ADVERTISEMENT

ಗರಿಬಿಚ್ಚಿದ ‘ಮೈಸೂರು ವಿಜ್ಞಾನ ನಾಟಕೋತ್ಸವ’

​ಪ್ರಜಾವಾಣಿ ವಾರ್ತೆ
Published 25 ಜುಲೈ 2025, 2:02 IST
Last Updated 25 ಜುಲೈ 2025, 2:02 IST
ಮೈಸೂರಿನ ರಮಾಗೋವಿಂದ ರಂಗಮಂದಿರದಲ್ಲಿ 8ನೇ ಆವೃತ್ತಿಯ ‘ಮೈಸೂರು ವಿಜ್ಞಾನ ನಾಟಕೋತ್ಸವ’ಕ್ಕೆ ವಯಲಿನ್ ವಾದನದ ಮೂಲಕ ಭಾರತೀಯ ಖಗೋಳ ಭೌತವಿಜ್ಞಾನ ಸಂಸ್ಥೆಯ ನಿರ್ದೇಶಕಿ ಪ್ರೊ.ಅನ್ನಪೂರ್ಣಿ ಸುಬ್ರಹ್ಮಣ್ಯನ್‌ ಚಾಲನೆ ನೀಡಿದರು. ಮೃದಂಗದಲ್ಲಿ ಸ್ಕಂದ ಸಾಥ್ ನೀಡಿದರು –ಪ್ರಜಾವಾಣಿ ಚಿತ್ರ 
ಮೈಸೂರಿನ ರಮಾಗೋವಿಂದ ರಂಗಮಂದಿರದಲ್ಲಿ 8ನೇ ಆವೃತ್ತಿಯ ‘ಮೈಸೂರು ವಿಜ್ಞಾನ ನಾಟಕೋತ್ಸವ’ಕ್ಕೆ ವಯಲಿನ್ ವಾದನದ ಮೂಲಕ ಭಾರತೀಯ ಖಗೋಳ ಭೌತವಿಜ್ಞಾನ ಸಂಸ್ಥೆಯ ನಿರ್ದೇಶಕಿ ಪ್ರೊ.ಅನ್ನಪೂರ್ಣಿ ಸುಬ್ರಹ್ಮಣ್ಯನ್‌ ಚಾಲನೆ ನೀಡಿದರು. ಮೃದಂಗದಲ್ಲಿ ಸ್ಕಂದ ಸಾಥ್ ನೀಡಿದರು –ಪ್ರಜಾವಾಣಿ ಚಿತ್ರ    

ಮೈಸೂರು: ಭೌತವಿಜ್ಞಾನ ಹಾಗೂ ಖಗೋಳದ ಕುತೂಹಲ ಮೂಡಿಸುವ ದೂರದರ್ಶಕಗಳು, ಮಿಂಚುಪಟ್ಟಿಗಳು, ವಿಜ್ಞಾನ ‍ಪ್ರಯೋಗ ಫಲಕಗಳು ಹೊರಗಿದ್ದರೆ, ಒಳಗೆ ವಯಲಿನ್ ವಾದನದ ಮೋಡಿ, ‘ದ ಟ್ರಯಲ್‌ ಆಫ್‌ ಅಬ್ದುಸ್‌ ಸಲಾಮ್‌’ ನಾಟಕವೆಂಬ  ದೃಶ್ಯಕಾವ್ಯ. 

ವಿಜ್ಞಾನವೂ ಕಲೆಯೆಂದು ಸಾರುವಂತೆ, ಇಲ್ಲಿನ ರಾಮಕೃಷ್ಣನಗರದ ರಮಾಗೋವಿಂದ ರಂಗಮಂದಿರದಲ್ಲಿ ‘ಮೈಸೂರು ವಿಜ್ಞಾನ ನಾಟಕೋತ್ಸವ ಟ್ರಸ್ಟ್’ನ 8ನೇ ಆವೃತ್ತಿಯ ‘ಮೈಸೂರು ವಿಜ್ಞಾನ ನಾಟಕೋತ್ಸವ’ ಗುರುವಾರ ಗರಿಗೆದರಿದ್ದು ಹೀಗೆ. 

