
ಮೈಸೂರು: ಈ ವಾರಾಂತ್ಯಕ್ಕೆ ರುಚಿಯಾದ ಊಟದ ಜೊತೆಗೆ ಶಾಪಿಂಗ್, ಮಕ್ಕಳಿಗೆ ಆಟ, ಸಂಗೀತದ ರಸದೌತಣ ಸವಿಯಬಹುದು.
ಹೌದು, ಇಲ್ಲಿನ ಮಹಾರಾಜ ಕಾಲೇಜು ಮೈದಾನದಲ್ಲಿ ಮಹಿಳೆಯರು ಹಾಗೂ ಉದ್ಯಮಶೀಲತೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಫೆ.6ರಿಂದ 8ರವರೆಗೆ ಆಯೋಜಿಸಿರುವ ಮೈಸೂರು ಸಂತೆಯಲ್ಲಿ ಕುಟುಂಬ, ಸ್ನೇಹಿತರ ಜೊತೆ ಸಮಯ ಕಳೆಯಲು ವೇದಿಕೆ ಸೃಷ್ಟಿಯಾಗಿದೆ. ಬಿಗ್‌ಬಾಸ್ ಸ್ಪರ್ಧಿ ಜಾನ್ವಿ ಮೈಸೂರು ಸಂತೆಗೆ ಚಾಲನೆ ನೀಡಿದರು.
ಸುಮಾರು 125ಕ್ಕೂ ಹೆಚ್ಚು ಮಳಿಗೆಗಳಲ್ಲಿ ಎಲೆಕ್ಟ್ರಾನಿಕ್ ಉಪಕರಣ, ಆಹಾರ ಮಳಿಗೆಗಳು, ಆಲಂಕಾರಿಕ ವಸ್ತ್ರಗಳು, ವಿಶೇಷವಾಗಿ ಮಕ್ಕಳ ಆಟಿಕೆಗಳು, ಕಾರು, ಬೈಕ್ ಪ್ರದರ್ಶನ ಮೈಸೂರು ಸಂತೆಯಲ್ಲಿ ಆಕರ್ಷಿಸುತ್ತಿವೆ. ಮಹಿಳೆಯರಿಗೆ ಸೀರೆಯಿಂದ ಹಿಡಿದು ವಿವಿಧ ವಸ್ತ್ರಗಳು, ಆಭರಣಗಳು, ವ್ಯಾನಿಟಿ ಬ್ಯಾಗ್, ಸುಗಂಧ ದ್ರವ್ಯಗಳು ದೊರೆಯುತ್ತವೆ. ಜೊತೆಗೆ ಖಾದಿ ಬಂಡಾರ್‌ನಲ್ಲಿ ವೈವಿಧ್ಯಮಯ ಬಟ್ಟೆಗಳು, ಪೂಜಾ ಸಾಮಗ್ರಿಗಳು ಲಭ್ಯವಿವೆ.
ಉತ್ತರ ಕರ್ನಾಟಕದ ಜೋಳದ ರೊಟ್ಟಿ, ಕರದಂಟು, ದಾವಣಗೆರೆಯ ಬೆಣ್ಣೆ ಮುರುಕು, ಮೈಸೂರಿನ ದೊನ್ನೆ ಬಿರಿಯಾನಿ, ಮೈಲಾರಿ ಹೋಟೆಲ್ ದೋಸೆ, ರಮ್ಯಾ ರೆಸ್ಟೊರಂಟ್‌ನ ಕ್ಯಾರೆಟ್ ಹಲ್ವಾ, ಮೈಸೂರು ಬಜ್ಜೀಸ್, ರಾಗಿ ಪಾಪಡ್, ಬಾಯಲ್ಲಿ ನೀರೂರಿಸುತ್ತಿವೆ.
ಇದಲ್ಲದೇ ಪ್ರತಿ ದಿನ ಸಂಜೆ 6ರಿಂದ ‘ಗಾನಗಹನ’, ‘ಸ್ವರಾಗ್’ ಹಾಗೂ ‘ಸ್ವರಾಗ’ ತಂಡಗಳು ಕನ್ನಡ ಗೀತೆಗಳ ಗಾಯನ ನಡೆಸಿಕೊಡಲಿವೆ.
