ADVERTISEMENT

ನಾಗರಹೊಳೆ: ಬಿದಿರು ಬಿತ್ತನೆ ಚುರುಕು

ಅರಣ್ಯದ 7 ವಲಯಗಳ ಆಯ್ದ ಪ್ರದೇಶದಲ್ಲಿ ಯೋಜನೆ; ಅರಣ್ಯ ಆಹಾರ ಸಮತೋಲಕ್ಕೆ ಪೂರಕ

​ಪ್ರಜಾವಾಣಿ ವಾರ್ತೆ
Published 8 ಜುಲೈ 2025, 2:39 IST
Last Updated 8 ಜುಲೈ 2025, 2:39 IST
ನಾಗರಹೊಳೆ ಅರಣ್ಯದಲ್ಲಿ ಸೋಮವಾರ ಬಿದಿರು ಬಿತ್ತನೆ ಕಾರ್ಯ ಬಿರುಸಿನಿಂದ ನಡೆಯಿತು
ನಾಗರಹೊಳೆ ಅರಣ್ಯದಲ್ಲಿ ಸೋಮವಾರ ಬಿದಿರು ಬಿತ್ತನೆ ಕಾರ್ಯ ಬಿರುಸಿನಿಂದ ನಡೆಯಿತು   

ಹುಣಸೂರು: ‘ನಾಗರಹೊಳೆ ಅರಣ್ಯದಲ್ಲಿ 843 ಚದರ ಕಿ.ಮೀ ವ್ಯಾಪ್ತಿಯ ಕೆರೆ–ಕಟ್ಟೆ ಮತ್ತು ಆಯ್ದ ಪ್ರದೇಶದಲ್ಲಿ ಬಿದಿರು ಬಿತ್ತನೆ ಕಾರ್ಯ ನಡೆದಿದ್ದು, ಮುಂದಿನ ದಿನಗಳಲ್ಲಿ ಅರಣ್ಯದ ಸಸ್ಯಾಹಾರ ಜೀವಿಗಳಿಗೆ ಉತ್ತಮ ಆಹಾರ ದೊರೆಯಲಿದೆ’ ಎಂದು ನಾಗರಹೊಳೆ ಹುಲಿ ಯೋಜನಾ ಕಚೇರಿ ಎಸಿಎಫ್‌ ಲಕ್ಷ್ಮೀಕಾಂತ್‌ ಹೇಳಿದರು.

ನಾಗರಹೊಳೆ ಅರಣ್ಯದ 7 ವಲಯಗಳ ಆಯ್ದ ಪ್ರದೇಶದಲ್ಲಿ ಬಿದಿರು ಬಿತ್ತನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಅರಣ್ಯದಲ್ಲಿ ಬಿದಿರು ತನ್ನದೇ ಪ್ರಾಮುಖ್ಯತೆ ಹೊಂದಿದ್ದು, ಪ್ರಾಣಿಗಳಿಗೆ ಆಹಾರ ಮಾತ್ರವಲ್ಲದೇ ಮಣ್ಣಿನಲ್ಲಿ ತೇವಾಂಶ ಹಿಡಿದಿಡಲು ಸಹಕಾರವಾಗಲಿದೆ. 2015–16ರಲ್ಲಿ ಏಕಾಏಕಿ ಬಿದಿರು ಕಣ್ಮರೆ ಆಗುವ ಪರಿಸ್ಥಿತಿ ಎದುರಾಗಿ ಆನೆ, ಜಿಂಕೆ ಸೇರಿದಂತೆ ಸಸ್ಯಾಹಾರ ಪ್ರಾಣಿಗಳಿಗೆ ಆಹಾರದ ಸಮಸ್ಯೆ ಎದುರಾಗಿತ್ತು. ಅಂದಿನಿಂದ ಪ್ರತಿ ವರ್ಷವೂ ಒಂದೊಂದು ಹಂತದಲ್ಲಿ ಬಿದಿರು ಬೆಳೆಯಲು ಇಲಾಖೆ ಕ್ರಮವಹಿಸುತ್ತಿದೆ’ ಎಂದರು.

