
ಮೈಸೂರು: ‘ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಿನಲ್ಲಿ ಜಿಲ್ಲೆಯಲ್ಲಿ 1,666 ಸರ್ಕಾರಿ ಶಾಲೆಗಳನ್ನು ಮುಚ್ಚಲಾಗುತ್ತಿದೆ’ ಎಂದು ಆರೋಪಿಸಿ ಭಾನುವಾರ ಇಲ್ಲಿನ ಪುರಭವನ ಆವರಣದಲ್ಲಿ ಪ್ರತಿಭಟನಾ ಸಮಾವೇಶ ನಡೆಸಲಾಯಿತು.
ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆಯ ಮತ್ತು ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ನೇತೃತ್ವದಲ್ಲಿ, ಸರ್ಕಾರದ ವಿರುದ್ಧ ಘೋಷಣೆ ಮೊಳಗಿತು. ‘ಕೆಪಿಎಸ್ ಮ್ಯಾಗ್ನೆಟ್ ನೀತಿ ಸರಿ ಇಲ್ಲ’ ಎಂಬ ಆಕ್ರೋಶ ವ್ಯಕ್ತವಾಯಿತು.
ಎಐಡಿಎಸ್‌ಒ ರಾಜ್ಯ ಉಪಾಧ್ಯಕ್ಷೆ ಚಂದ್ರಕಲಾ ಮಾತನಾಡಿ, ‘ಹಿಂದಿದ್ದ ಬಿಜೆಪಿ ಸರ್ಕಾರ ಸಂಯೋಜನೆ ಹೆಸರಿನಲ್ಲಿ 13,800 ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿತ್ತು. ಈಗಿನ ಕಾಂಗ್ರೆಸ್ ಸರ್ಕಾರ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯಡಿ ರಾಜ್ಯದಾದ್ಯಂತ 40ಸಾವಿರ ಶಾಲೆಗಳನ್ನು ಮುಚ್ಚಲು ಮುಂದಾಗಿದೆ. ಎಲ್ಲಾ ಸರ್ಕಾರಗಳ ಅಂತಿಮ ಗುರಿಯೂ ಸರ್ಕಾರಿ ಶಾಲೆಗಳನ್ನು ಮುಚ್ಚಿ ಬಡ ವಿದ್ಯಾರ್ಥಿಗಳಿಂದ ಶಿಕ್ಷಣವನ್ನು ಕಸಿದುಕೊಳ್ಳುವುದೇ ಆಗಿದೆ’ ಎಂದು ಆರೋಪಿಸಿದರು.
ಕೆಟ್ಟ ಪರಿಸ್ಥಿತಿ ಬಂದಿದೆಯೇ?: ‘ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳನ್ನು ಸರ್ಕಾರವು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್‌ನಿಂದ ₹ 2,500 ಕೋಟಿ ಸಾಲ ಮಾಡಿ ತೆರೆಯುತ್ತಿದೆ. ಖಾಸಗಿ ಬ್ಯಾಂಕ್‌ನಿಂದ ಸಾಲ ಪಡೆದು ಸರ್ಕಾರಿ ಶಾಲೆಗಳನ್ನು ನಡೆಸುವಂಥ ಕೆಟ್ಟ ಪರಿಸ್ಥಿತಿಗೆ ಸರ್ಕಾರ ಬಂದಿದೆಯೇ? ನಾವು ಕಟ್ಟುತ್ತಿರುವ ತೆರಿಗೆ ಸಾಲದೇ?’ ಎಂದು ಕೇಳಿದರು.
‘ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳನ್ನು ಹೊರಗುತ್ತಿಗೆ ನೀಡಿ ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳನ್ನಾಗಿ ಪರಿವರ್ತಿಸುವ ಹುನ್ನಾರವನ್ನು ಸರ್ಕಾರ ನಡೆಸುತ್ತಿದೆ. ಪ್ರತಿ ಕಿಲೋ ಮೀಟರ್ ಒಳಗೊಂದು ಪ್ರಾಥಮಿಕ ಶಾಲೆ ಇರಬೇಕೆನ್ನುವ ಶಿಕ್ಷಣ ಹಕ್ಕು ಕಾಯ್ದೆಯನ್ನು ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಉಲ್ಲಂಘಿಸುತ್ತದೆ’ ಎಂದು ತಿಳಿಸಿದರು.
