
ಮೈಸೂರು: ‘ಸ್ವಚ್ಛ ಸರ್ವೇಕ್ಷಣೆ’ ಜಾಗೃತಿಗೆ ಪಾಲಿಕೆಯು ಆಯೋಜಿಸಿದ್ದ ಓಟದಲ್ಲಿ 4 ಸಾವಿರಕ್ಕೂ ಹೆಚ್ಚು ಮಂದಿ ಕ್ರೀಡಾಪ್ರಿಯರು ಪಾಲ್ಗೊಂಡು ಭಾನುವಾರದ ಮುಂಜಾನೆಯ ಸೊಬಗನ್ನು ಹೆಚ್ಚಿಸಿದರು. ದೇಶದ ಸ್ವಚ್ಛ ನಗರಗಳಲ್ಲಿ ಸಾಂಸ್ಕೃತಿಕ ನಗರಿಯನ್ನು ಮತ್ತೆ ಅಗ್ರಸ್ಥಾನಕ್ಕೆ ಏರಿಸಬೇಕೆಂಬ ಸಂಕಲ್ಪವನ್ನು ಹೆಜ್ಜೆಗಳಲ್ಲಿಯೇ ತೋರಿಕೊಟ್ಟರು.
ಕೋಟೆ ಆಂಜನೇಯಸ್ವಾಮಿ ದೇಗುಲದ ಎದುರು ‘ಓಡೋಣ ಮೈಸೂರಿಗಾಗಿ, ಒಂದಾಗೋಣ ಸ್ವಚ್ಛತೆಗಾಗಿ’ ಆಶಯದಲ್ಲಿ ನಡೆದ 3 ಕಿ.ಮೀ, 5 ಕಿ.ಮೀ ಹಾಗೂ 10 ಕಿ.ಮೀ ಓಟವು ಜನರನ್ನು ಆಕರ್ಷಿಸಿತು.
ಆಲ್ಪರ್ಟ್ ವಿಕ್ಟರ್ ರಸ್ತೆ, ಡಿ.ದೇವರಾಜ ಅರಸು ರಸ್ತೆ, ಜೆಎಲ್‌ಬಿ ರಸ್ತೆ, ಚಾಮರಾಜ ಜೋಡಿ ರಸ್ತೆ, ಸಯ್ಯಾಜಿರಾವ್ ರಸ್ತೆ, ನೀಲಗಿರಿ ರಸ್ತೆಗಳಲ್ಲಿ ಚಿಗರೆಯಂತೆ ಓಡಿದವರು, ಬೆವರು ಹರಿಸಿ ದಣಿದವರು, ಭಾಗವಹಿಸಿದ್ದ ಎಲ್ಲ ಸ್ಪರ್ಧಿಗಳು ಪ್ರಮಾಣ ಪತ್ರ ಮತ್ತು ಪದಕದೊಂದಿಗೆ ಸಂಭ್ರಮದೊಂದಿಗೆ ಸಾರ್ಥಕತೆಯನ್ನೂ ಮೆರೆದರು.
10 ಕಿ.ಮೀ 18–40ರ ವಯೋಮಾನದ ಪುರುಷರ ವಿಭಾಗದಲ್ಲಿ ಗೋಪಿ ಸರೋಜ್ ಹಾಗೂ ಮಹಿಳೆಯರ ವಿಭಾಗದಲ್ಲಿ ವಿಜಯಲಕ್ಷ್ಮಿ ಮೊದಲಿಗರಾಗಿ ಗೆಲುವಿನ ಗೆರೆ ಮುಟ್ಟಿದರು. 41–60ರ ವಯೋಮಾನದಲ್ಲಿ ದಶರಥ, ಎಸ್.ಎಂ.ಉಮಾ, ವಿಶೇಷ ಸಾಮರ್ಥ್ಯವುಳ್ಳ ಪುರುಷರ ವಿಭಾಗದಲ್ಲಿ ಕೆ.ಬಸವರಾಜು ಗೆದ್ದರು.
ತಿ.ನರಸೀಪುರ ತಾಲ್ಲೂಕಿನ ಕುರುಬೂರಿನ ಅಂತರರಾಷ್ಟ್ರೀಯ ಕೊಕ್ಕೊ ಆಟಗಾರ್ತಿ ಚೈತ್ರಾ ಹಾಗೂ ವಿದ್ಯಾ ಮೊದಲಾದವರು ಬರಿಗಾಲಿನಲ್ಲಿ ಹೆಜ್ಜೆ ಹಾಕಿ ಎಲ್ಲರ ಹುಬ್ಬೇರಿಸಿದರೆ, ವಿವಿಧ ಇಲಾಖೆಗಳ ನೌಕರರು, ಉದ್ಯಮಿಗಳು, ಪೊಲೀಸರು, ಪೊಲೀಸ್ ಅಕಾಡೆಮಿಯ ಪ್ರಶಿಕ್ಷಣಾರ್ಥಿಗಳು, ಶಾಲಾ– ಕಾಲೇಜುಗಳ ವಿದ್ಯಾರ್ಥಿಗಳು ಓಡಿ ಗಮನ ಸೆಳೆದರು. ಪಾಲಿಕೆಯ ವಲಯ 9ರಲ್ಲಿ ಸಹಾಯಕ ಆಯುಕ್ತ ಆಗಿರುವ ಐಎಎಸ್ ಪ್ರೊಬೆಷನರಿ ಅಧಿಕಾರಿ ಸಮೀರ್ ಕೋಡೆ 10 ಕಿ.ಮೀ ಓಟದಲ್ಲಿ ಪಾಲ್ಗೊಂಡರು.