ಭಾರತೀಯ ಖಗೋಳ ಭೌತವಿಜ್ಞಾನ ಸಂಸ್ಥೆಯ ನಿರ್ದೇಶಕಿ ಪ್ರೊ.ಅನ್ನಪೂರ್ಣಿ ಸುಬ್ರಹ್ಮಣ್ಯನ್‌ ಅವರು ವಯಲಿನ್ ನಾದ ಲಹರಿ ಹರಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು. ಮೃದಂಗದಲ್ಲಿ ವಿದ್ವಾನ್ ಸ್ಕಂದ ಸಾಥ್ ನೀಡಿದರು. ಅನ್ನಪೂರ್ಣಿ ಅವರು, ಸಂಗೀತ, ನಾಟಕ, ಕಲೆ ಹಾಗೂ ವಿಜ್ಞಾನಗಳು ಒಂದಕ್ಕೊಂದು ಅಂತರ್ ಸಂಬಂಧವನ್ನು ಹೊಂದಿವೆ ಎಂಬುದನ್ನು ನಾದದಲ್ಲಿಯೇ ಅರ್ಥೈಸಿದರು. 

ADVERTISEMENT

ಜಯಚಾಮರಾಜೇಂದ್ರ ಒಡೆಯರ್ ಅವರ ‘ಅಟಾನ’ ರಾಗದ ‘ಶ್ರೀಮಹಾಗಣಪತಿಂ ಭಜೇಹಂ’ ಕೃತಿಯೊಂದಿಗೆ ಮುನ್ನುಡಿ ಬರೆದ ಅನ್ನಪೂರ್ಣಿ ಅವರು, ‘ಸರಸ್ವತಿ’ ರಾಗದ ಜಿ.ಎನ್.ಬಾಲಸುಬ್ರಹ್ಮಣ್ಯಂ ಅವರ ಕೃತಿ ‘ಸರಸ್ವತಿ’ ಕೃತಿ ಹಾಗೂ ಕೊನೆಯಲ್ಲಿ ವ್ಯಾಸರಾಯರ ‘ಕೃಷ್ಣ ನೀ ಬೇಗನೆ ಬಾರೋ’ ಕೃತಿಯನ್ನು ನುಡಿಸಿ ಸ್ವರ, ಭಾಷೆ, ಧ್ವನಿ ಹಾಗೂ ರಸಾಭಿನಯಗಳೆಲ್ಲವೂ ವಿಜ್ಞಾನವೇ ಎಂಬುದನ್ನು ಸಾರಿದರು. 

ನಂತರ ಮಾತನಾಡಿ, ‘ವಿಜ್ಞಾನದ ಅರಿವನ್ನು ಮೂಡಿಸಲು ಹಾಗೂ ಜನರಿಗೆ ಅರ್ಥೈಸಲು ಕಲೆ ಉತ್ತಮ ಮಾಧ್ಯಮವಾಗಿದ್ದು, ಅದರಲ್ಲೂ ರಂಗಭೂಮಿ ಮುಖ್ಯ ಮಾರ್ಗ. ಹೀಗಾಗಿಯೇ, ಸಂಸ್ಥೆಯು ನಾಟಕೋತ್ಸವಗಳಿಗೆ ಪ್ರೋತ್ಸಾಹ ನೀಡುತ್ತಿದೆ’ ಎಂದರು. 

‘ಖಗೋಳ ವಿಜ್ಞಾನವು ಜನ ಸಂಸ್ಕೃತಿಯಲ್ಲಿ ಆಳವಾಗಿ ಬೆರೆತಿದೆ. ಸಾಹಿತ್ಯದ ಇತಿಹಾಸವನ್ನು ನೋಡಿದಾಗ ನಕ್ಷತ್ರಪುಂಜಗಳು, ಉಲ್ಕೆಗಳು ರೂಪಕಗಳಾಗಿವೆ’ ಎಂದು ಹೇಳಿದ ಅವರು, ‘ನಾಟಕಗಳು ವಿಜ್ಞಾನದ ವಿಷಯಗಳನ್ನು ಸರಳವಾಗಿ ದಾಟಿಸುವ ಸಾಮರ್ಥ್ಯ ಹೊಂದಿದ್ದು, ವಿಜ್ಞಾನ ಸಂವಹನ ಪ್ರತಿಯೊಬ್ಬರಲ್ಲೂ ನಡೆಯಬೇಕು. ವಿದ್ಯಾರ್ಥಿಗಳು ಸಂಶೋಧನೆ ಜೊತೆಗೆ ಕಲೆಯಲ್ಲೂ ತೊಡಗಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು. 

