ADVERTISEMENT

ಮೈಸೂರು | ಮನಸೆಳೆಯುವ ‘ಬೆಕ್ಕುಗಳ ಮ್ಯೂಸಿಯಂ’: ಸಾಕಾಣಿಕೆ ಬಗ್ಗೆಯೂ ಜಾಗೃತಿ

ಶಿವಪ್ರಸಾದ್ ರೈ
Published 24 ಜನವರಿ 2026, 6:05 IST
Last Updated 24 ಜನವರಿ 2026, 6:05 IST
   

ಮೈಸೂರು: ಪ್ರಾಣಿ ಪ್ರೀತಿಯು ಮನುಷ್ಯನಲ್ಲಿ ನಂಬಲಸಾಧ್ಯ ಬದಲಾವಣೆ ತರುತ್ತದೆ. ನಗರದ ಯುವಕರೊಬ್ಬರು ತಮ್ಮ ಬೆಕ್ಕು ಅಪಘಾತದಿಂದ ಸಾವನ್ನಪ್ಪಿದ ಘಟನೆಯಿಂದ ಪ್ರೇರಣೆಗೊಂಡು ಬೆಕ್ಕುಗಳಿಗೆ ‘ಸೂರು’ ನಿರ್ಮಿಸಿ, ಮ್ಯೂಸಿಯಂನ ಸ್ಪರ್ಶ ನೀಡಿದ್ದಾರೆ.

ಬೆಂಗಾಲ್‌ ತಳಿಯ ಬೆಕ್ಕುಗಳು

ನಂಜನಗೂಡು ರಸ್ತೆಯಲ್ಲಿ ಮಧುವನದ ಎದುರು ಶರತ್‌ ಅವರು ₹50 ಲಕ್ಷ ವೆಚ್ಚದಲ್ಲಿ ‘ಜಿನ್ ಮಿನ್ ಕ್ಯಾಟ್ ವರ್ಲ್ಡ್’ ಹೆಸರಿನಲ್ಲಿ ಬೆಕ್ಕುಗಳ ಸಂಗ್ರಹಾಲಯ ನಿರ್ಮಿಸಿದ್ದು, ಪ್ರವಾಸಿಗರಿಗೂ ವೀಕ್ಷಣೆಗೆ ವ್ಯವಸ್ಥೆ ಮಾಡಿದ್ದಾರೆ. ಬೆಕ್ಕು ಸಾಕಾಣಿಕೆಯ ಜಾಗೃತಿ ಮೂಡಿಸುವ ಕೆಲಸವೂ ನಡೆಯುತ್ತಿದೆ. ಹೊಸ ಯೋಚನೆಯ ಸಂಗ್ರಹಾಲಯವನ್ನು ಜನ ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ.

ಜಿನ್ ಮಿನ್ ಕ್ಯಾಟ್ ವರ್ಲ್ಡ್‌ನಲ್ಲಿರುವ ‌ಬೆಕ್ಕು

ಬೆಕ್ಕುಗಳು ಓಡಾಡಲು ವಿಶಾಲವಾದ ಗೂಡುಗಳಿವೆ. ಮೂರು ತಿಂಗಳ ಹಿಂದೆ ಸ್ನೇಹಿತರಿಂದ ಪಡೆದ 14 ವಿವಿಧ ತಳಿಯ 20 ಬೆಕ್ಕುಗಳ ಪೋಷಣೆಯೂ ನಡೆದಿದೆ. ಈ ವಾತಾವರಣದಲ್ಲಿ ಅವು ಬದುಕುತ್ತವೆಯೇ, ಅವಶ್ಯಕತೆಗಳೇನು ಎಂಬುದನ್ನು ಅಧ್ಯಯನ ನಡೆಸಿದ ಬಳಿಕ ಜ.19ರಂದು ಜನರಿಗೆ ಪ್ರವೇಶ ನೀಡಿದ್ದಾರೆ. 