ಹಿಂಬಾಗಿಲಿನಿಂದ: ನಿವೃತ್ತ ಪ್ರಾಧ್ಯಾಪಕ ಕಾಳಚನ್ನೇಗೌಡ, ‘ಕನ್ನಡ ಶಾಲೆ ಪ್ರತಿ ಗ್ರಾಮದಲ್ಲೂ ಇರಬೇಕು. ಈಗಾಗಲೇ ರಾಜ್ಯದಲ್ಲಿ 62ಸಾವಿರ ಶಿಕ್ಷಕರ ಹುದ್ದೆ ಖಾಲಿ ಇವೆ. 7ಸಾವಿರಕ್ಕೂ ಹೆಚ್ಚು ಏಕೋಪಾಧ್ಯಾಯ ಶಾಲೆಗಳಿವೆ. 23ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆ ಕಟ್ಟಡಗಳು ದುರಸ್ತಿ ಆಗಬೇಕಾಗಿದೆ. ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸದೆ ಸೊರಗುವಂತೆ ಮಾಡಿ, ಹಿಂಬಾಗಿಲಿನಿಂದ ಮುಚ್ಚಲಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಐಕೆಕೆಎಂಎಸ್ ರಾಜ್ಯ ಉಪಾಧ್ಯಕ್ಷ ಎಚ್.ಪಿ. ಶಿವಪ್ರಕಾಶ್, ಎಐಯುಟಿಯುಸಿ ಮುಖಂಡ ಚಂದ್ರಶೇಖರ್ ಮೇಟಿ, ಎಐಎಂಎಂಎಸ್ ನಾಯಕಿ ಸೀಮಾ ಜಿ.ಎಸ್, ಎಐಡಿವೈಒ ಮುಖಂಡ ಸುನೀಲ್ ಟಿ.ಆರ್., ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಬೆಳವಾಡಿ ನಂಜುಂಡಸ್ವಾಮಿ, ದಿವಾಕರ್ ಎಸ್., ಕೆಲ್ಲಹಳ್ಳಿ ಲಲಿತಮ್ಮ, ಹುಸ್ಕೂರು ಪ್ರದೀಪ್, ರಾಂಪುರ ವಿನೋದ್‌ಕುಮಾರ್ ಮಾತನಾಡಿದರು.
ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ನಿತಿನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಪಾಧ್ಯಕ್ಷೆ ಸ್ವಾತಿ, ಪದಾಧಿಕಾರಿಗಳಾದ ಚಂದನ, ಚಂದ್ರಿಕಾ, ಹೇಮ, ದಿಶಾ, ಅಂಜಲಿ, ಅಭಿಷೇಕ್, ನಂದೀಶ್, ವಿವಿಧ ಹಳ್ಳಿಗಳ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಹೋರಾಟಕ್ಕೆ ಸಮಿತಿ ರಚನೆ
‘ಜಿಲ್ಲಾ ಮಟ್ಟದ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ’ ರಚಿಸಲಾಯಿತು. ಸಲಹೆಗಾರರಾಗಿ ರಾಜ್ಯ ರೈತ ಸಂಘದ ಹೊಸಕೋಟೆ ಬಸವರಾಜ್ ಸಾಮಾಜಿಕ ಹೋರಾಟಗಾರ ಉಗ್ರ ನರಸಿಂಹೇಗೌಡ ಕಾಳಚನ್ನೇಗೌಡ ಲತಾ ಮೈಸೂರು ರೈತ ಮುಖಂಡ ಮರಂಕಯ್ಯ ವಿದ್ಯಾಶಂಕರ್ ಹಾಗೂ ಪ್ರೇಮ್ ರಾಜ್ ಅವರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಇಮ್ಮಾವು ಹುಂಡಿ ರಾಜಣ್ಣ ಕಾರ್ಯದರ್ಶಿಯಾಗಿ ಎಐಡಿಎಸ್‌ಒ ಜಿಲ್ಲಾ ಸಮಿತಿಯ ಅಧ್ಯಕ್ಷೆ ಚಂದ್ರಕಲಾ ಹಾಗೂ ಉಪಾಧ್ಯಕ್ಷರಾಗಿ ಚೋರನಹಳ್ಳಿ ಶಿವಣ್ಣ ಹೆಜ್ಜಿಗೆ ಪ್ರಕಾಶ್ ಸೇರಿದಂತೆ 16 ಮಂದಿ ವಿವಿಧ ಹಳ್ಳಿಗಳ 60 ಮಂದಿಯನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
ಹೋರಾಟ ಮಾಡಿದ್ದೆವು...
ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ಮರಂಕಯ್ಯ ‘ನಾವು ಹೋರಾಟ ಮಾಡಿದ ಪರಿಣಾಮ ನಮ್ಮೂರಿನಲ್ಲಿ ಸರ್ಕಾರಿ ಶಾಲೆ ಬಂತು. ಅದನ್ನು ಈಗ ಮುಚ್ಚುತ್ತಿರುವುದು ಖಂಡನೀಯ. ಇರುವ ಶಾಲೆ ಮುಚ್ಚಿ ಕೆ.ಪಿ.ಎಸ್. ಮ್ಯಾಗ್ನೆಟ್ ಶಾಲೆಗಳಿಗೆ ತೆರಳಲು ಮಕ್ಕಳಿಗೆ ಬಸ್ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳುತ್ತಿರುವುದು ಸರ್ಕಾರದ ಬೂಟಾಟಿಕೆ’ ಎಂದು ದೂರಿದರು.
ಎಲ್ಲೆಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಾರೆಯೋ ಅಲ್ಲೆಲ್ಲಾ ಜನರು ಹೋರಾಟ ನಡೆಸಬೇಕು ಹೆಜ್ಜೆಗೆ.ಪ್ರಕಾಶ್ ನಂಜನಗೂಡು, ತಾ. ಘಟಕದ ಪ್ರಧಾನ ಕಾರ್ಯದರ್ಶಿ ರೈತ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.