ಮೈಸೂರು: ದಶಕದ ಬಳಿಕ ‘ಸ್ವಚ್ಛ ನಗರಿ’ ಶ್ರೇಯಕ್ಕೆ ಮೈಸೂರು ಮತ್ತೆ ಪಾತ್ರವಾಗಿದೆ. 2015, 2016ರಲ್ಲಿ ಸತತ ಎರಡು ಬಾರಿ ಅಗ್ರಸ್ಥಾನ ಪಡೆದಿದ್ದ ಸಾಂಸ್ಕೃತಿಕ ನಗರಿಯು, ನಂತರ ರ‍್ಯಾಂಕಿಂಗ್‌ನಲ್ಲಿ ಕುಸಿತವನ್ನೇ ಕಂಡಿತ್ತು.
ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ನಡೆಸಿದ 2024–25ನೇ ಸಾಲಿನ ‘ಸ್ವಚ್ಛ ಸರ್ವೇಕ್ಷಣಾ’ ಸಮೀಕ್ಷೆಯಲ್ಲಿ ‘ಸೂಪರ್ ಸ್ವಚ್ಛ ನಗರ ಲೀಗ್’ ವಿಭಾಗದಲ್ಲಿ ಪ್ರಶಸ್ತಿ ಪಡೆದಿದ್ದು, ನಾಗರಿಕರಲ್ಲಿ ಸಂತಸ ಮೂಡಿಸಿದೆ.
3–10 ಲಕ್ಷ ಜನಸಂಖ್ಯೆಯೊಳಗಿನ ಈ ವಿಭಾಗದಲ್ಲಿ ಉತ್ತರ ಪ್ರದೇಶದ ನೊಯಿಡಾ, ಚಂಡೀಗಢ ನಂತರ ಮೈಸೂರು ಸ್ಥಾನ ಪಡೆದಿದೆ.
2017ರಲ್ಲಿ 5ನೇ ಸ್ಥಾನ ಕಂಡಿತ್ತು. 2021ರಲ್ಲಿ 11 ಸ್ಥಾನ ಪಡೆದದ್ದನ್ನು ಬಿಟ್ಟರೆ ಟಾಪ್–10ರೊಳಗೆ ಸ್ಥಾನ ಪಡೆಯುತ್ತಿತ್ತು. 2023–24ನೇ ಸಾಲಿನಲ್ಲಿ 27ನೇ ಸ್ಥಾನಕ್ಕೆ ಕುಸಿದಿತ್ತು. ಅತ್ಯಂತ ಸ್ವಚ್ಛನಗರಿ ವಿಭಾಗದಲ್ಲಿ ಇಂದೋರ್ ತನ್ನ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ಪಾಲಿಕೆಯು ಕೆಲ ವರ್ಷದ ಹಿಂದೆ ಈ ನಗರಕ್ಕೆ ನಿಯೋಗವೊಂದನ್ನು ಕಳುಹಿಸಿ ಸ್ವಚ್ಛತೆ ಅನುಷ್ಠಾನದ ಮಾಹಿತಿಯನ್ನೂ ಪಡೆದಿತ್ತು.
ರಾಜ್ಯದ ಒಂದೇ ನಗರ: ಪ್ರಸಕ್ತ ಆವೃತ್ತಿಯಲ್ಲಿ ಸೂಪರ್ ಸ್ವಚ್ಛ ನಗರ ಲೀಗ್ ಎನ್ನುವ ಹೊಸ ಪರಿಕಲ್ಪನೆಯನ್ನು ಕೇಂದ್ರ ಸರ್ಕಾರವು ಆರಂಭಿಸಿದ್ದು, ಈ ವಿಭಾಗದಲ್ಲಿ ರಾಜ್ಯದಲ್ಲಿ ಮೈಸೂರು ಮಾತ್ರವೇ ಸ್ಥಾನ ಪಡೆದಿದೆ.
ನಗರದಲ್ಲಿ ನಿತ್ಯವೂ ಸ್ವಚ್ಛತೆಗೆ ಕ್ರಮ ಕೈಗೊಂಡಿರುವುದು. ಜಾಗೃತಿ ಕಾರ್ಯಕ್ರಮಗಳ ಆಯೋಜನೆ, ಶೌಚಾಲಯಗಳ ದುರಸ್ತಿ ಮತ್ತು ಬಳಕೆ, ಸೀವೇಜ್‌ಫಾರಂನಲ್ಲಿ ಕಸ ವಿಲೇವಾರಿಗೆ ಕ್ರಮ, ಘನ ತ್ಯಾಜ್ಯ ವಿಲೇವಾರಿ, ಕಟ್ಟಡ ತ್ಯಾಜ್ಯ ಹಾಗೂ ಎಲೆಕ್ಟ್ರಾನಿಕ್ ತ್ಯಾಜ್ಯ ನಿರ್ವಹಣೆಗೆ ಟೆಂಡರ್ ಕರೆದಿರುವುದನ್ನು ಸ್ವಚ್ಛ ಸರ್ವೇಕ್ಷಣಾ ತಂಡ ಗಮನಿಸಿತ್ತು. ಈ ಎಲ್ಲ ಅಂಶಗಳು ಪ್ರಶಸ್ತಿಯ ಗರಿ ಲಭಿಸಲು ಕಾರಣವಾಗಿವೆ.
