
ಮೈಸೂರು: ನಗರದಲ್ಲಿಯೇ ಗುಜರಾತ್‌ನ ಸೋಮನಾಥ ಜ್ಯೋತಿರ್ಲಿಂಗ ಮಂದಿರದ ದರ್ಶನ ಪಡೆದ ನೂರಾರು ಭಕ್ತಾದಿಗಳು ದೇವರ ಪೂಜೆ, ಮಂದಿರದ ವೈಭವವನ್ನು ಕಣ್ತುಂಬಿಕೊಂಡರು.
12 ಜ್ಯೋತಿರ್‌ಲಿಂಗಗಳನ್ನೂ ಒಂದೆಡೆಯೇ ನೋಡಿ ಸಂಭ್ರಮಿಸಿದರು. ನವ ದುರ್ಗೆಯರನ್ನೂ ಕಂದು ಮೂಕವಿಸ್ಮಿತರಾದರು.
ಈ ಎಲ್ಲ ಅಪರೂಪಗಳಿಗೆ ಸಾಕ್ಷಿಯಾಗಿದ್ದು, ಇಲ್ಲಿನ ಹುಣಸೂರು ರಸ್ತೆಯ ಐಶ್ವರ್ಯ ಪೆಟ್ರೋಲ್ ಬಂಕ್ ಎದುರಿನ ಖಾಲಿ ಜಾಗದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ 90ನೇ ವಾರ್ಷಿಕೋತ್ಸವ ಹಾಗೂ ಮಹಾಶಿವರಾತ್ರಿ ಪ್ರಯುಕ್ತ ಭಾನುವಾರ ಚಾಲನೆಗೊಂಡ ಜ್ಞಾನ–ವಿಜ್ಞಾನ–ದಿವ್ಯದರ್ಶನ ಮೇಳ.
ವಿದ್ಯುತ್ ದೀಪಾಲಂಕಾರದಲ್ಲಿ ಮಿನುಗುತ್ತಿದ್ದ ದೇವಸ್ಥಾನದ ಯಥಾವತ್ ಪ್ರತಿಕೃತಿಯು, ನವ ದುರ್ಗೆಯರ ಶೈಲಿಯಲ್ಲಿ ಅಲಂಕೃತಗೊಂಡಿದ್ದ ವಿಶ್ವವಿದ್ಯಾಲಯದ ಯುವತಿಯರು, ಸ್ವಯಂಸೇವಕರು, ಜ್ಯೋತಿರ್‌ಲಿಂಗಗಳ ಪ್ರತಿಕೃತಿಗಳು ಜನರನ್ನು ಬೇರೆಯದೇ ಲೋಕಕ್ಕೆ ಕೊಂಡೊಯ್ದಿತು.
ಮೇಳದಲ್ಲಿ ವಿಶ್ವವಿದ್ಯಾಲಯ ಸ್ಥಾಪನೆಗೊಂಡ ಬಗೆ, ಅದರ ಅಧ್ಯಾತ್ಮ ಪರಿಕಲ್ಪನೆ, ಮಾದಕವಸ್ತು ಸೇವನೆ ವಿರುದ್ಧ ಜಾಗೃತಿ, ಮೈಂಡ್ ಸ್ಪಾ, ಸಾಮರಸ್ಯದಿಂದಿರಲು ಪ್ರಾಯೋಗಿಕ ಚಿತ್ರಗಳ ಪ್ರದರ್ಶನ, ಧ್ಯಾನ ಶಿಬಿರ ನಡೆಯಿತು. ವಿಶ್ವವಿದ್ಯಾಲಯದ ಮಾತೆಯರು ಜನರಿಗೆ ಎಲ್ಲದರ ಮಾಹಿತಿ ನೀಡಿದರು. ಒಬ್ಬೊಬ್ಬರನ್ನೆ ಮಾತನಾಡಿಸಿ ಅಲ್ಲಿನ ವಿಷಯಗಳನ್ನು ಅರ್ಥೈಸಿದರು. ಜನರು ಕುತೂಹಲದಿಂದ ಆಲಿಸಿ, ಕೆಲ ಪ್ರಶ್ನೆಗಳಿಗೆ ಉತ್ತರ ಪಡೆದುಕೊಂಡರು. ಧ್ಯಾನ ಮಾಡಿದರು. ದೇವಸ್ಥಾನದ ಎದುರು ನಿಂತು ಫೊಟೊ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.
ದಿವ್ಯದರ್ಶನ ಮೇಳಕ್ಕೆ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿಶ್ಚಲಾನಂದನಾಥ ಸ್ವಾಮೀಜಿ, ಶಾಸಕ ಡಿ.ರವಿಶಂಕರ್, ಕೆಐಡಿಬಿ ಜಿಲ್ಲಾಧ್ಯಕ್ಷ ಲಿಂಗರಾಜು, ವಿಶ್ವವಿದ್ಯಾಲಯ ಮೈಸೂರು ಉಪವಲಯದ ಮುಖ್ಯ ಸಂಚಾಲಕಿ ಲಕ್ಷ್ಮೀಜಿ, ಪ್ರಾಂಶುಪಾಲ ರಂಗನಾಥ್ ಅವರು ಚಾಲನೆ ನೀಡಿದರು.
ಶಾಸಕ ಡಿ.ರವಿಶಂಕರ್ ಮಾತನಾಡಿ, ‘ಪ್ರತಿಯೊಬ್ಬರೂ ಜೀವನದಲ್ಲಿ ಒಂದಲ್ಲ ಒಂದು ರೀತಿಯ ಒತ್ತಡದಲ್ಲಿ ಇರುತ್ತಾರೆ. ಒತ್ತಡ ನಿವಾರಣೆಗೆ ಇಂತಹ ಕಾರ್ಯಕ್ರಮಗಳು ಸಹಕಾರಿ. ಸಂಸ್ಥೆಯಿಂದ ಹಲವು ಸಮಾಜಮುಖಿ ಕೆಲಸಗಳು ನಡೆದಿವೆ, ದೇಶ, ವಿದೇಶಗಳಲ್ಲಿ ಶಾಂತಿ ಬಿತ್ತುವುದರಲ್ಲಿ ನಿರಂತರವಾಗಿದೆ. ಇವರೊಂದಿಗೆ ಎಲ್ಲರೂ ಕೈಜೋಡಿಸಿ ಸಮಾಜದ ಒಳಿತಿಗೆ ಪ್ರಾರ್ಥಿಸಬೇಕು. 15 ದಿನಗಳ ಈ ಉತ್ಸವದಲ್ಲಿ ಎಲ್ಲರೂ ಭಾಗಿಯಾಗಬೇಕು’ ಎಂದರು.
ಸಾಹಿತಿ ಕೆ.ಸಿ.ಶಿವಪ್ಪ ಹಾಗೂ ನೃತ್ಯ ಕಲಾವಿದೆ ವಸುಂಧರಾ ದೊರೆಸ್ವಾಮಿ ಅವರಿಗೆ ‘ಈಶ್ವರೀಯ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.