
ಜೈಲು (ಪ್ರಾತಿನಿಧಿಕ ಚಿತ್ರ)
ಮೈಸೂರು: ದರೋಡೆ ಪ್ರಕರಣದ ಆರೋಪ ಸಾಬೀತಾದ ಕಾರಣ ಆರ್.ಅವಿನಾಶ್, ಅಭಿ, ಎಚ್.ನವೀನ್ ಕುಮಾರ್‌ಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಿ 7ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಆದೇಶಿದೆ.
ಸರಸ್ವತಿಪುರಂನ ಕಾಮಾಕ್ಷಿ ಆಸ್ಪತ್ರೆಯ ರಸ್ತೆಯ 12ನೇ ಅಡ್ಡರಸ್ತೆ, 5ನೇ ಮುಖ್ಯ ರಸ್ತೆಯಲ್ಲಿ ಸುಮುಖ್ ಪಿ.ಶಾಸ್ತ್ರಿ ಕುಟುಂಬದೊಂದಿಗೆ ವಾಸಿಸುತ್ತಿದ್ದರು. ಆ ಮನೆಗೆ 2021ರ ಮಾರ್ಚ್ 17 ರಂದು ಆರ್.ಅವಿನಾಶ್, ಎಚ್.ನವೀನ್ ಕುಮಾರ್, ಜೆ.ರವಿ, ಸತೀಶ್, ಉಮೇಶ್ ನುಗ್ಗಿ ಚಾಕು ತೋರಿಸಿ ಮನೆಯವರನ್ನು ಬೆದರಿಸಿ 70 ಗ್ರಾಂ ಚಿನ್ನದ ಸರ, 30 ಗ್ರಾಂ ಚಿನ್ನದ ಬಳೆ, ₹10 ಲಕ್ಷ ನಗದು ತೆಗೆದುಕೊಂಡು ಪರಾರಿಯಾಗಿದ್ದರು.
ಸರಸ್ವತಿಪುರಂ ಠಾಣೆಯ ಅಂದಿನ ಇನ್‌ಸ್ಪೆಕ್ಟರ್ ಸಿ.ತಿಮ್ಮರಾಜು ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಧೀಶ ಎಂ.ರಮೇಶ್ ವಿಚಾರಣೆ ನಡೆಸಿದಾಗ ಆರ್.ಅವಿನಾಶ್, ಅಭಿ, ಎಚ್.ನವೀನ್ ಕುಮಾರ್ ವಿರುದ್ಧದ ಆರೋಪ ಸಾಬೀತಾದ ಕಾರಣ ಏಳು ವರ್ಷ ಜೈಲು ಶಿಕ್ಷೆ ಹಾಗೂ ₹10 ಸಾವಿರ ದಂಡ ವಿಧಿಸಿ ಆದೇಶಿಸಿದ್ದಾರೆ. ಎನ್.ಬಿ.ವಿಜಯಲಕ್ಷ್ಮಿ ವಾದ ಮಂಡಿಸಿದ್ದಾರೆ.
ಗಾಂಜಾ ಪ್ರಕರಣ: ಅಪರಾಧಿಗೆ 3 ವರ್ಷ ಜೈಲು ಶಿಕ್ಷೆ
ಮೈಸೂರು: ಗಾಂಜಾ ಪ್ರಕರಣದ ಆರೋಪ ಸಾಬೀತಾದ ಕಾರಣ ಪಿರಿಯಾಪಟ್ಟಣ ತಾಲ್ಲೂಕು ಆಯರಬೀಡು ಗ್ರಾಮದ ಅಜೀಜ್ ಅಲಿಯಾಸ್ ಅಜಿತ್‌ಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿ 7ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಆದೇಶಿಸಿದೆ.
ಅಜೀಜ್ ಪಿರಿಯಾಪಟ್ಟಣದಲ್ಲಿ ಭೋಗ್ಯಕ್ಕೆ ಪಡೆದ ಜಮೀನಿಗೆ 2023ರ ಜುಲೈ 30ರಂದು ಪೊಲೀಸರು ದಾಳಿ ನಡೆಸಿದ್ದು, ಆ ಜಾಗದಲ್ಲಿ ಆತ ಗಾಂಜಾ ಗಿಡ ಬೆಳೆದು, ಸಾರ್ವಜನಿಕರಿಗೆ ಮಾರಾಟ ಮಾಡಲು ಗಿಡಗಳನ್ನು ಕಿತ್ತು ಶೆಡ್‌ನಲ್ಲಿ ಇಟ್ಟಿರುವುದು ಪತ್ತೆಯಾಗಿತ್ತು. ಬೈಲಕುಪ್ಪೆ ಠಾಣೆಯ ಎಸ್‌ಐ ಡಿ.ಎನ್.ಅಜಯ್ ಕುಮಾರ್ ವಿಚಾರಣೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ನ್ಯಾಯಾಧೀಶ ಎಂ.ರಮೇಶ್ ವಿಚಾರಣೆ ನಡೆಸಿ ಆರೋಪಿ ವಿರುದ್ಧದ ಆರೋಪ ಸಾಬೀತಾದ ಕಾರಣ ಮೂರು ವರ್ಷ ಜೈಲು ಹಾಗೂ ₹60 ಸಾವಿರ ದಂಡ ವಿಧಿಸಿ ಆದೇಶಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.