ಪ್ರಶಸ್ತಿ ಸ್ವೀಕಾರ: ನವದೆಹಲಿಯ ವಿಜ್ಞಾನ ಭವನದಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ರಾಜ್ಯ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ದೀಪಾ ಚೋಳನ್ ಹಾಗೂ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಶಸ್ತಿ ಪ್ರದಾನ ಮಾಡಿದರು.
ಸ್ವಚ್ಛ ಭಾರತ್ ಮಿಷನ್ ನೋಡಲ್ ಅಧಿಕಾರಿಯೂ ಆದ ಪಾಲಿಕೆ ಎಇಇ ಕೆ.ಎಸ್. ಮೃತ್ಯುಂಜಯ, ಆರೋಗ್ಯಾಧಿಕಾರಿ ಡಾ. ಎನ್.ಪಿ.ವೆಂಕಟೇಶ್, ಎಇಇ ಧನುಷ್ ಪಾಲ್ಗೊಂಡಿದ್ದರು.
ಪೌರ ಕಾರ್ಮಿಕರ ಸಂಭ್ರಮ: ದೇಶದ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಮೈಸೂರಿಗೆ ಪ್ರಶಸ್ತಿ ಬಂದದಕ್ಕೆ ಇಲ್ಲಿನ ಪೌರ ಕಾರ್ಮಿಕರು ಸಿಹಿ ಹಂಚಿ ಸಂಭ್ರಮಿಸಿದರು.
ಪ್ರಶಸ್ತಿ ಘೋಷಣೆ ಬೆನ್ನಲ್ಲೇ ಪಾಲಿಕೆ ಆವರಣದಲ್ಲಿ ನೆರೆದ ಪೌರ ಕಾರ್ಮಿಕರು ಒಬ್ಬರಿಗೊಬ್ಬರು ಸಿಹಿ ಹಂಚಿ ಸಂಭ್ರಮಿಸಿದರು. ‘ನಿದ್ರೆ, ಊಟ ಇಲ್ಲದೆ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದೆವು. ನಮ್ಮ ಪ್ರಯತ್ನಕ್ಕೆ ಅಭಿನಂದನೆ ಸಿಕ್ಕಿರುವುದು ಸಂತಸ ತಂದಿದೆ. ಮೊದಲನೇ ಸ್ಥಾನ ಪಡೆಯಬೇಕು ಎನ್ನುವ ಆಸೆ ಇತ್ತು’ ಎಂದರು.
‘ಮೈಸೂರನ್ನು ಮೊದಲ ಸ್ಥಾನದಲ್ಲಿ ನೋಡುವ ಕನಸಿದೆ. ಮುಂದೆ ಅಧಿಕಾರಿಗಳ ಸಹಕಾರದಿಂದ ಮೊದಲ ಸ್ಥಾನಕ್ಕೆ ಶ್ರಮಿಸುತ್ತೇವೆ. ಸರ್ಕಾರ ಮತ್ತಷ್ಟು ಪೌರ ಕಾರ್ಮಿಕರನ್ನು ನೇಮಕ ಮಾಡಿದರೆ ಅನುಕೂಲ’ ಎಂದರು.
ಸ್ವಚ್ಛ ಸರ್ವೇಕ್ಷಣೆಯಲ್ಲಿ ಮೈಸೂರು ಉತ್ತಮ ಸಾಧನೆ ಮಾಡಿದೆ. ಮುಂದಿನ ಬಾರಿ ಇನ್ನೂ ಉತ್ತಮ ಸಾಧನೆ ಮಾಡಲು ಇದು ಪ್ರೇರಣೆ.– ಕೆ.ಎಸ್.ಮೃತ್ಯುಂಜಯ, ನೋಡಲ್ ಅಧಿಕಾರಿ ಸ್ವಚ್ಛ ಭಾರತ ಮಿಷನ್
ಸೂಪರ್ ಸ್ವಚ್ಛ ನಗರ ಲೀಗ್‌ನಲ್ಲಿ ಮೈಸೂರು ಸ್ಥಾನ ಪಡೆಯಲು ಕಾರಣರಾದ ಎಲ್ಲರಿಗೂ ಧನ್ಯವಾದ. ಮುಂದೆಯೂ ಅತ್ಯುತ್ತಮ ಸ್ವಚ್ಛ ನಗರಿ ಎನಿಸಲು ಎಲ್ಲ ಸಹಕಾರವೂ ಅಗತ್ಯ.– ಶೇಖ್ ತನ್ವೀರ್ ಆಸೀಫ್, ಪಾಲಿಕೆ ಆಯುಕ್ತ
ಸಾಂಸ್ಕೃತಿಕ ರಾಜಧಾನಿಗೆ ಮತ್ತೊಂದು ಗರಿಮೆ ಬಂದಿರುವುದು ಹೆಮ್ಮೆ. ನಗರವನ್ನು ಇನ್ನಷ್ಟು ಸುಂದರವಾಗಿಸಲು ಕೈಜೋಡಿಸೋಣ.– ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಸಂಸದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.