
ಮೈಸೂರು: ಇಲ್ಲಿನ ಚಾಮರಾಜೇಂದ್ರ ಮೃಗಾಲಯದಲ್ಲಿ ತಯಾರಾಗುವ ಸಾವಯವ ಗೊಬ್ಬರವು ಮಾರುಕಟ್ಟೆಗಿಂತಲೂ ಕಡಿಮೆ ದರದಲ್ಲಿ ಸಿಗುತ್ತಿದೆ. ಹೊರಗೆ ಎರೆಹುಳು ಗೊಬ್ಬರ ಕೆ.ಜಿಗೆ ₹ 50ಕ್ಕೂ ಹೆಚ್ಚಿದ್ದರೆ, ಇಲ್ಲಿ ₹ 15 ಇದೆ. ಹೀಗಾಗಿ, ವಿವಿಧ ಜಿಲ್ಲೆಗಳ ರೈತರಿಂದ ಬೇಡಿಕೆಯೂ ಹೆಚ್ಚಾಗಿದೆ.
ಆನೆ, ಜಿಂಕೆ, ಕಾಟಿ, ಕಾಡೆಮ್ಮೆ, ಘೇಂಡಾಮೃಗ, ನೀರಾನೆ, ಜಿರಾಫೆ ಸೇರಿದಂತೆ ಪ್ರಾಣಿಗಳ ಲದ್ದಿಯನ್ನು ಸಂಗ್ರಹಿಸಿ, ಅದಕ್ಕೆ ‘ಎರೆಹುಳು’ಗಳನ್ನು ಸೇರಿಸಿ ತಿಂಗಳಿಗೆ 15 ಟನ್‌ನಷ್ಟು ‘ಎರೆಹುಳು ಗೊಬ್ಬರ’ ಉತ್ಪಾದನೆ ಮಾಡಲಾಗುತ್ತಿದೆ.
‘ಪರೀಕ್ಷೆ ಮಾಡಿಯೇ ಪ್ರತಿ ಪ್ರಾಣಿಗೂ ನೀಡುವ ಆಹಾರದಲ್ಲಿ ಉತ್ಕೃಷ್ಟ ಪೌಷ್ಟಿಕಾಂಶವಿರುತ್ತದೆ. ರಾಸಾಯನಿಕ ಮುಕ್ತವಾದ ಸಾವಯವ ಗೊಬ್ಬರವನ್ನು ರೈತರು ತಮ್ಮ ಕೃಷಿಭೂಮಿಗೆ ಬಳಸಿ ಹೆಚ್ಚು ಇಳುವರಿ ಪಡೆಯಬಹುದು’ ಎನ್ನುತ್ತಾರೆ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕಿ ಪಿ.ಅನುಷಾ.
‘ಪ್ರಾಣಿಗಳಿಂದ ನಿತ್ಯ 2ರಿಂದ 3 ಟನ್ ಲದ್ದಿ ಸಂಗ್ರಹವಾಗುತ್ತಿದ್ದು, ಅದರೊಂದಿಗೆ ಮೃಗಾಲಯದಲ್ಲಿ ಮರಗಳಿಂದ ಉದುರಿದ ಎಲೆಗಳು, ಪ್ರಾಣಿಗಳು ತಿಂದು ಬಿಟ್ಟ ಮೇವು, ಸೊಪ್ಪನ್ನು ಸೇರಿಸಲಾಗುತ್ತದೆ. ಶಿವಮೊಗ್ಗದಿಂದ ತರಿಸಲಾದ ಎರೆಹುಳು ಹಾಸಿಗೆಯಂಥ ಪ್ರತಿ ಗುಡ್ಡೆಯನ್ನು ರಚಿಸಿ ಬಿಡಲಾಗುತ್ತದೆ. ಪ್ರತಿ ಆಯತಾಕಾರದ ಗುಡ್ಡೆಯು 6 ಟನ್ ಇರುತ್ತದೆ’ ಎಂದು ವಿವರಿಸಿದರು.