ತಾರಾಲಯ: ‘ಚಾಮುಂಡಿಬೆಟ್ಟ ತಪ್ಪಲಿನಲ್ಲಿ ಮೈಸೂರು ವಿಶ್ವವಿದ್ಯಾಲಯದ ಜಯಚಾಮರಾಜ ಒಡೆಯರ್ ಉನ್ನತ ಕಲಿಕಾ ಕೇಂದ್ರದ ಆವರಣದಲ್ಲಿ ‘ವಿಶ್ವದ ಮೊಟ್ಟಮೊದಲ ಎಲ್‌ಇಡಿ ಬಾಗಿದ ಗುಮ್ಮಟ ತಾರಾಲಯ’ವನ್ನು ಭಾರತೀಯ ಖಗೋಳ ಭೌತವಿಜ್ಞಾನ ಸಂಸ್ಥೆ (ಐಐಎ) ನಿರ್ಮಿಸುತ್ತಿದ್ದು, ತಾರಾಮಂಡಲವನ್ನೇ ಕಣ್ತುಂಬಿಕೊಳ್ಳಬಹುದು. ಖಗೋಳ ವಿಜ್ಞಾನ ಶಿಕ್ಷಣ ಹಾಗೂ ತರಬೇತಿಯನ್ನು ಆಸಕ್ತರಿಗೆ ನೀಡಲಾಗುತ್ತದೆ’ ಎಂದು ಅನ್ನಪೂರ್ಣಿ ತಿಳಿಸಿದರು. 

‘ಕಾಸ್ಮೊಲಜಿ ಶಿಕ್ಷಣ ಮತ್ತು ಸಂಶೋಧನಾ ತರಬೇತಿ ಕೇಂದ್ರವೂ (ಕಾಸ್ಮೋಸ್) ಇರಲಿದ್ದು, ಆಕಾಶ, ನಕ್ಷತ್ರ ವೀಕ್ಷಣೆ ಮೊದಲಾದ ಕಾರ್ಯಕ್ರಮಗಳು ನಡೆಸಲಾಗುತ್ತದೆ’ ಎಂದರು.  

ನಾಟಕಕಾರ ನೀಲಂಜನ್‌ ಚೌಧರಿ ಪಾಲ್ಗೊಂಡಿದ್ದರು. ನಂತರ ಇವರ ನಿರ್ದೇಶನದ ‘ದ ಟ್ರಯಲ್ ಆಫ್ ಅಬ್ದುಸ್‌ ಸಲಾಮ್’ ನಾಟಕವನ್ನು ಬೆಂಗಳೂರಿನ ‘ರಿದ್ಧಿ’ ತಂಡದವರು ಅಭಿನಯಿಸಿದರು. 

ಬೆಂಗಳೂರಿನ ‘ರಿದ್ಧಿ’ ರಂಗ ತಂಡದವರು ನೀಲಾಂಜನ್‌ ಚೌಧರಿ ನಿರ್ದೇಶನದಲ್ಲಿ ‘ದ ಟ್ರಯಲ್ ಆಫ್ ಅಬ್ದುಸ್‌ ಸಲಾಮ್’ ನಾಟಕ ಅಭಿನಯಿಸಿದರು 

‘ವಿಶ್ವದಲ್ಲಿ ಬೇರೆಲ್ಲೂ ಇಲ್ಲ’

‘ವಿಜ್ಞಾನ ನಾಟಕೋತ್ಸವ ಜಗತ್ತಿನ ಬೇರೆಲ್ಲೂ ನಡೆದಿರುವ ಬಗ್ಗೆ ಮಾಹಿತಿಯಿಲ್ಲ. ಸಾಂಸ್ಕೃತಿಯ ನಗರಿಯಲ್ಲಿ ಮಾತ್ರವೇ ಇಂಥ ಅಪರೂಪದ ಉತ್ಸವ ನಡೆಯುತ್ತಿದೆ’ ಎಂದು ವಿಜ್ಞಾನ ನಾಟಕಕಾರ ನೀಲಂಜನ್‌ ಚೌಧರಿ ಅಭಿಪ್ರಾಯಪಟ್ಟರು.  ‘ರಂಗಭೂಮಿ ಸಿನಿಮಾ ಬೌದ್ಧಿಕತೆಯನ್ನು ಹೆಚ್ಚಿಸಬೇಕು. ಮೊಬೈಲ್‌ಗಳಲ್ಲಿ ಮುಳುಗಿರುವ ಮಕ್ಕಳನ್ನು ನಾಟಕಗಳಲ್ಲಿ ತೊಡಗಿಸಿದ್ದೇ ಆದಲ್ಲಿ ಮಾನಸಿಕವಾಗಿ ಗಟ್ಟಿಯಾಗುತ್ತಾರೆ. ಬೌದ್ಧಿಕ ಪರಂಪರೆ ಗೊತ್ತಾಗುವುದಲ್ಲದೇ ಏಕಾಂತತೆ ಖಿನ್ನತೆ ಕಳೆಯುತ್ತದೆ. ಬದುಕನ್ನು ಕಲಿಸುತ್ತದೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.