ADVERTISEMENT

ಮೈಸೂರು: ಬೇಸಿಗೆ ಶುರುವಲ್ಲೇ ‘ಟ್ಯಾಂಕರ್‌’ ಮೊರೆ!

ಕಾಡೊಳಗಿನ ಕೆರೆಗಳಿಗೆ ನೀರು ತುಂಬಿಸುತ್ತಿರುವ ಅರಣ್ಯ ಇಲಾಖೆ

ಎಂ.ಮಹೇಶ್
Published 11 ಮಾರ್ಚ್ 2025, 6:38 IST
Last Updated 11 ಮಾರ್ಚ್ 2025, 6:38 IST
ಮೈಸೂರು ಜಿಲ್ಲೆಯ ನಾಗರಹೊಳೆ ಅಭಯಾರಣ್ಯದ ಅಂತರಸಂತೆ ವಲಯದಲ್ಲಿ ಕೆರೆಯೊಂದಕ್ಕೆ ಟ್ಯಾಂಕರ್‌ ಮೂಲಕ ನೀರು ಹಾಕಲಾಯಿತು. ಮರ–ಗಿಡಗಳು ಒಣಗುತ್ತಿರುವುದನ್ನೂ ಕಾಣಬಹುದು– ಪ್ರಜಾವಾಣಿ ಚಿತ್ರ
ಮೈಸೂರು ಜಿಲ್ಲೆಯ ನಾಗರಹೊಳೆ ಅಭಯಾರಣ್ಯದ ಅಂತರಸಂತೆ ವಲಯದಲ್ಲಿ ಕೆರೆಯೊಂದಕ್ಕೆ ಟ್ಯಾಂಕರ್‌ ಮೂಲಕ ನೀರು ಹಾಕಲಾಯಿತು. ಮರ–ಗಿಡಗಳು ಒಣಗುತ್ತಿರುವುದನ್ನೂ ಕಾಣಬಹುದು– ಪ್ರಜಾವಾಣಿ ಚಿತ್ರ   

ಮೈಸೂರು: ಜಿಲ್ಲೆಯಲ್ಲಿ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಅಂತರಸಂತೆ ಸೇರಿದಂತೆ ವಿವಿಧ ವಲಯಗಳ ಅರಣ್ಯಪ್ರದೇಶದಲ್ಲಿ ಬೇಸಿಗೆಯ ಆರಂಭದಲ್ಲೇ ನೀರಿಗೆ ‘ತತ್ವಾರ’ ಎದುರಾಗಿರುವುದು ಆತಂಕ ಮೂಡಿಸಿದೆ.

ಬಿಸಿಲಿನ ಝಳ ಜಾಸ್ತಿಯಾಗುತ್ತಿರುವ ಕಾರಣ ಈಗಾಗಲೇ ಕೆಲವು ಕೆರೆಗಳು ಬತ್ತಿದ್ದು, ಟ್ಯಾಂಕರ್‌ ಮೂಲಕ ನೀರು ತಂದು ಕೆರೆಗಳಿಗೆ ಹಾಕುವ ಕೆಲಸವನ್ನು ಅರಣ್ಯ ಇಲಾಖೆಯು ಸಿಬ್ಬಂದಿ ಮೂಲಕ ನಿರ್ವಹಿಸುತ್ತಿದೆ. ದಿನೇ ದಿನೇ ತಾಪಮಾನ ಏರಿಕೆಯಾಗುತ್ತಿರುವ ಪರಿಣಾಮ ಕಾಡೊಳಗಿನ ಕೆರೆ ಕಟ್ಟೆಗಳಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಇಳಿಕೆಯಾಗುತ್ತಿದೆ. ಬಹುತೇಕ ಗಿಡ–ಮರಗಳು ಒಣಗಿ ಹೋಗಿವೆ.

ಬೇಸಿಗೆ ಸಂದರ್ಭದಲ್ಲಿ ದೊಡ್ಡ ಸಮಸ್ಯೆಯಾಗಿ ಕಾಡುವ ಕಾಳ್ಗಿಚ್ಚು ಉಂಟಾಗಿ ವನ್ಯಸಂಪತ್ತು ಹಾಳಾಗದಂತೆ ನೋಡಿಕೊಳ್ಳುವ ಜೊತೆಗೆ, ಕಾಡುಪ್ರಾಣಿ–ಪಕ್ಷಿಗಳಿಗೆ ಜೀವಜಲ ದೊರೆಯುವಂತೆ ಮಾಡಲು ಕೆರೆ–ಕಟ್ಟೆಗಳಲ್ಲಿ ನೀರು ಲಭ್ಯವಿರುವಂತೆ ಮಾಡುವುದು ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿದೆ.

