ADVERTISEMENT

ಮೈಸೂರು | ನಾಡಹಬ್ಬ ದಸರಾ: ರಸ್ತೆ ದುರಸ್ತಿ, ಅಭಿವೃದ್ಧಿಗೆ ₹10 ಕೋಟಿ

ಮಹಾನಗರಪಾಲಿಕೆಯಿಂದ ವಿವಿಧ ಯೋಜನೆ

ಎಂ.ಮಹೇಶ್
Published 8 ಆಗಸ್ಟ್ 2025, 2:41 IST
Last Updated 8 ಆಗಸ್ಟ್ 2025, 2:41 IST
ಮೈಸೂರಿನ ಚಾಮರಾಜ ಒಡೆಯರ್ ವೃತ್ತದ ನೋಟ
ಮೈಸೂರಿನ ಚಾಮರಾಜ ಒಡೆಯರ್ ವೃತ್ತದ ನೋಟ   
ವೃತ್ತ ಪ್ರತಿಮೆಗಳಿಗೆ ಅಲಂಕಾರ | 18 ಉದ್ಯಾನಗಳಿಗೆ ಪಾಲಿಕೆಯಿಂದ ವಿದ್ಯುತ್‌ ದೀಪಾಲಂಕಾರ | ರಾಜಪಥಕ್ಕೆ ಹೊಸ ಮೆರುಗು

ಮೈಸೂರು: ಈ ಬಾರಿಯ ನಾಡಹಬ್ಬ ದಸರಾ ಮಹೋತ್ಸವದ ಸಂದರ್ಭದಲ್ಲಿ ನಗರದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಮಹಾನಗರಪಾಲಿಕೆಯಿಂದ ₹10 ಕೋಟಿ ಮೊತ್ತದ ಯೋಜನೆ ರೂಪಿಸಲಾಗಿದೆ.

ಉತ್ಸವದ ಸಂದರ್ಭದಲ್ಲಿ ಜಿಲ್ಲೆ, ರಾಜ್ಯ, ಹೊರರಾಜ್ಯ, ದೇಶ–ವಿದೇಶಗಳಿಂದ ಸಹಸ್ರಾರು ಮಂದಿ ಭೇಟಿ ನೀಡುತ್ತಾರೆ. ಅವರಿಗೆ ನಗರದಲ್ಲಿನ ನೋಟ ಮುದ ನೀಡುವಂತಾಗಬೇಕು ಎಂಬ ಉದ್ದೇಶದಿಂದ ಪಾಲಿಕೆಯು ಯೋಜಿಸಿದೆ. ಈ ಸಂಬಂಧ ಕ್ರಿಯಾಯೋಜನೆ ರೂಪಿಸಲಾಗಿದ್ದು, ಟೆಂಡರ್‌ ಪ್ರಕ್ರಿಯೆ ಹಂತದಲ್ಲಿದೆ. ಈ ವರ್ಷದ ದಸರಾ ಮಹೋತ್ಸವ ಸೆ.22ರಿಂದ ಅ.2ರವರೆಗೆ ನಡೆಯಲಿದೆ. ಇದಕ್ಕೆ ಪೂರ್ವಭಾವಿಯಾಗಿ ಕ್ರಿಯಾಯೋಜನೆ ಅಂತಿಮಗೊಳಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ವಿಧಾನಸೌಧದಲ್ಲಿ ನಡೆದಿದ್ದ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿತ್ತು. ಪ್ರಮುಖ ರಸ್ತೆಗಳ ಅಭಿವೃದ್ಧಿ ಸೇರಿದಂತೆ ಪ್ರಮುಖ ಕೆಲಸಗಳಿಗೆ ಆದ್ಯತೆ ಕೊಡಬೇಕು ಎಂದು ಮುಖ್ಯಮಂತ್ರಿ ಸೂಚಿಸಿದ್ದರು.

