ಹುಣಸೂರು: ರಾಷ್ಟ್ರೀಯ ಹುಲಿ ಸಂರಕ್ಷಣಾ ತಾಣಗಳಲ್ಲಿ ಅಗತ್ಯ ಸಿಬ್ಬಂದಿ ಇಲ್ಲದೇ ನಲುಗುತ್ತಿದೆ. ನಾಗರಹೊಳೆ ಹುಲಿ ಸಂರಕ್ಷಿತಾ ಅರಣ್ಯಕ್ಕೆ ಮಂಜೂರಾದ 415 ಹುದ್ದೆಗಳ ಪೈಕಿ 149 ಸಿಬ್ಬಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮಲೆ ಮಹದೇಶ್ವರ ಅರಣ್ಯದಲ್ಲಿ ಹುಲಿಗಳ ಹತ್ಯೆ ಪ್ರಕರಣ ರಾಜ್ಯದ ಬಹುತೇಕ ಹುಲಿ ಸಂರಕ್ಷಣಾ ತಾಣಗಳಿಗೆ ಎಚ್ಚರಿಕೆ ಗಂಟೆಯಾದರೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ ಎಂಬುದು ಜನರ ಆರೋಪ.
ರಾಷ್ಟ್ರೀಯ ಹುಲಿ ಸಂರಕ್ಷಣಾ ತಾಣಗಳಲ್ಲಿ ತನ್ನದೇ ಛಾಪು ಮೂಡಿಸಿರುವ ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ 843 ಚದರ ಕಿ.ಮೀ ವ್ಯಾಪ್ತಿಯಲ್ಲಿ ಹರಡಿಕೊಂಡಿದ್ದು, ಕೇರಳ ಗಡಿಯನ್ನು ಹಂಚಿಕೊಂಡಿದೆ. ಅರಣ್ಯ ನಿರ್ವಹಣೆ ಜವಾಬ್ದಾರಿ ಹೊತ್ತಿರುವ ಇಲಾಖೆಯ ಬೇಡಿಕೆಗೆ ತಕ್ಕಷ್ಟು ಸಿಬ್ಬಂದಿ ಇಲ್ಲದೇ ನ್ಯಾಯ ಸಮ್ಮತ ಕರ್ತವ್ಯ ನಿರ್ವಹಿಸಲು ಹರಸಾಹಸಪಡಬೇಕಾಗಿದೆ.
ನಾಗರಹೊಳೆ ಅರಣ್ಯದಲ್ಲಿ ಹುಲಿ ಸಂರಕ್ಷಣೆಗಾಗಿ ಸ್ಥಾಪಿಸಿರುವ ಟೈಗರ್ ಟಾಸ್ಕ್ ಫೋರ್ಸ್ ಕರ್ತವ್ಯ ನಿರ್ವಹಿಸುತ್ತಿದ್ದು, ಈ ಘಟಕದಲ್ಲಿ ಪ್ರತಿ ತಂಡಕ್ಕೆ 20 ಸಿಬ್ಬಂದಿ ನಿಯೋಜಿಸಲಾಗಿದೆ. ಆದರೆ ಈ ಘಟಕ ಕನಿಷ್ಠ ಸಿಬ್ಬಂದಿಯೊಂದಿಗೆ ಕೆಲಸ ನಿರ್ವಹಿಸಬೇಕಾದ ಪರಿಸ್ಥಿತಿ ಎದುರಾಗಿದೆ.
‘ನಾಗರಹೊಳೆ ಅರಣ್ಯದಲ್ಲಿ ಕಳ್ಳಬೇಟೆ ತಡೆಗೆ 54 ಕಡೆ ಶಿಬಿರ ಸ್ಥಾಪಿಸಿದ್ದು, ಇದರಲ್ಲಿ ಅತಿ ಹೆಚ್ಚು 11 ಕ್ಯಾಂಪ್ ಹುಣಸೂರು ವಲಯದಲ್ಲಿವೆ. ಆನೆಚೌಕೂರು ವಲಯದಲ್ಲಿ 10, ವೀರನಹೊಸಹಳ್ಳಿ ವಲಯದಲ್ಲಿ 8, ಕಲ್ಲಹಳ್ಳ 5, ನಾಗರಹೊಳೆ 4 ಮೇಟಿಕುಪ್ಪೆ 6, ಅಂತರಸಂತೆ 4, ಡಿ.ಬಿ.ಕುಪ್ಪೆ 6 ಕ್ಯಾಂಪ್ ಸ್ಥಾಪಿಸಿ ಕಳ್ಳಬೇಟೆಗೆ ಕಡಿವಾಣ ಹಾಕಿದ್ದರೂ ಕೆಲಸ ನಿರ್ವಹಿಸಲು ಸಿಬ್ಬಂದಿ ಅವಶ್ಯವಿದೆ’ ಎನ್ನುತ್ತಾರೆ ನಾಗರಹೊಳೆ ಹುಲಿ ಯೋಜನಾ ನಿರ್ದೇಶಕಿ ಸೀಮಾ.