‘ಮೊದಲ ದಿನ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮಹಿಳೆಯರು ಹೆಚ್ಚಾಗಿ ವಸ್ತುಗಳನ್ನು ಖರೀದಿಸುತ್ತಿದ್ದಾರೆ. 60 ಪ್ರವೇಶ ದರವಿದೆ’ ಎಂದು ಕಾರ್ಯಕ್ರಮದ ಆಯೋಜಕಿಯರಲ್ಲಿ ಒಬ್ಬರಾದ ಪೂಜಾ ಜೋಶಿ ಹೇಳಿದರು.
‘ಮೈಸೂರು ಖುಷಿ ಕೊಡುವ ನಗರ’
ಮೈಸೂರು ಸಂತೆಗೆ ಚಾಲನೆ ನೀಡಿದ ಬಿಗ್ ಬಾಸ್ ಸ್ಪರ್ಧಿ ಜಾನ್ವಿ ‘ಮೈಸೂರು ಎಲ್ಲರಿಗೂ ಇಷ್ಟವಾಗುವ ನಗರ ತಂಪು ಸ್ವಚ್ಛ ನಗರ ಸಂಸ್ಕೃತಿ ಪರಂಪರೆಯನ್ನು ಹೊತ್ತು ನಿಂತಿರುವ ನಗರ. ಮೈಸೂರು ಹೆಸರಿನಲ್ಲಿ ಮಲ್ಲಿಗೆ ದೋಸೆ ಮೈಸೂರು ಪಾಕ್. ವಿವಿಧ ವಿಚಾರಗಳಲ್ಲಿ ಪ್ರಖ್ಯಾತಿ ಪಡೆದಿದೆ. ಹೆಣ್ಣು ಮಕ್ಕಳಿಗೆ ಹೆಚ್ಚು ಮಳಿಗೆಗಳು ಇವೆ. ಖಾದ್ಯಗಳಿಗೆ ಇದು ಪ್ರಖ್ಯಾತಿ. ನಾನು ಬಿಗ್‌ಬಾಸ್‌ನಲ್ಲಿ ಇದ್ದಾಗ ಅದರ ಥೀಮ್ ಇದ್ದುದು ಮೈಸೂರು ಅರಮನೆಯ ರೀತಿ. ಒಂದಲ್ಲ ಒಂದು ರೀತಿಯಲ್ಲಿ ಮೈಸೂರು ಕನೆಕ್ಟ್ ಆಗುತ್ತದೆ. ಒಂದೇ ಸೂರಿನಲ್ಲಿ ಶಾಪಿಂಗ್ ಸೇರಿ ಎಲ್ಲವನ್ನು ಮುಗಿಸಬಹುದು’ ಎಂದರು.
‘ನಾನು ನಟಿಸುತ್ತಿರುವ ‘ಯುವ ಸರ್ಕಾರ್’ ಸಿನಿಮಾ ಫೆ. 12ಕ್ಕೆ ಟೀಸರ್ ಬಿಡುಗಡೆಯಾಗಲಿದ್ದು ಏಪ್ರಿಲ್ ತಿಂಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ’ ಎಂದು ಹೇಳಿದರು. ಆರ್ಗ್ಯಾನಿಕ್ ಮಂಡ್ಯ ಸಂಸ್ಥಾಪಕ ಮಧು ಚಂದನ್ ಆರ್.ವಿ. ವಿಶ್ವವಿದ್ಯಾಲಯದ ನಿರ್ದೇಶಕ ಪ್ರೊ.ಉನಿಯಾಲ್ ಗ್ಲೋಬಲ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಜಯಚಂದ್ರ ರಾಜು ಆಯೋಜಕರಾದ ಭರತ್‌ಗೌಡ ಕಾರ್ತಿಕ್ ಮಹೇಶ್ ಸ್ಮಿತಾ ಬಾಲು ಸ್ನೇಹಲ್ ಇಗೂರ್ ರಮ್ಯಾ ಗೌಡ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.