ADVERTISEMENT

ಮಾರ್ಚ್‌ ಮೊದಲ, 2ನೇ ವಾರದಲ್ಲೇ ಪರಿಸ್ಥಿತಿ ಹೀಗಾದರೆ, ಏಪ್ರಿಲ್‌– ಮೇ ತಿಂಗಳಿನ ದಿನಗಳನ್ನು ನಿರ್ವಹಿಸುವುದು ಹೇಗೆ ಎಂಬ ಚಿಂತೆ ಅಧಿಕಾರಿಗಳನ್ನು ಕಾಡುತ್ತಿದೆ. ಅಲ್ಲದೇ, ಕಾಳ್ಗಿಚ್ಚು ಕಾಣಿಸಿಕೊಂಡರೆ ನಿರ್ವಹಿಸಲು ಅಥವಾ ಬೆಂಕಿ ನಂದಿಸಲು ಸಾಕಷ್ಟು ಪ್ರಮಾಣದಲ್ಲಿ ಬೇಕಾಗುವ ನೀರನ್ನು ಎಲ್ಲಿಂದ ತರುವುದು ಎಂಬ ಆತಂಕವೂ ಎದುರಾಗಿದೆ.

ಪರಿಣಾಮವೇನು?: ‘ಕಾಡೊಳಗಿರುವ ಕೆರೆಗಳು ಬತ್ತಿ ಹೋದರೆ, ಪ್ರಾಣಿ–ಪಕ್ಷಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತದೆ. ಆಗ ಅವು ಕಾಡಿನಿಂದಾಚೆಗೆ ಬರುವ ಸನ್ನಿವೇಶ ಎದುರಾಗುತ್ತದೆ. ಹೀಗಾಗದಂತೆ ನೋಡಿಕೊಳ್ಳುವುದು ನಮಗೆ ಸವಾಲಾಗಿ  ಪರಿಣಮಿಸಿದೆ. ಪೂರ್ವ ಮುಂಗಾರು ಮಳೆ ಬಿದ್ದರೆ, ಪರಿಸ್ಥಿತಿಯನ್ನು ನಿರ್ವಹಿಸಬಹುದು. ಇಲ್ಲದಿದ್ದಲ್ಲಿ ಟ್ಯಾಂಕರ್‌ಗಳಿಂದ ನೀರು ಪೂರೈಕೆಗೆ ಹೆಚ್ಚಿನ ಪ್ರಮಾಣದಲ್ಲಿ ಅವಲಂಬನೆ ಆಗಬೇಕಾಗುತ್ತದೆ’ ಎಂದು ಇಲಾಖೆಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿಯೇ ಅಂತರಸಂತೆ ವಲಯ ಹುಲಿ ಮತ್ತು ಆನೆಗಳು ಸೇರಿದಂತೆ ವಿವಿಧ ಪ್ರಾಣಿಗಳ ಸಾಂದ್ರತೆಯನ್ನು ಹೆಚ್ಚಾಗಿ ಹೊಂದಿದೆ. ಕಪ್ಪು ಚಿರತೆಗಳು, ಆನೆಗಳ ಹಿಂಡು, ಸಾಂಬಾರ್, ಜಿಂಕೆ ಸೇರಿದಂತೆ ವೈವಿಧ್ಯಮಯ ವನ್ಯಸಂಕುಲ ಹೊಂದಿರುವ ಅಂತರಸಂತೆ ವಲಯ ಕಬಿನಿ ಹಿನ್ನೀರಿನ ಪ್ರದೇಶಕ್ಕೂ ಹೊಂದಿಕೊಂಡಿದೆ. ಕಾಡಂಚಿನ ಹಲವು ಗ್ರಾಮ ಹಾಗೂ ಹಾಡಿಗಳನ್ನು ಅಂತರಸಂತೆ ವಲಯ ಹೊಂದಿದೆ. ಈ ಕಾರಣದಿಂದಾಗಿ, ನೀರಿಗೆ  ಕೊರತೆಯಾದರೆ ಮಾನವ-ಪ್ರಾಣಿ ಸಂಘರ್ಷದ ಸಾಧ್ಯತೆ ಹೆಚ್ಚಿರುತ್ತದೆ.

ದರ್ಶನವೇನೋ ಆಗುತ್ತಿದೆ: ಈಗ ಸಫಾರಿಗೆ ಹೋಗುವ ವನ್ಯಪ್ರಿಯರಿಗೆ ಕೆಲವು ಆನೆ, ಹುಲಿ, ಜಿಂಕೆ ಮೊದಲಾದ ಪ್ರಾಣಿಗಳ ದರ್ಶನ ಆಗುತ್ತಿದೆಯಾದರೂ, ಹಸಿರಿನಿಂದ ನಳನಳಿಸುತ್ತಿದ್ದ ವನ್ಯಸಂಪತ್ತಿನ ಮೆರುಗು ಕ್ಷೀಣಿಸುತ್ತಿದೆ.

