
ಮೈಸೂರು: ಮಕ್ಕಳ ಸುರಕ್ಷತೆಗಾಗಿ ಸರ್ಕಾರಿ ಬಸ್‌ನಲ್ಲೇ ಪ್ರವಾಸ ತೆರಳಬೇಕು ಎಂದು ಶಿಕ್ಷಣ ಇಲಾಖೆ ಕಡ್ಡಾಯ ನಿಯಮವನ್ನು ಶಾಲೆಗಳು ಗಂಭೀರವಾಗಿ ಪರಿಗಣಿಸಿಲ್ಲ ಎಂಬುದರ ಕಡೆಗೆ ನಗರದ ತರಳಬಾಳು ಶಾಲೆಯ ಪ್ರವಾಸ ಗಮನ ಸೆಳೆದಿದೆ.
ಪ್ರವಾಸ ತೆರಳಲು ಶಿಕ್ಷಣ ಇಲಾಖೆಯು 2022–23ರಲ್ಲೇ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿವೆ. ಆದರೆ ಅವುಗಳನ್ನು ಮೀರಿ ಕೆಲವು ಸಂಸ್ಥೆಗಳು ಪ್ರವಾಸ ತೆರಳುತ್ತಿವೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಅಥವಾ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆ (ಕೆಎಸ್‌ಟಿಡಿಸಿ)ಯ ವಾಹನಗಳಲ್ಲೇ ಪ್ರವಾಸಕ್ಕೆ ತೆರಳಬೇಕು. ಅನಧಿಕೃತವಾಗಿ ಖಾಸಗಿ ಹಾಗೂ ಮಿನಿ ಬಸ್‌ಗಳಲ್ಲಿ ತೆರಳಬಾರದು ಎಂದು ಇಲಾಖೆ ಸ್ಪಷ್ಟ ಸೂಚನೆ ನೀಡಿದ್ದರೂ ತರಳಬಾಳು ಶಾಲೆ ಖಾಸಗಿ ಬಸ್‌ನಲ್ಲಿ ಪ್ರವಾಸವನ್ನು ಆಯೋಜಿಸಿತ್ತು. ಈ ಬಗ್ಗೆ ಪೋಷಕರೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಖಾಸಗಿ ಬಸ್‌ನಲ್ಲಿ ಪ್ರಯಾಣಿಸಿ ಮೃತಪಟ್ಟ ಶಾಲಾ ಬಾಲಕನ ಕುಟುಂಬಕ್ಕೆ ಈಗ ವಿಮೆಯ ಸೌಲಭ್ಯವೂ ದೊರಕದಂತಾಗಿದೆ.
‘ಸರ್ಕಾರಿ ಬಸ್‌ನಲ್ಲಿ ಪ್ರತಿ ವಿದ್ಯಾರ್ಥಿಗೆ ₹100 ಹೆಚ್ಚುವರಿಯಾಗಿ ಪಡೆಯುತ್ತಾರೆ. ಇದರಿಂದ ವಿಮೆ ದೊರೆಯುತ್ತದೆ. ಒಟ್ಟು ₹ 10 ಲಕ್ಷ ವಿಮೆ ಪರಿಹಾರ ದೊರೆಯುತ್ತದೆ. ಉಳಿದಂತೆ ನ್ಯಾಯಾಲಯದ ಮಾರ್ಗದರ್ಶನದಂತೆ ಪರಿಹಾರ ನೀಡುತ್ತಾರೆ. ಖಾಸಗಿ ಬಸ್‌ಗಳ ದಾಖಲೆಗಳ ಬಗ್ಗೆ ತಿಳಿದಿರುವುದಿಲ್ಲ. ಹೀಗಾಗಿ ಸರ್ಕಾರಿ ವ್ಯವಸ್ಥೆ ಬಳಸಿಕೊಳ್ಳಲು ಆಯುಕ್ತರು ಈ ಹಿಂದೆಯೇ ಸುತ್ತೋಲೆ ಹೊರಡಿಸಿದ್ದಾರೆ’ ಎಂದು ಡಿಡಿಪಿಐ ಉದಯಕುಮಾರ್ ಡಿ. ‘ಪ್ರಜಾವಾಣಿ’ಗೆ ತಿಳಿಸಿದರು.