ನಗರದ ವಿವಿಧೆಡೆ ಹಾಗೂ ಹೊರವಲಯದಲ್ಲಿನ ರಸ್ತೆಗಳು ಹಾಳಾಗಿವೆ. ಕೆಲವೆಡೆ ಗುಂಡಿಗಳಿಂದ ಕೂಡಿವೆ. ಇವುಗಳ ದುರಸ್ತಿಗೆ ಯೋಜಿಸಲಾಗಿದೆ.

ADVERTISEMENT

ಬ್ಯಾರಿಕೇಡಿಂಗ್:

ವಿಜಯದಶಮಿ ದಿನದಂದು ಜಂಬೂಸವಾರಿ ಮೆರವಣಿಗೆ ಸಾಗುವ ‘ರಾಜಪಥ’ದಲ್ಲಿ ಅಂದರೆ ಅರಮನೆ ಬಳಿಯಿಂದ ಬನ್ನಿಮಂಟಪದವರೆಗೆ ಬ್ಯಾರಿಕೇಡ್‌ ಹಾಕಲು ₹ 1 ಕೋಟಿ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಮೈಸೂರು– ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಂದರೆ ದಂಡಿನ ಮಾರಮ್ಮ ದೇವಸ್ಥಾನದಿಂದ ಎಲ್‌ಐಸಿ ವೃತ್ತದವರೆಗೆ 1.3 ಕಿ.ಮೀ.ವರೆಗೆ ಒಳಚರಂಡಿ ಮಾರ್ಗ ನಿರ್ಮಾಣ ನಡೆಯಲಿದೆ.

ರಾಜಪಥದಲ್ಲಿ ಲೇನ್ ಮಾರ್ಕಿಂಗ್‌ ಹಾಗೂ ಕರ್ಬ್‌ ಸ್ಟೋನ್‌ ಪೇಂಟಿಂಗ್‌ಗೆ ₹ 40 ಲಕ್ಷ ಬಳಸಲಾಗುತ್ತಿದೆ. ಕೆ.ಆರ್‌. ವೃತ್ತದಿಂದ ಬಸವೇಶ್ವರ ವೃತ್ತ, ಆಲ್ಬರ್ಟ್‌ ವಿಕ್ಟರ್‌ ರಸ್ತೆಯಿಂದ ಹಾರ್ಡಿಂಗ್ ವೃತ್ತದವರೆಗೆ ಸೇರಿದಂತೆ ಮುಖ್ಯ ರಸ್ತೆಗಳಲ್ಲಿ ವಿಭಜಕ ಹಾಗೂ ಕರ್ಬ್‌ ಸ್ಟೋನ್ ಪೇಟಿಂಗ್‌ ₹ 50 ಲಕ್ಷ ವಿನಿಯೋಗಿಸಲಾಗುತ್ತಿದೆ. ಬೋಗಾದಿ ರಸ್ತೆ, ಹುಣಸೂರು ರಸ್ತೆ, ಕೆಆರ್‌ಎಸ್‌ ರಸ್ತೆ, ಮಾನಂದವಾಡಿ ರಸ್ತೆ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿನ ಅಭಿವೃದ್ಧಿ ಕಾರ್ಯವನ್ನೂ ಕೈಗೆತ್ತಿಕೊಳ್ಳಲಾಗುತ್ತಿದೆ. ಬೋಗಾದಿ ರಸ್ತೆ, ಕುವೆಂಪುನಗರದ ವಿಶ್ವಮಾನವ ಜೋಡಿ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನೂ ಸೇರಿಸಿಕೊಳ್ಳಲಾಗಿದೆ. ಮಾನಂದವಾಡಿ ರಸ್ತೆಯಲ್ಲಿ ಗುಂಡಿ ಮುಚ್ಚುವ ಕೆಲಸ ನಡೆಯಲಿದೆ.