ಫಲಿತಾಂಶ:
10 ಕಿ.ಮೀ ಓಟ:
18–40 ವಯೋಮಾನ ವಿಭಾಗ: ಗೋಪಿ ಸರೋಜ್–1, ಮಹೇಶ್–2, ಗಣಪತಿ –3. ವಿಜಯಲಕ್ಷ್ಮಿ–1, ಹರ್ಷಿತಾ–2, ಜಯಶ್ರೀ–3. 41 ವರ್ಷ ಮೇಲ್ಪಟ್ಟವರ ವಿಭಾಗ: ದಶರಥ–1, ಗೋಪಿಕೃಷ್ಣ –2, ಮಹದೇವಸ್ವಾಮಿ–3. ಎಸ್.ಎಂ.ಉಮಾ–1, ಮಾನಸ–2, ರೂಪಾ ರಮೇಶ್ ತಳವಾರ–3. ವಿಶೇಷ ಸಾಮರ್ಥ್ಯವುಳ್ಳವರ ವಿಭಾಗ: ಕೆ.ಬಸವರಾಜು–1,ಯುವರಾಜ್–2, ಅಜಿತ್–3.
5 ಕಿ.ಮೀ ಓಟ:
18–40 ವಯೋಮಾನ ವಿಭಾಗ: ಪ್ರಥಮ್–1, ಪುರುಷೋತ್ತಮ –2, ನಿತಿನ್–3. ಉಷಾ –1, ಕೊಕ್ಕೊ ಆಟಗಾರ್ತಿ ಚೈತ್ರ–2, ವಿದ್ಯಾ–3. 41 ವರ್ಷ ಮೇಲ್ಪಟ್ಟವರು: ಗಣೇಶ್–1, ರಘುನಂದನ್–2, ಯೋಗೇಶ್ ಸಾಗರ್–3. ಶಾಂತಕುಮಾರಿ–1, ಎಂ.ಎಸ್.ಸರೋಜಾ–2, ಮಾಲಿನಿ–3. 18 ವರ್ಷದೊಳಗಿನವರು: ಚಿರಂಜೀವಿ–1, ವರುಣ್ –2, ಶ್ರೇಯಸ್–3. 3 ಕಿ.ಮೀ ಓಟ: 18 ದೊಳಗಿನವರಿಗೆ: ಪ್ರವೀಣ್–1, ಮೊಹಮ್ಮದ್ ಉವಾನ್ –2, ನಂದನ್ –3.
ಸ್ಪರ್ಧೆಯಲ್ಲಿ ಮೊದಲ ಮೂರು ಸ್ಥಾನ ಪಡೆದವರಿಗೆ ಕ್ರಮವಾಗಿ ₹ 10 ಸಾವಿರ, ₹ 5 ಸಾವಿರ ಹಾಗೂ ₹ 3 ಸಾವಿರ ನೀಡಲಾಯಿತು. 3 ಕಿ.ಮೀ ಓಡಿದ 18 ವರ್ಷದೊಳಗಿನ ಮಕ್ಕಳಿಗೆ ಬೈಸಿಕಲ್ ನೀಡಲಾಯಿತು.
ಸಾಮಾಜಿಕ ಜವಾಬ್ದಾರಿ ಪ್ರದರ್ಶಿಸಿ
ಜಾಗೃತಿ ಓಟದಕ್ಕೆ ಚಾಲನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ‘ಸ್ವಚ್ಛ ಮೈಸೂರು ಆಶಯವನ್ನು ಸಾಕಾರಗೊಳಿಸುವುದು ಪ್ರತಿಯೊಬ್ಬರ ಸಾಮಾಜಿಕ ಜವಾಬ್ದಾರಿಯಾಗಿದೆ. ಕಸ ಸಮರ್ಪಕ ವಿಲೇವಾರಿ ಮಾಡಬೇಕು. ಮನೆಯ ಅಂಗಳ ಚೊಕ್ಕವಾಗಿಡಬೇಕುಪರಿಸರ ಕಾಪಾಡಿದರೆ ಪರಿಸರವು ನಮ್ಮನ್ನು ರಕ್ಷಿಸುತ್ತದೆ. ಮೈಸೂರು ಸ್ವರ್ಗವಾಗಿದ್ದು ಪಾರಂಪರಿಕತೆ ಸಂಸ್ಕೃತಿ ಉಳಿಸಬೇಕು’ ಎಂದರು. ಶಾಸಕರಾದ ಕೆ.ಹರೀಶ್‌ಗೌಡ ಟಿ.ಎಸ್.ಶ್ರೀವತ್ಸ ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಡಿಐಜಿ ವಿಷ್ಣುವರ್ಧನ್ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಜಿಲ್ಲಾ ಪಂಚಾಯಿತಿ ಸಿಇಒ ಯುಕೇಶ್ ಕುಮಾರ್ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್ ಉಪ ಆಯುಕ್ತರಾದ ಜಿ.ಸೋಮಶೇಖರ್ ಸಿ.ಎಸ್.ಮಂಜು ಡಿಸಿಪಿ ಸುಂದರ್ ರಾಜ್ ಕೆಪಿಎ ಉಪ ನಿರ್ದೇಶಕ ಚನ್ನಬಸವಣ್ಣ ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ಅರುಣ್ ಶಿಲ್ಪಿ ಅರುಣ್ ಯೋಗಿರಾಜ್ ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಗೌಡ ಉದ್ಯಮಿ ಶ್ರೀಹರಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.