ADVERTISEMENT
ಬೆಕ್ಕು

₹ 1.50 ಲಕ್ಷ ಮೌಲ್ಯದ ಯುಎಸ್‌ಎ ಮೂಲದ ಮೈನೆ ಕೂನ್‌ ತಳಿಯಿಂದ ತೊಡಗಿ ಭಾರತೀಯ ತಳಿಗಳನ್ನು ಸಾಕಲಾಗುತ್ತಿದೆ. ಸೈಬೀರಿಯನ್‌ ಬೆಕ್ಕು, ಪರ್ಷಿಯನ್ ಬೆಕ್ಕು, ಬೆಂಗಾಲ್, ಸ್ಫಿಂಕ್ಸ್ , ಹಿಮಾಲಿನ್, ರಾಗ್‌ ಡಾಲ್‌ ಮುಂತಾದ ಅಪರೂಪದ ತಳಿಗಳನ್ನು ಕಾಣಲು ಸಾಧ್ಯ. ಕೆಲವೊಂದು ಮರಿಗಳನ್ನು ದತ್ತು ಸ್ವೀಕರಿಸಿ ಸಾಕುತ್ತಿದ್ದಾರೆ. ಲಸಿಕೆ, ಆಹಾರ ನಿರ್ವಹಣೆಗಾಗಿ ಸಿಬ್ಬಂದಿ ನಿಯೋಜಿಸಿದ್ದಾರೆ.

ಜಿನ್ ಮಿನ್ ಕ್ಯಾಟ್ ವರ್ಲ್ಡ್‌ನಲ್ಲಿ ಸಿಬ್ಬಂದಿ ಬೆಕ್ಕುಗಳನ್ನು ಮುದ್ದಾಡುತ್ತಿರುವುದು 

ಬೆಕ್ಕಿನ ಪ್ರದರ್ಶನಕ್ಕಷ್ಟೇ ಮ್ಯೂಸಿಯಂ ಸೀಮಿತವಾಗಿಲ್ಲ. ಬೆಕ್ಕು ಸಾಕುವವರಿಗೆ ಬೇಕಾದ ಮಾಹಿತಿ ಕೋಶವೂ ಇಲ್ಲಿದೆ. ತಳಿಗಳ ಪರಿಚಯ, ಬೆಕ್ಕಿನ ರೋಗಗಳು, ಔಷಧಿ, ಬೆಕ್ಕು ಮಲಗುವ ವಿಧಗಳು, ಲಾಲನೆ–ಪಾಲನೆಯ ಸೂಕ್ಷ್ಮ ಮಾಹಿತಿಯನ್ನೂ ಭಿತ್ತಿ ಪತ್ರಗಳ ಮೂಲಕ ಪ್ರದರ್ಶಿಸಲಾಗಿದೆ. ಬೆಕ್ಕಿನ ಕಾರ್ಟೋನ್‌ ಪಾತ್ರಗಳು, ಕಲಾಕೃತಿಗಳು ಗಮನಸೆಳೆಯುತ್ತವೆ.

ಜಿನ್ ಮಿನ್ ಕ್ಯಾಟ್ ವರ್ಲ್ಡ್‌ ಸಂಸ್ಥಾಪಕ ಶರತ್‌ ಪ್ರಜಾವಾಣಿ ಚಿತ್ರಗಳು: ಅನೂಪ್ ರಾಘ ಟಿ.

‘ಬೆಕ್ಕಿನಲ್ಲಿ ಸುಮಾರು 50 ತಳಿಗಳಿದ್ದರೂ ಜನರಿಗೆ ಮಾಹಿತಿಯಿಲ್ಲ. ಪೋಷಣೆಯ ಬಗ್ಗೆ ನಿರ್ಲಕ್ಷ್ಯವಿದೆ. ಅದರ ಬಗ್ಗೆ ಜಾಗೃತಿ ಮೂಡಿಸಲು ಬೆಕ್ಕಿನ ಮ್ಯೂಸಿಯಂ ಆರಂಭಿಸಿದ್ದೇನೆ. ನಿರ್ವಹಣೆ ಸಲುವಾಗಿಯೇ ಮಕ್ಕಳಿಗೆ ₹69, ಉಳಿದವರಿಗೆ ₹99 ಶುಲ್ಕ ನಿಗದಿಪಡಿಸಲಾಗಿದೆ’ ಎನ್ನುತ್ತಾರೆ ಶರತ್‌.

ಮೈಸೂರಿನ ನಂಜನಗೂಡು ರಸ್ತೆಯಲ್ಲಿರುವ ಜಿನ್ ಮಿನ್ ಕ್ಯಾಟ್ ವರ್ಲ್ಡ್‌ನಲ್ಲಿ ಬೆಕ್ಕುಗಳಿಗೆ ಓಡಾಡಲು ವಿಶಾಲ ಗೂಡು ನಿರ್ಮಿಸಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.