ADVERTISEMENT

ಮೈಸೂರು: ಕೆಲಸ ಮಾಡುತ್ತಿದ್ದ ಗೋದಾಮಿಗೆ ನುಗ್ಗಿ 16 ಕೆ.ಜಿ ಬೆಳ್ಳಿಯ ವಸ್ತು ಕದ್ದರು

ದರೋಡೆ ಪ್ರಕರಣದಲ್ಲಿ 6 ಅಂತರರಾಜ್ಯ ಕಳ್ಳರ ಬಂಧನ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2025, 4:32 IST
Last Updated 15 ಆಗಸ್ಟ್ 2025, 4:32 IST
ಮೈಸೂರಿನ ನಗರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಸೀಮಾ ಲಾಟ್ಕರ್‌ ಅವರು ಹೆಬ್ಬಾಳ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಪತ್ತೆ ಮಾಡಿರುವ ವಸ್ತುಗಳ ಮಾಹಿತಿ ನೀಡಿದರು. ಡಿಸಿಪಿಗಳಾದ ಕೆ.ಎಸ್‌.ಸುಂದರ್‌ ರಾಜ್‌. ಆರ್.ಎನ್‌. ಬಿಂದು ರಾಣಿ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು
ಮೈಸೂರಿನ ನಗರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಸೀಮಾ ಲಾಟ್ಕರ್‌ ಅವರು ಹೆಬ್ಬಾಳ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಪತ್ತೆ ಮಾಡಿರುವ ವಸ್ತುಗಳ ಮಾಹಿತಿ ನೀಡಿದರು. ಡಿಸಿಪಿಗಳಾದ ಕೆ.ಎಸ್‌.ಸುಂದರ್‌ ರಾಜ್‌. ಆರ್.ಎನ್‌. ಬಿಂದು ರಾಣಿ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು   

ಮೈಸೂರು: ‘ಉಂಡ ಮನೆಗೆ ಕನ್ನ ಹಾಕಿದ’ ಎಂಬ ಗಾದೆ ಮಾತಿನಂತೆ ತಾನು ಕೆಲಸ ಮಾಡುತ್ತಿದ್ದ ಮಾಲೀಕರ ಗೋದಾಮಿಗೆ ನುಗ್ಗಿ ದರೋಡೆ ಮಾಡಿದ ಕಾರು ಚಾಲಕ ಹಾಗೂ ಆತನಿಗೆ ಸಹಾಯ ಮಾಡಿದ ಐವರನ್ನು ಹೆಬ್ಬಾಳ ಪೊಲೀಸರು ಬಂಧಿಸಿದ್ದಾರೆ.

ಗುಜರಾತ್‌ನ ಪರೇಶ್‌ ಕುಮಾರ್‌ ಮಾಳಿ, ಕಿಶೋರ್‌, ದಿಲೀಪ್‌ ಕುಮಾರ್‌, ಅರವಿಂದ್‌ ರಜಪೂತ್‌, ಹರೇಶ್‌ ಪುರೋಹಿತ್‌ ಹಾಗೂ ಮಧ್ಯಪ್ರದೇಶದ ರವಿ ಅಲಿಯಾಸ್‌ ಅರವಿಂದ ಸಿಂಗ್‌ ಠಾಕೋರ್‌ ಬಂಧಿತರು. ಆದಿ ತೋಮರ್‌ ಎಂಬಾತ ತಲೆಮರೆಸಿಕೊಂಡಿದ್ದಾನೆ. 

ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ರಾಕೇಶ್‌ ಕುಮಾರ್ ಅವರು ಬೆಳ್ಳಿ ಆಭರಣ ತಯಾರಿಸುವ ಕಾರ್ಖಾನೆ ನಡೆಸುತ್ತಿದ್ದಾರೆ. ಜು.28ರಂದು ಕಾರ್ಖಾನೆಗೆ ನುಗ್ಗಿದ ಮೂವರು, ಭದ್ರತಾ ಸಿಬ್ಬಂದಿ ಬಾಯಿಗೆ ಬಟ್ಟೆ ತುರುಕಿ, ಚಾಕು ಹಾಗೂ ಪಿಸ್ತೂಲ್‌ ತೋರಿಸಿ ಬೆದರಿಸಿ 16 ಕೆ.ಜಿ ಬೆಳ್ಳಿಯ ವಸ್ತು ಕದ್ದು ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡ ಹೆಬ್ಬಾಳ ಪೊಲೀಸರು ಆರೋಪಿಗಾಗಿ ಹುಡುಕಾಟ ಆರಂಭಿಸಿದರು.

