ADVERTISEMENT

ಮೈಸೂರು | ಎಂಡಿಎ; ನಿಯಮಗಳ ರಚನೆಗೆ ಸಮಿತಿ

ಪ್ರಾಧಿಕಾರದ ಕಾರ್ಯವೈಖರಿಗೆ ಬರಲಿದೆ ಹೊಸ ಮಾರ್ಗಸೂಚಿ

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 2:23 IST
Last Updated 10 ಜುಲೈ 2025, 2:23 IST
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ   

ಮೈಸೂರು: ಮೈಸೂರು ಅಭಿವೃದ್ಧಿ ಪ್ರಾಧಿಕಾರದ (ಎಂಡಿಎ) ಕಾರ್ಯ ಚಟುವಟಿಕೆಗಳು ಸುಲಲಿತವಾಗಿ ನಡೆಯಲು ಅನುವಾಗುವಂತೆ ನಿಯಮಗಳ ರಚನೆಗಾಗಿ ಸರ್ಕಾರವು ಅಧಿಕಾರಿಗಳ ಸಮಿತಿ ರಚಿಸಿದೆ.

ರಾಜ್ಯ ಸರ್ಕಾರವು ಕಳೆದ ಬೆಳಗಾವಿ ಅಧಿವೇಶನದ ಸಂದರ್ಭ ಮೈಸೂರು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ ಜಾರಿಗೆ ಸಂಬಂಧ ವಿಧೇಯಕವನ್ನು ಮಂಡಿಸಿತ್ತು. ಮೇ 16ರಂದು ಅದು ಕಾಯ್ದೆಯಾಗಿ ಜಾರಿಗೆ ಬಂದಿತ್ತು. ಈ ಪ್ರಾಧಿಕಾರವು ಕಾರ್ಯ ನಿರ್ವಹಿಸಲು ಅವಶ್ಯವಾದ ನಿಯಮಗಳನ್ನು ರಚಿಸುವ ಜವಾಬ್ದಾರಿಯನ್ನು ಈ ಸಮಿತಿಗೆ ನೀಡಲಾಗಿದೆ. ಹೊಸ ನಿಯಮಗಳೊಂದಿಗೆ ಸರ್ಕಾರಕ್ಕೆ ಶಿಫಾರಸು ಮಾಡಲು ಸಮಿತಿಗೆ ಮೂರು ತಿಂಗಳ ಕಾಲಾವಧಿ ನೀಡಲಾಗಿದೆ.

ಯಾರಿದ್ದಾರೆ ಸಮಿತಿಯಲ್ಲಿ?: ನಗರಾಭಿವೃದ್ಧಿ ಪ್ರಾಧಿಕಾರಗಳು ಹಾಗೂ ನಗರ ಮತ್ತು ಗ್ರಾಮೀಣ ಯೋಜನಾ ವಿಭಾಗದ ಆಯುಕ್ತರು ಈ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಇದೇ ಯೋಜನಾಲಯದ ಜಂಟಿ ನಿರ್ದೇಶಕರು ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ADVERTISEMENT

ನಗರಾಭಿವೃದ್ಧಿ ಇಲಾಖೆಯ ತಾಂತ್ರಿಕ ಕೋಶದ ಜಂಟಿ ನಿರ್ದೇಶಕಿ ವಾಸಂತಿ, ಮೈಸೂರು ವಿಭಾಗೀಯ ಕಚೇರಿಯ ಜಂಟಿ ನಿರ್ದೇಶಕಿ ಪಂಕಜಾ, ಬಿಡಿಎ ಜಂಟಿ ನಿರ್ದೇಶಕ ಹನುಮಂತ ರೆಡ್ಡಿ, ಉಪನಿರ್ದೇಶಕ ಎಸ್. ವಿಶ್ವ, ನಗರಾಭಿವೃದ್ಧಿ ಇಲಾಖೆ ಉಪನಿರ್ದೇಶಕ ಸಿ.ಎನ್. ರಾಘವೇಂದ್ರ, ಹುಬ್ಬಳ್ಳಿ–ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಈ ಸಮಿತಿಯ ಸದಸ್ಯರಾಗಿದ್ದಾರೆ. ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಸದಸ್ಯ ಸಂಚಾಲಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಏನೇನು ಜವಾಬ್ದಾರಿ?

ಪ್ರಾಧಿಕಾರಕ್ಕೆ ಅಧ್ಯಕ್ಷರು ಸದಸ್ಯರ ನೇಮಕದ ಷರತ್ತುಗಳ ರಚನೆ ಟೆಂಡರ್‌ ಅಂಗೀಕಾರ ಸ್ಕೀಂ ಮಂಜೂರಾತಿ ಪುರೋಭಿವೃದ್ಧಿ ತೆರಿಗೆ ದರ ನಿಗದಿ ಸ್ವತ್ತು ಮಾರಾಟ ಮತ್ತು ವರ್ಗಾವಣೆಗೆ ಸಂಬಂಧಿಸಿದ ನಿಯಮಗಳ ರಚನೆ ಲೆಕ್ಕಪರಿಶೋಧನೆ ಮೈಸೂರು ಪಾರಂಪರಿಕ ಕಟ್ಟಡಗಳ ಸಂರಕ್ಷಣಾ ಆಯೋಗದ ಅಧಿಕಾರ ಹಾಗೂ ಕಾರ್ಯವಿಧಾನಗಳು ಸೇರಿದಂತೆ ಹತ್ತು ಹಲವು ವಿಷಯಗಳಿಗೆ ಸಂಬಂಧಿಸಿದ ನಿಯಮಗಳ ರಚನೆಯ ಜವಾಬ್ದಾರಿಯನ್ನು ಈ ಸಮಿತಿಗೆ ನೀಡಿ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಕೆ. ಲತಾ ಆದೇಶ ಹೊರಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.