವಿಧೆಡೆ ತಪಾಸಣೆ

ಪೊಲೀಸ್ ರೌಡಿ ಪ್ರತಿಬಂಧಕ‌ದಳದ ಸಿಬ್ಬಂದಿ ಎರಡು ದಿನದಿಂದ ವಿಶೇಷ ಕಾರ್ಯಾಚರಣೆ ಆರಂಭಿಸಿದ್ದು, ಭಾನುವಾರವೂ ಮುಂದುವರಿಯಿತು, ಉದ್ಯಾನ, ಬಾರ್, ವೈನ್ ಸ್ಟೋರ್‌ಗಳು, ಟೀ ಅಂಗಡಿಗಳು, ಹೋಟೆಲ್‌ಗಳು, ಬೀದಿ ಬದಿ ಅಂಗಡಿಗಳು ಸೇರಿದಂತೆ ವಿವಿಧೆಡೆ ತಪಾಸಣೆ ನಡೆಸಿದರು. 

ಕಾರ್ಯಾಚರಣೆಯ ವೇಳೆ, ಶಂಕಿತ ರೌಡಿಗಳು ಮತ್ತು ಸಾರ್ವಜನಿಕರಿಗೆ ತೊಂದರೆ ನೀಡುವ ವ್ಯಕ್ತಿಗಳನ್ನು ಗುರುತಿಸಿ ವಿವಿಧ ಪ್ರಕರಣ ದಾಖಲಿಸಲಾಗಿದ್ದು, 405 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಧೂಮ‍‍ಪಾನ ಮಾಡುತ್ತಿದ್ದ 204 ಮಂದಿ ವಿರುದ್ಧ ಕೋಟ್ಪಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಪೆಟ್ಟಿ ಕೇಸ್ ಹಾಗೂ ಕೆಪಿ ಕಾಯ್ದೆಯಡಿ 487 ಪ್ರಕರಣ ದಾಖಲಾಗಿವೆ. 

ತ್ರಿಪಲ್ ರೈಡಿಂಗ್ ಮಾಡಿದ 54 ಮಂದಿ, ಹೆಲ್ಮೆಟ್‌ ಇಲ್ಲದೇ ಪ್ರಯಾಣ, ವ್ಹೀಲಿಂಗ್, ನಕಲಿ ನಂಬರ್ ಪ್ಲೇಟ್‌ ಇದ್ದ 59 ವಾಹನಗಳನ್ನು ವಶಕ್ಕೆ ಪಡೆಯಲಾಗಿದ್ದು, 33 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.