‘ಪ್ರವಾಸ ಕೈಗೊಳ್ಳುವ ಖಾಸಗಿ ಶಾಲೆಗಳು, ಶಾಲಾ ಮಾನ್ಯತೆಯನ್ನು ಕಡ್ಡಾಯವಾಗಿ ನವೀಕರಿಸಬೇಕು. ಶಾಲಾ ದಿನಗಳಂದು ಪ್ರವಾಸ ಕೈಗೊಂಡರೆ ಶನಿವಾರ ಅಥವಾ ಭಾನುವಾರ ಶಾಲೆ ನಡೆಸಿ ಬಾಕಿ ಉಳಿದ ಪಠ್ಯ ಪೂರ್ಣಗೊಳಿಸಬೇಕು. ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ಸ್ಥಳಗಳನ್ನು ಆಯ್ಕೆ ಮಾಡಬೇಕು. ಪೋಷಕರ ಒಪ್ಪಿಗೆ ಪಡೆದ ವಿದ್ಯಾರ್ಥಿಗಳನ್ನಷ್ಟೇ ಪ್ರವಾಸಕ್ಕೆ ಕರೆದೊಯ್ಯಬೇಕು ಎಂದು ನಿಯಮ ರೂಪಿಸಲಾಗಿದೆ’ ಎಂದು ಮಾಹಿತಿ ನೀಡಿದರು.
‘ಶಾಲಾ ಮಟ್ಟದ ಮುಂಜಾಗ್ರತೆಯ ಹೊರತಾಗಿ ಪೋಷಕರೂ ಈ ಬಗ್ಗೆ ತಿಳಿದುಕೊಳ್ಳಬೇಕು. ಮಕ್ಕಳು ತೆರಳುವ ಬಸ್ ಬಗ್ಗೆ ಎಚ್ಚರವಹಿಸಬೇಕು’ ಎಂದು ಸಲಹೆ ನೀಡಿದರು.
ಪ್ರವಾಸಕ್ಕೆ ಸರ್ಕಾರಿ ಬಸ್ ಬಳಸಿ ಇಲಾಖೆ ಸುತ್ತೋಲೆ ಪಾಲಿಸಿ
‘ಮಕ್ಕಳ ಸುರಕ್ಷತೆಗೆ ಆದ್ಯತೆ’
‘ಇಲಾಖೆಯು ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡುತ್ತಿದ್ದು ಜಿಲ್ಲೆಯ ಎಲ್ಲಾ ಶಾಲೆಗಳಿಗೂ ಸುತ್ತೋಲೆ ಕಳಿಸಲಾಗಿದೆ. ಪ್ರವಾಸ ತೆರಳುವವರ ಮಾಹಿತಿ ಸಂಗ್ರಹಿಸಲಾಗುತ್ತಿದೆ. ತರಳಬಾಳು ಶಾಲೆಯಿಂದಲೂ ಅನುಮತಿ ಪಡೆಯದೆ ಪ್ರವಾಸ ತೆರಳಿದ್ದರು. ಈ ಬಗ್ಗೆ ಮುಖ್ಯಶಿಕ್ಷಕಿಗೆ ನೋಟಿಸ್ ಜಾರಿಗೊಳಿಸಿದ್ದು ಉತ್ತರ ಬಂದ ಬಳಿಕ ಕ್ರಮವಹಿಸುತ್ತೇವೆ’ ಎಂದು ಡಿಡಿಪಿಐ ಉದಯಕುಮಾರ್ ತಿಳಿಸಿದರು.
‘ಮೃತ ಬಾಲಕನ ಕುಟುಂಬಕ್ಕೆ ₹30 ಲಕ್ಷ ಪರಿಹಾರ’
ಮೈಸೂರು: ‘ಶಾಲಾ ಶೈಕ್ಷಣಿಕ ಪ್ರವಾಸದ ವೇಳೆ ಬಸ್ ಉರುಳಿ ಬಿದ್ದು, ಮೃತಪಟ್ಟ ಬಾಲಕನ ಕುಟುಂಬಕ್ಕೆ ₹30 ಲಕ್ಷ ಪರಿಹಾರ ಹಾಗೂ ಗಾಯಗೊಂಡ ವಿದ್ಯಾರ್ಥಿಗಳ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ತರಳಬಾಳು ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಭರಿಸಲಿದೆ’ ಎಂದು ಶಾಸಕ ಟಿ.ಎಸ್. ಶ್ರೀವತ್ಸ ತಿಳಿಸಿದರು.
ತರಳಬಾಳು ಶಾಲೆಯಿಂದ ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದ ಬಸ್ ಹೊನ್ನಾವರದಲ್ಲಿ ಅಪಘಾತಕ್ಕೀಡಾಗಿ ಒಬ್ಬ ವಿದ್ಯಾರ್ಥಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದರು. ಈ ಬಗ್ಗೆ ಶಾಲೆಯ ಆಡಳಿತ ಮಂಡಳಿ ಹಾಗೂ ಪೋಷಕರೊಂದಿಗೆ ಶಾಸಕರಾದ ಟಿ.ಎಸ್.ಶ್ರೀವತ್ಸ ಮತ್ತು ಕೆ.ಹರೀಶ್‌ಗೌಡ ಸೋಮವಾರ ಸಭೆ ನಡೆಸಿದರು.