ADVERTISEMENT

‘ಎನ್‌ಎಎಫ್‌ಐಎಸ್‌ (ನ್ಯಾಷನಲ್‌ ಆಟೊಮೇಟೆಡ್‌ ಫಿಂಗರ್‌ಪ್ರಿಂಟ್‌ ಐಡೆಂಟಿಫಿಕೇಷನ್‌) ನಲ್ಲಿ ಪರಿಶೀಲಿಸಿದಾಗ, ಗುಜರಾತ್‌ನ ನಟೋರಿಯಸ್‌ ದರೋಡೆಕೋರ ಕಿಶೋರ್‌ ಬೆರಳಚ್ಚು ತಾಳೆಯಾಯಿತು. ಆತನ ವಿರುದ್ಧ 30 ಪ್ರಕರಣಗಳಿದ್ದವು, ಆತನನ್ನು ಬಂಧಿಸಿ, ವಿಚಾರಣೆಗೊಳಪಡಿಸಿದಾಗ ದರೋಡೆಗೆ ಪರೇಶ್‌ ಕುಮಾರ್‌ ಯೋಜನೆ ರೂಪಿಸಿದ್ದು ಗೊತ್ತಾಯಿತು’ ಎಂದು ನಗರ ಪೊಲೀಸ್‌ ಆಯುಕ್ತೆ ಸೀಮಾ ಲಾಟ್ಕರ್‌ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಒಂದೂವರೆ ವರ್ಷದ ಹಿಂದೆ ಗುಜರಾತ್‌ನ ದಿಶಾ ಗ್ರಾಮದ ಪರೇಶ್‌ ಕುಮಾರ್‌, ರಾಕೇಶ್‌ ಅವರ ಕಾರಿನ ಚಾಲಕನಾಗಿ ಕೆಲಸಕ್ಕೆ ಸೇರಿಕೊಂಡಿದ್ದ. ನ್ಯಾಯಾಲಯದಲ್ಲಿ ಎದುರಿಸುತ್ತಿದ್ದ ಸಿವಿಲ್‌ ವ್ಯಾಜ್ಯ ಹಾಗೂ ಕುಟುಂಬ ನಿರ್ವಹಣೆಗಾಗಿ ಊರಿನಲ್ಲಿ ₹50 ಲಕ್ಷ ಸಾಲ ಮಾಡಿದ್ದ. ಅದನ್ನು ತೀರಿಸಲು ಮಾಲೀಕರ ಗೋಡಾನ್‌ನಿಂದ ಕಳವು ಮಾಡುವ ನಿರ್ಧಾರಕ್ಕೆ ಬಂದಿದ್ದ. ಅದಕ್ಕಾಗಿ ತನ್ನ ಗ್ರಾಮದ ಕಿಶೋರ್‌ನನ್ನು ಸಂಪರ್ಕಿಸಿ ಇನ್‌ಸ್ಟಾಗ್ರಾಂ ಹಾಗೂ ವಾಟ್ಸ್‌ಆ್ಯಪ್‌ನಲ್ಲಿ ದರೋಡೆಗೆ ಯೋಜನೆ ರೂಪಿಸಿದ್ದ’ ಎಂದು ತಿಳಿಸಿದರು.

‘ದರೋಡೆ ಮಾಡಿದ ಬಳಿಕ ಕಾರಿನಲ್ಲಿ ಬೆಂಗಳೂರಿಗೆ ತೆರಳಿ, ಹೆಸರಘಟ್ಟದಲ್ಲಿದ್ದ ಗುಜರಾತ್‌ ಮೂಲದ ವ್ಯಕ್ತಿಯೊಬ್ಬನ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಆರೋಪಿಗಳನ್ನು ಬಂಧಿಸಿದ ಪೊಲೀಸರು, ಥಾರ್‌ ಹಾಗೂ ಕ್ರೆಟಾ ಕಾರು, ₹18 ಲಕ್ಷ ಮೌಲ್ಯದ 16 ಕೆ.ಜಿ ಬೆಳ್ಳಿ ವಸ್ತು, 1 ಪಿಸ್ತೂಲ್‌ ವಶಪಡಿಸಿಕೊಂಡಿದ್ದಾರೆ’ ಎಂದರು. 

ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ವಿಜಯನಗರ ಉಪವಿಭಾಗದ ಎಸಿಪಿ ಪಿ.ರವಿಪ್ರಸಾದ್‌, ಹೆಬ್ಬಾಳ್‌ ಇನ್‌ಸ್ಪೆಕ್ಟರ್‌ ಲಕ್ಷ್ಮೀಕಾಂತ್‌, ಪಿಎಸ್‌ಐಗಳಾದ ಪ್ರವೀಣ್‌ ಕುಮಾರ್‌, ಸಿ. ಕೀರ್ತಿ, ಸಿಬ್ಬಂದಿ ಲಿಖಿತ್‌, ಕಾಮಣ್ಣ, ತಿಲಕ್‌, ಅಣ್ಣಪ್ಪ ದೇವಾಡಿಗ, ಮೋಹನ್‌, ಸುಭಾನ್‌, ಬಾಲಧಾರ್‌, ಮಧು, ಆನಂದ್‌, ಬಸವರಾಜು, ಶ್ರೀಶೈಲ ಹುಗ್ಗಿ ಅವರಿಗೆ ಸೀಮಾ ಲಾಟ್ಕರ್‌ ಪ್ರಶಂಸನಾ ಪತ್ರ ವಿತರಿಸಿದರು.

ಕಾರ್ಖಾನೆಯವರು ಹೊರರಾಜ್ಯದವರನ್ನು ಕೆಲಸಕ್ಕೆ ಸೇರಿಸಿಕೊಳ್ಳುವಾಗ ಪೊಲೀಸ್‌ ಪರಿಶೀಲನೆ ನಡೆಸಬೇಕು. ಅಪರಾಧ ಹಿನ್ನೆಲೆ ಇದ್ದರೆ ತಿಳಿಸುತ್ತೇವೆ. ಈ ಬಗ್ಗೆ ನಿರ್ಲಕ್ಷ್ಯ ಸಲ್ಲ
ಸೀಮಾ ಲಾಟ್ಕರ್‌ ನಗರ ಪೊಲೀಸ್ ಆಯುಕ್ತೆ

21 ಸ್ವತ್ತು ಕಳವು ಪ್ರಕರಣಗಳ ಪತ್ತೆ

‘ಒಂದು ತಿಂಗಳ ಅವಧಿಯಲ್ಲಿ 21 ಸ್ವತ್ತು ಕಳವು ಪ್ರಕರಣಗಳ ಪತ್ತೆ ಮಾಡಲಾಗಿದೆ. 5 ಕನ್ನ ಸರಗಳ್ಳತನ ಸುಲಿಗೆ ಮನೆ ಕಳ್ಳತನ ಮನೆ ಕೆಲಸದವರಿಂದ ಕಳ್ಳತನ ಕುರಿತು ತಲಾ ಒಂದು 9 ವಾಹನ ಕಳ್ಳತನ 3 ಸಾಮಾನ್ಯ ಕಳ್ಳತನದ ಪ್ರಕರಣ ಪತ್ತೆಯಾಗಿವೆ’ ಎಂದು ನಗರ ಪೊಲೀಸ್‌ ಆಯುಕ್ತೆ ಸೀಮಾ ಲಾಟ್ಕರ್ ತಿಳಿಸಿದರು. ‘ಈ ಪ್ರಕರಣಗಳಲ್ಲಿ ₹ 47.57 ಲಕ್ಷ ಮೌಲ್ಯದ  442 ಗ್ರಾಂ ಚಿನ್ನಾಭರಣ 10 ದ್ವಿಚಕ್ರ ವಾಹನ ₹ 8.50 ಲಕ್ಷ ನಗದು 1 ಎಲ್‌ಇಡಿ ಟಿ.ವಿ 8 ಮೊಬೈಲ್ ಫೋನ್‌ ವಶಪಡಿಸಿಕೊಳ್ಳಲಾಗಿದೆ. 22 ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ’ ಎಂದರು. ‘ಮಾದಕ ವ್ಯಸನಿಗಳ ವಿರುದ್ಧ ನಡೆಸುತ್ತಿರುವ ಕಾರ್ಯಾಚರಣೆಯಲ್ಲಿ ಈವರೆಗೆ 2400ಕ್ಕೂ ಅಧಿಕ ಅನುಮಾನಿತ ಗಾಂಜಾ ಸೇವನೆ ಮಾಡುವವರನ್ನು ಪತ್ತೆ ಮಾಡಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. 316 ಆರೋಪಿಗಳ ವಿರುದ್ಧ 303 ಪ್ರಕರಣ ದಾಖಲಿಸಿದ್ದೇವೆ.  ಮಾದಕ ಪದಾರ್ಥಗಳನ್ನು ಹೊಂದಿದ್ದ ಕುರಿತು 23 ಪ್ರಕರಣ ದಾಖಲಿಸಿ 24 ಆರೋಪಿಗಳನ್ನು ಬಂಧಿಸಲಾಗಿದ್ದು 13. 93 ಕೆ.ಜಿ ಗಾಂಜಾ 149 ಗ್ರಾಂ ಸಿಂಥೆಟಿಕ್‌ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.