ಸೇರ್ಪಡೆ:
643 ಚದರ ಕಿ.ಮಿ. ವ್ಯಾಪ್ತಿಯಲ್ಲಿದ್ದ ನಾಗರಹೊಳೆ ಅರಣ್ಯಕ್ಕೆ ಹುಣಸೂರು ಪ್ರಾದೇಶಿಕ ಅರಣ್ಯಕ್ಕೆ ಸೇರಿದ 200 ಚದರ ಕಿ.ಮಿ. ಬಫರ್ ಜೋನ್ ಅರಣ್ಯವನ್ನು ಸೇರಿಸಲಾಗಿದೆ. ಇದಕ್ಕೆ ತಕ್ಕಂತೆ ಹೆಚ್ಚುವರಿ ಸಿಬ್ಬಂದಿ ನಿಯೋಜನೆ ಮತ್ತು ಕಳ್ಳ ಬೇಟೆ ನಿಗ್ರಹ ಘಟಕ ನಿರ್ಮಿಸಲು ಮನವಿ ಮಾಡಿದ್ದು, ಇದರಿಂದ ಅಕ್ರಮ ಭೇಟೆ ಹಾಗೂ ಮರಗಳ ಹನನ ಕಡಿವಾಣಕ್ಕೆ ಸಹಕಾರಿಯಾಗಲಿದೆ’ ಎಂದು ತಿಳಿಸಿದರು.
ನಾಗರಹೊಳೆ ಹುಲಿ ಸಂರಕ್ಷಿತಾ ಅರಣ್ಯಕ್ಕೆ ಮಂಜೂರಾದ 415 ಹುದ್ದೆಗಳ 149 ಸಿಬ್ಬಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿವಿಧ ಹಂತಗಳಲ್ಲಿ 266 ಸಿಬ್ಬಂದಿ ಕೊರತೆ ಇದೆ. ವಲಯ ಸಂರಕ್ಷಣಾಧಿಕಾರಿಗಳ ಹುದ್ದೆ 10ರಲ್ಲಿ 3 ಖಾಲಿ, ಸಹಾಯಕ ವಲಯ ಸಂರಕ್ಷಣಾಧಿಕಾರಿ 62ರಲ್ಲಿ 19, ಅರಣ್ಯ ರಕ್ಷಕ (ಫಾರೆಸ್ಟ್ ಗಾರ್ಡ್) 209ರ ಪೈಕಿ 148 ಹುದ್ದೆ ಖಾಲಿ, ಅರಣ್ಯ ವೀಕ್ಷಕರ ಹುದ್ದೆ 168ರಲ್ಲಿ 91 ಸೇರಿದಂತೆ 4 ಚಾಲಕರ ಹುದ್ದೆ ಖಾಲಿಯೊಂದಿಗೆ ಇಲಾಖೆ ಕರ್ತವ್ಯ ನಿರ್ವಹಿಸಿದೆ.
ಇರುವ ಸಿಬ್ಬಂದಿಯಲ್ಲೇ ಗಸ್ತು ನಿಯೋಜನೆ
‘ನಾಗರಹೊಳೆ ಹುಲಿ ಸಂರಕ್ಷಿತ ತಾಣದ ಗಡಿ ಪ್ರದೇಶದಲ್ಲಿ ಜನ– ಜಾನುವಾರು ಸಂಚಾರಕ್ಕೆ ನಿರ್ಬಂಧವಿದ್ದು ಮಲೆ ಮಹದೇಶ್ವರ ಅರಣ್ಯದಲ್ಲಿ ಸಂಭವಿಸಿದ ಘಟನೆಯ ಹಿನ್ನೆಲೆಯಲ್ಲಿ ಇರುವ ಸಿಬ್ಬಂದಿಯನ್ನು ಬಳಸಿ ವಿವಿಧ ಹಂತದಲ್ಲಿ ಗಸ್ತು ನಿಯೋಜಿಸಲಾಗಿದೆ. ಅಲ್ಲಿನ ಪರಿಸ್ಥಿತಿಗೂ ಇಲ್ಲಿನ ಪರಿಸ್ಥಿತಿಗೂ ವ್ಯತ್ಯಾಸವಿದೆ’ ಎಂದು ನಾಗರಹೊಳೆ ಡಿಸಿಎಫ್ ಸೀಮಾ ಮಾಹಿತಿ ನೀಡಿದರು.
50 ಕಡೆಗಳಲ್ಲಿ ‘ಎಐ’ ಕ್ಯಾಮೆರಾ
ನಾಗರಹೊಳೆ ಅರಣ್ಯದಲ್ಲಿ ಸಿಬ್ಬಂದಿ ಕೊರತೆ ನೀಗಿಸಲು ಟೈಗರ್ ಫೌಂಡೇಶನ್ ಯೋಜನೆಯಿಂದ ‘ಗರುಡ’ ಯೋಜನೆಯಡಿ ₹ 9 ಲಕ್ಷ ವೆಚ್ಚದಲ್ಲಿ ಕೃತಕ ಬುದ್ಧಿಮತ್ತೆ (ಏ.ಐ) ತಂತ್ರಜ್ಞಾನದ ಸಿ.ಸಿ. ಟಿವಿ ಕ್ಯಾಮೆರಾಗಳನ್ನು ಅರಣ್ಯದಂಚಿನ ಗ್ರಾಮಗಳ 50ಕ್ಕೂ ಹೆಚ್ಚು ಅತಿ ಸೂಕ್ಷ್ಮ ಪ್ರದೇಶದಲ್ಲಿ ಅಳವಡಿಸಲಾಗಿದೆ. ಇದರಿಂದ ಅಕ್ರಮ ಪ್ರವೇಶ ನಿರ್ವಹಣೆ ಹಾಗೂ ಕಾಡು ಪ್ರಾಣಿ ಉಪಟಳ ನಿಗ್ರಹಿಸಲು ಸಹಾಯವಾಗಲಿದೆ’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.