ಈ ಬಾರಿ ಜಾಸ್ತಿ:

‘ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಸಲ ಜಾಸ್ತಿ ಅನುದಾನದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳುತ್ತಿದ್ದೇವೆ. 8ರಿಂದ 10 ಪ್ರಮುಖ ರಸ್ತೆಗಳಲ್ಲಿ, ಎಲ್ಲೆಲ್ಲಿ ತುಂಬಾ ಹಾಳಾಗಿದೆಯೋ ಅಂತಹ ಕಡೆಗಳಲ್ಲಿ ಡಾಂಬರೀಕರಣ ಕಾಮಗಾರಿ ನಡೆಸಲಾಗುವುದು. ₹ 2.50 ಕೋಟಿ ಹೆಚ್ಚು ಮೊತ್ತವನ್ನು ರಸ್ತೆಗಳ ಹೆಚ್ಚು ಗುಂಡಿ ಮುಚ್ಚಲೆಂದೇ ಬಳಸಲಾಗುವುದು. ಪಾದಚಾರಿ ಮಾರ್ಗಗಳ ದುರಸ್ತಿಗೂ ಕ್ರಮ ಕೈಗೊಳ್ಳಲಾಗಿದೆ’ ಎಂದು ಮಹಾನಗರಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸೆಸ್ಕ್‌ನಿಂದ ಮುಖ್ಯ ರಸ್ತೆಗಳಿಗೆ ವಿದ್ಯುತ್‌ ದೀಪಾಲಂಕಾರ ಮಾಡಲಾಗುತ್ತದೆ. ಆದರೆ, ಪಾಲಿಕೆಯಿಂದ ಕೆಲವು ಒಳರಸ್ತೆಗಳು ಹಾಗೂ ದೊಡ್ಡದಾದ ಒಟ್ಟು 18 ಉದ್ಯಾನಗಳಿಗೆ ವಿದ್ಯುತ್ ದೀಪಾಲಂಕಾರ ಕೈಗೊಳ್ಳಲಾಗುವುದು. ಮುಖ್ಯ ಕಚೇರಿಗೆ ಶಾಶ್ವತ ವಿದ್ಯುತ್ ದೀಪಾಲಂಕಾರದ ವ್ಯವಸ್ಥೆ ಮಾಡಲಾಗಿದ್ದು, ಅದನ್ನು ದಸರಾ ಸಂದರ್ಭದಲ್ಲಿ ಉದ್ಘಾಟಿಸಲಾಗುವುದು’ ಎಂದು ಹೇಳಿದರು.

ನಗರದ ಪ್ರಮುಖ ವೃತ್ತಗಳನ್ನು ಆಕರ್ಷಿಸುವಂತೆ ಮಾಡಲು ದುರಸ್ತಿ ಬಣ್ಣದಿಂದ ಸಿಂಗರಿಸುವುದು ಮೊದಲಾದ ಕಾಮಗಾರಿ ಕೈಗೊಳ್ಳಲಾಗುವುದು
ಶೇಖ್‌ ತನ್ವೀರ್ ಆಸೀಫ್ ಆಯುಕ್ತ ಮಹಾನಗರಪಾಲಿಕೆ ಮೈಸೂರು

‘ಸ್ಚಚ್ಛತೆಗೆ ಹೆಚ್ಚುವರಿಯಾಗಿ 500 ಮಂದಿ’

‘ದಸರಾ ಸಂದರ್ಭದಲ್ಲಿ ಸ್ವಚ್ಛತೆಗೆ ಸಂಬಂಧಿಸಿದಂತೆ ಹೆಚ್ಚುವರಿಯಾಗಿ 500 ಮಂದಿಯನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದ್ದು ಇದಕ್ಕೆ ₹ 50 ಲಕ್ಷ ಪಡೆಯಲಾಗಿದೆ. ಕಾರ್ಯಕ್ರಮಗಳ ಸ್ಥಳಗಳಲ್ಲಿ ಹಾಗೂ ವಿಜಯದಶಮಿ ಮೆರವಣಿಗೆ ದಿನದಂದು 180 ಮೊಬೈಲ್‌ ಶೌಚಾಲಯಗಳ ವ್ಯವಸ್ಥೆ ಮಾಡಲಾಗುವುದು. ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಸಿದ್ಧತೆ ಕೈಗೊಳ್ಳಲಾಗುತ್ತಿದೆ’ ಎಂದು ಆಯುಕ್ತ ಶೇಖ್‌ ತನ್ವೀರ್‌ ಆಸೀಫ್ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.