‘ಪವನ್ ಬಡ ಕುಟುಂಬದ ವಿದ್ಯಾರ್ಥಿಯಾಗಿದ್ದು, ಪರಿಹಾರಧನದೊಂದಿಗೆ ಕುಟುಂಬಕ್ಕೆ ಜನವರಿಯಲ್ಲಿ ಆಶ್ರಯ ಯೋಜನೆಯಡಿ ಮನೆ ಅಥವಾ ನಿವೇಶನ ನೀಡಲಾಗುವುದು. ನಾವು ಏನೇ ನೀಡಿದರೂ ತಂದೆ–ತಾಯಿಗೆ ಮಗನನ್ನು ಕೊಡಲು ಸಾಧ‌್ಯವಿಲ್ಲ’ ಎಂದರು.
‘ಶಾಲೆಯಿಂದ ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುವಾಗ ಸರ್ಕಾರದ ಮಾರ್ಗಸೂಚಿ ಪಾಲಿಸಬೇಕು. ಈ ಶಾಲೆಯವರು ಸರ್ಕಾರದ ನಿಯಮಗಳನ್ನು ಪಾಲಿಸಿಲ್ಲ ಎಂಬುದು ಗೊತ್ತಾಗಿದೆ. ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರವಾಸಕ್ಕೆ ಕರೆದುಕೊಂಡು ಹೋಗಬೇಕು ಎಂಬ ನಿಯಮವಿದೆ. ಈ ನಿಯಮ ಪಾಲನೆ ಆಗಿಲ್ಲ. ಸಂಸ್ಥೆಯ ಲೋಪದೋಷಗಳೂ ಇವೆ. ಈ ಬಗ್ಗೆ ಇಲಾಖೆಯ ಅಧಿಕಾರಿಗಳು ಕ್ರಮವಹಿಸುತ್ತಾರೆ’ ಎಂದು ತಿಳಿಸಿದರು.
‘ಸರ್ಕಾರಿ ಬಸ್‌ನಲ್ಲಿ ಹೋಗಿದ್ದರೆ ₹10 ಲಕ್ಷ ಮತ್ತು ನ್ಯಾಯಾಲಯದ ತೀರ್ಮಾನದಂತೆ ಪರಿಹಾರ ಸಿಗುತ್ತಿತ್ತು. ಮಣಿಪಾಲ್ ಆಸ್ಪತ್ರೆಯಲ್ಲಿರುವ ಗಾಯಾಳುಗಳು ಅಪಾಯದಿಂದ ಪಾರಾಗಿದ್ದಾರೆ’ ಎಂದು ಹೇಳಿದರು.
ಶಾಸಕ ಕೆ.ಹರೀಶ್ ಗೌಡ ಮಾತನಾಡಿ, ‘ಈ ಘಟನೆಗೆ ಚಾಲಕನ ಅಜಾಗರೂಕತೆ ಕಾರಣವಾಗಿದೆ. ಶಾಲಾ ಆಡಳಿತ ಮಂಡಳಿ ಜೊತೆ ಸಭೆ ಮಾಡಿದ್ದೇವೆ. ಮಂಡಳಿ ಉತ್ತಮ ಸ್ಪಂದನೆ ನೀಡಿದೆ. ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ಶಾಸಕ ಶ್ರೀವತ್ಸ ಮಾನವೀಯತೆಯಿಂದ ಆಶ್ರಯ ಯೋಜನೆಯಡಿ ಮನೆ ನೀಡುವ ಭರವಸೆ ನೀಡಿದ್ದಾರೆ. ಹೊನ್ನಾವರದ ಶಾಸಕ ಹಾಗೂ ಸಚಿವರಾದ ಮಂಕಾಳೆ ವೈದ್ಯ ಅವರ ಜೊತೆ ಮಾತನಾಡಿದ್ದೇನೆ. ಅವರ ಪುತ್ರಿ ಬೀನಾ ವಿದ್ಯಾರ್ಥಿಗಳಿಗೆ ಸಹಾಯ ಮಾಡಿದ್ದಾರೆ. ಪ್ರವಾಸ ತೆರಳಿದ್ದ ಮಕ್ಕಳನ್ನು ವಾಪಸ್ ಕರೆಸುವ ವಿಚಾರವನ್ನು ಸಿಎಂ ಗಮನಕ್ಕೂ ತಂದಿದ್ದೆ. ಅಲ್ಲಿ ಅಗತ್ಯ ವ್ಯವಸ್ಥೆ ಮಾಡಿದ್ದಾರೆ’ ಎಂದು ಹೇಳಿದರು.
ಸಭೆಯಲ್ಲಿ ಶಾಲಾ ಆಡಳಿತ ಮಂಡಳಿ ಸದಸ್ಯ ಗೋಪಿ, ಶ್ರೀಕಂಠಸ್ವಾಮಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.