‘ಈ ಸಾಲಿನಲ್ಲಿ ಮುಂಗಾರು ಉತ್ತಮವಾಗಿದ್ದು, ಕೆರೆ–ಕಟ್ಟೆಗಳು ತುಂಬಿವೆ. ಅರಣ್ಯದಲ್ಲಿನ ತೇವಾಂಶವು ಬಿದಿರು ಬಿತ್ತನೆ ಮೊಳಕೆ ಒಡೆಯಲು ಪೂರಕವಾಗಿದ್ದು, ಆನೆಚೌಕೂರು, ಹುಣಸೂರು, ಕಲ್ಲಹಳ್ಳಿ ಮತ್ತು ನಾಗರಹೊಳೆ ವಲಯ ಬಿಟ್ಟು ಉಳಿದ ವಲಯದಲ್ಲಿ 1 ಕ್ವಿಂಟಾಲ್‌ ಬಿದಿರು ಬೀಜ ಬಿತ್ತಲಾಗಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಅರಣ್ಯದಲ್ಲಿ ಸಾಮಾನ್ಯವಾಗಿ ಬೆಳೆಯುವ ಕಾಡು ಜಾತಿ ಸಸ್ಯ ಪ್ರಭೇದಗಳ ಬಿತ್ತನೆ ಕಾರ್ಯವೂ ನಡೆದಿದ್ದು, ಕೆಲವು ಪಾರಂಪರಿಕ ಜಾತಿ ಮರಗಳನ್ನು ಸಂರಕ್ಷಿಸುವ ದೃಷ್ಟಿಯಿಂದ ಅವುಗಳ ಬೀಜ ಸಂಗ್ರಹಿಸಿ ಮಣ್ಣಿನ ಉಂಡೆಗಳಲ್ಲಿ ಬೀಜ ಇಟ್ಟು ಕೆರೆ– ಕಟ್ಟೆಗಳ ಅಂಚಿನಲ್ಲಿ ಹಾಕುತ್ತಿದ್ದೇವೆ. ಇದರಿಂದ ಅರಣ್ಯದಲ್ಲಿ ಪಾರಂಪರಿಕ ಪ್ರಬೇಧ ಕಣ್ಮರೆ ಆಗದಂತೆ ಕ್ರಮವಹಿಸಲು ಸಹಕಾರವಾಗಲಿದೆ’ ಎಂದರು.

‘ಮಾನವ ಆನೆ ಸಂಘರ್ಷಕ್ಕೆ ಕಡಿವಾಣ’

‘ಅರಣ್ಯದಲ್ಲಿ ಬಿದಿರು ಹೇರಳವಾಗಿ ಲಭ್ಯವಾಗುವುದರಿಂದ ಆನೆಗಳು ಅರಣ್ಯದಿಂದ ಹೊರಕ್ಕೆ ಹೋಗುವ ಪ್ರಮಾಣ ಕಡಿಮೆ ಆಗಲಿದ್ದು ಇದರಿಂದ ಮಾನವ ಮತ್ತು ಆನೆ ಸಂಘರ್ಷಕ್ಕೆ ಕಡಿವಾಣ ಬೀಳಲಿದೆ. 4 ವರ್ಷದ ಹಿಂದೆ ಬಿತ್ತನೆ ಮಾಡಿದ ಬಿದಿರು ಈಗ 3 ರಿಂದ 4 ಅಡಿ ಬೆಳೆದು ಪ್ರಾಣಿಗಳಿಗೆ ಉತ್ತಮ ಆಹಾರವಾಗಿದೆ’ ಎಂದು ನಾಗರಹೊಳೆ ಹುಲಿ ಯೋಜನೆ ಎಸಿಎಫ್‌ ಲಕ್ಷ್ಮಿಕಾಂತ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.