ಮೂವರು ಸಿಬ್ಬಂದಿ: ಮೃಗಾಲಯದ ಸಿಬ್ಬಂದಿಗಳಾದ ಸಿದ್ದರಾಜು, ಭರತ್ ಮತ್ತು ಶ್ರೀನಿವಾಸ್ ‘ಎರೆಹುಳು ಗೊಬ್ಬರ’ವನ್ನು ತಯಾರಿಸುತ್ತಿದ್ದಾರೆ. ಒಂದೊಂದು ಗುಡ್ಡೆಗೂ ಎರಡು ದಿನ ನೀರು ಹಾಯಿಸಿ, ತಂಪು ಮಾಡುತ್ತಾರೆ. 3 ಕೆ.ಜಿಯಷ್ಟು ಎರೆಹುಳಗಳನ್ನು ಬಿಟ್ಟು, ನಂತರ ಬೇರ್ಪಡಿಸುತ್ತಾರೆ. ಒಣಗಿದ ನಂತರ ಕಸ ಹಾಗೂ ಕಡ್ಡಿಯನ್ನು ಯಂತ್ರದಿಂದ ಸೋಸಿ ಗೊಬ್ಬರದ ಮೂಟೆ ಮಾಡುತ್ತಿದ್ದಾರೆ. ಒಣಗಿಸಿದ ನಂತರ ಒಂದು ಗುಡ್ಡೆಯಿಂದ 5 ಟನ್‌ನಷ್ಟು ಗೊಬ್ಬರ ಸಿಗುತ್ತದೆ.
ಎರೆಹುಳಗಳನ್ನು ಇಲಿ– ಹೆಗ್ಗಣಗಳಿಂದ ರಕ್ಷಿಸಲು ಬಲೆಗಳನ್ನು ಘಟಕದ ಸುತ್ತಲೂ ಹಾಕಲಾಗಿದೆ. ಇಲಿ ಬೋನುಗಳನ್ನು ಇರಿಸಲಾಗಿದೆ. ‘ವಿವಿಧ ಜಿಲ್ಲೆಗಳ ರೈತರು ಖರೀದಿಗೆ ಬರುತ್ತಿದ್ದರೂ, ಅವರಲ್ಲಿ ಕೊಡಗಿನ ಕಾಫಿ ತೋಟದವರೇ ಹೆಚ್ಚು’ ಎಂದು ಸಾರ್ವಜನಿಕ ಸಂಪರ್ಕ ಅಧಿಕಾರಿ ನಿಶ್ಚಲ್‌ಗೌಡ ತಿಳಿಸಿದರು.
‘ವಾರ್ಷಿಕ ₹ 15 ಲಕ್ಷ ಆದಾಯ’
‘ಮೃಗಾಲಯದ ಆದಾಯದ ಮೂಲಗಳಲ್ಲಿ ಎರೆಹುಳ ಗೊಬ್ಬರ ಮಾರಾಟವೂ ಸೇರಿದೆ. 2024–25ನೇ ಸಾಲಿನಲ್ಲಿ 100 ಟನ್ ಮಾರಾಟ ಮಾಡಲಾಗಿದ್ದು ₹ 15 ಲಕ್ಷದಷ್ಟು ಆದಾಯ ದೊರೆತಿದೆ’ ಎಂದು ಮೃಗಾಲಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಅನುಷಾ ‘ಪ್ರಜಾವಾಣಿ’ಗೆ ತಿಳಿಸಿದರು.
‘ಪ್ರಾಣಿತ್ಯಾಜ್ಯವನ್ನು ಆದಾಯವಾಗಿ ಬದಲಿಸಲು ಗೊಬ್ಬರ ತಯಾರಿಕೆಯ ಕಾರ್ಯವು ದಶಕಗಳಿಂದಲೂ ನಡೆದಿದೆ. ಈ ಬಗ್ಗೆ ಬಹಳಷ್ಟು ಜನರಿಗೆ ಗೊತ್ತಿಲ್ಲ. ಗೊಬ್ಬರದ ಸಂಗ್ರಹವೂ ಹೆಚ್ಚಿದ್ದು ಬೇಡಿಕೆ ತಕ್ಕಂತೆ ಪೂರೈಕೆ ನಡೆದಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.