‘ಬಿರು ಬಿಸಿಲಿನಿಂದಾಗಿ ಅರಣ್ಯ ಪ್ರದೇಶ ಒಣಗುತ್ತಿದೆ. ಈ ಕಾರಣದಿಂದ ಸಂಭವನೀಯ ಕಾಳ್ಗಿಚ್ಚು ತಡೆಯಲು ಬೆಂಕಿ ತಡೆರೇಖೆ ನಿರ್ಮಾಣ ಸೇರಿದಂತೆ ವಿವಿಧ ಕ್ರಮ ಕೈಗೊಳ್ಳಲಾಗಿದೆ. ಅರಣ್ಯದ ಎತ್ತರ ಪ್ರದೇಶದಲ್ಲಿ ನಿರ್ಮಿಸಿರುವ ವಾಚ್‌ಟವರ್‌ನಿಂದ ನಿಗಾ ವಹಿಸಲು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ’ ಎಂದು ಅಧಿಕಾರಿಗಳು ಹೇಳಿದರು.

‘ಅಂತರಸಂತೆ ವಲಯದಲ್ಲಿ 6 ಕೆರೆಗಳಲ್ಲಿ ನೀರು ಖಾಲಿಯಾಗಿದ್ದು, ಅವುಗಳಿಗೆ ಟ್ಯಾಂಕರ್ ಮೂಲಕ ನೀರು ಹಾಕಲಾಗುತ್ತಿದೆ. ಅದರಲ್ಲೂ ಕಾಡಂಚಿನಲ್ಲಿರುವ ಗ್ರಾಮಗಳಿಗೆ ಹೊಂದಿಕೊಂಡಿರುವ ಪ್ರದೇಶದಲ್ಲಿನ ಕೆರೆಗಳಿಗೆ ಆದ್ಯತೆ ಮೇರೆಗೆ ನೀರು ಹಾಕಲಾಗುತ್ತಿದೆ. ಪ್ರಾಣಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಲು ಕ್ರಮ ವಹಿಸಲಾಗಿದೆ’ ಎನ್ನುತ್ತಾರೆ ಅಂತರಸಂತೆ ವಲಯದ ಆರ್‌ಎಫ್‌ಒ ಸಿದ್ದರಾಜು.

ಅಂತರಸಂತೆ ವಲಯದಲ್ಲಿ ತೊಂದರೆ ಈಗಾಗಲೇ ಬತ್ತಿ ಹೋಗಿರುವ 6 ಕೆರೆಗಳು ಮುಂದಿನ ದಿನಗಳಲ್ಲಿ ನಿರ್ವಹಣೆಯೇ ಸವಾಲು!

ಒಣಗುತ್ತಿರುವ ಕಾಡು ಈಗಾಗಲೇ ತೊಂದರೆ!

ಅಂತರಸಂತೆ ವಲಯದ ಕಾಡೊಳಗೆ ಅಲ್ಲಲ್ಲಿ 18 ಕೆರೆಗಳಿವೆ. ಅವುಗಳಲ್ಲಿ 6ಕ್ಕೂ ಹೆಚ್ಚು ಕೆರೆಗಳಲ್ಲಿ ಈಗಾಗಲೇ ನೀರಿನ ಕೊರತೆ ಎದುರಾಗಿದೆ. ತೀವ್ರ ಕೊರತೆ ಇರುವ ಕೆರೆಗಳಿಗೆ ಅರಣ್ಯ ಇಲಾಖೆಯಿಂದ ಮುಂಜಾಗ್ರತಾ ಕ್ರಮವಾಗಿ ಟ್ಯಾಂಕರ್‌ಗಳಿಂದ ನೀರು ಹಾಕಲಾಗುತ್ತಿದೆ. ಹುಲಿ ಆನೆ ಮೊದಲಾದ ಪ್ರಾಣಿಗಳು ಕುಡಿಯಲು ನೀರಿಗಾಗಿ ಈ ಕೆರೆಗಳನ್ನು ಅವಲಂಬಿಸಿರುವ ಕಾರಣ ಪೂರೈಕೆಗೆ ಕ್ರಮ ವಹಿಸಲಾಗಿದೆ. ಕಾಡಂಚಿನ ಗ್ರಾಮಗಳಲ್ಲಿರುವ ಕೆರೆಗಳಿಗೆ ನೀರು ತುಂಬಿಸುವ ಕೆಲಸವನ್ನು ಇಲಾಖೆಯ ಸಿಬ್ಬಂದಿ ಮಾಡುತ್ತಿದ್ದುದು ಈಚೆಗೆ ಕಂಡುಬಂತು. ಸಂಭವನೀಯ ಕಾಳ್ಗಿಚ್ಚು ತಡೆಗೆ ಪ್ರಾಥಮಿಕವಾಗಿ ನಿರ್ವಹಿಸುವ ಉದ್ದೇಶದಿಂದ ಕೆಲವು ಸಿಬ್ಬಂದಿ ದ್ವಿಚಕ್ರವಾಹನದಲ್ಲಿ ಮೋಟಾರ್ ಚಾಲಿತ ಎರಡು ಸ್ಪ್ರೇಯರ್ ಇಟ್ಟುಕೊಂಡು ಹಗಲಿನ ವೇಳೆಯಲ್ಲಿ ‘ಗಸ್ತು’ ಕಾರ್ಯನಿರ್ವಹಿಸುತ್ತಿದ್ದುದು ಕಂಡುಬಂತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.