ADVERTISEMENT

2ಎಗೆ ನಾಮಧಾರಿ ಒಕ್ಕಲಿಗರು: ಕೇಂದ್ರ ಸಚಿವ ಕುಮಾರಸ್ವಾಮಿ ಭರವಸೆ

ನಾಮಧಾರಿಗೌಡ ಭವನದ ಬೆಳ್ಳಿಹಬ್ಬ

​ಪ್ರಜಾವಾಣಿ ವಾರ್ತೆ
Published 12 ಜನವರಿ 2026, 5:33 IST
Last Updated 12 ಜನವರಿ 2026, 5:33 IST
ಕೆ.ಆರ್.ನಗರ ಅಖಿಲ ನಾಮಧಾರಿಗೌಡ ಸಮುದಾಯ ಭವನದಲ್ಲಿ ಸಂಘದ ವತಿಯಿಂದ ಭಾನುವಾರ ನಡೆದ ಸಮುದಾಯ ಭವನದ 25 ನೇ ವರ್ಷದ ಬೆಳ್ಳಿಹಬ್ಬದ ಕಾರ್ಯಕ್ರಮವನ್ನು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಿದರು. ಡಿ.ರವಿಶಂಕರ್, ಸಾ.ರಾ,ಮಹೇಶ್, ಎಚ್.ವಿಶ್ವನಾಥ್, ಸಿ.ಎನ್.ಮಂಜೇಗೌಡ, ಕೆ.ಎನ್.ಬಸಂತ್ ಇದ್ದರು
ಕೆ.ಆರ್.ನಗರ ಅಖಿಲ ನಾಮಧಾರಿಗೌಡ ಸಮುದಾಯ ಭವನದಲ್ಲಿ ಸಂಘದ ವತಿಯಿಂದ ಭಾನುವಾರ ನಡೆದ ಸಮುದಾಯ ಭವನದ 25 ನೇ ವರ್ಷದ ಬೆಳ್ಳಿಹಬ್ಬದ ಕಾರ್ಯಕ್ರಮವನ್ನು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಿದರು. ಡಿ.ರವಿಶಂಕರ್, ಸಾ.ರಾ,ಮಹೇಶ್, ಎಚ್.ವಿಶ್ವನಾಥ್, ಸಿ.ಎನ್.ಮಂಜೇಗೌಡ, ಕೆ.ಎನ್.ಬಸಂತ್ ಇದ್ದರು   

ಕೆ.ಆರ್.ನಗರ (ಮೈಸೂರು ಜಿಲ್ಲೆ): ‘ಅತ್ಯಂತ ಸಣ್ಣ ಪ್ರಮಾಣದಲ್ಲಿರುವ ನಾಮಧಾರಿಗೌಡ ಒಕ್ಕಲಿಗ ಸಮುದಾಯವನ್ನು ‘2ಎ ಪ್ರವರ್ಗ’ಕ್ಕೆ ಸೇರಿಸುವ ಪ್ರಯತ್ನಕ್ಕೆ ನಾನು ಪ್ರಾಮಾಣಿಕವಾಗಿ ಬೆಂಬಲ ನೀಡುತ್ತೇನೆ’ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದರು.

ಇಲ್ಲಿ ಭಾನುವಾರ ನಡೆದ ನಾಮಧಾರಿಗೌಡ ಸಮುದಾಯ ಭವನದ ಬೆಳ್ಳಿಹಬ್ಬದ ಸಮಾರಂಭದಲ್ಲಿ ಮಾತನಾಡಿದ ಅವರು, ‘ಬೇಡಿಕೆಗಳ  ಸಂಪೂರ್ಣ ಮಾಹಿತಿ, ಹಿಂದುಳಿದ ವರ್ಗಗಳ ಆಯೋಗ, ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ ಬೇಡಿಕೆಯ ಪತ್ರಗಳನ್ನೂ ತನ್ನಿ’ ಎಂದು ಹೇಳಿದರು.

ಸಣ್ಣ ಪ್ರಮಾಣದ ಜನಸಂಖ್ಯೆ ಹೊಂದಿರುವ ನಾಮಧಾರಿಗೌಡ ಸಮುದಾಯವು ರಾಜಕೀಯ ಸೇರಿ ಎಲ್ಲಾ ಕ್ಷೇತ್ರಗಳಲ್ಲಿ ಮುಂದೆ ಬರಬೇಕಿದೆ. ನಮ್ಮನ್ನು ಗುರುತಿಸಬೇಕು ಎಂದು ಸಮುದಾಯದ ಜನರು ಕೇಳುತ್ತಲೇ ಇದ್ದಾರೆ.  ಅದನ್ನು ಸರಿಪಡಿಸಲು ಪ್ರಯತ್ನ ಮಾಡುತ್ತೇವೆ’ ಎಂದರು.

ADVERTISEMENT

ಸಣ್ಣ ಸಮುದಾಯಗಳಿಗೆ: ‘ಚಿಕ್ಕಮಗಳೂರು ಭಾಗದಲ್ಲಿ ಸರ್ಪಒಕ್ಕಲಿಗರು ಇದ್ದಾರೆ.  ಕಡಿಮೆ ಜನ ಸಂಖ್ಯೆಯ ಆ ಸಮುದಾಯಕ್ಕೆ ಸಾವಿರ ಮತಗಳೂ ಇರಲಿಲ್ಲ. ಎಸ್.ಆರ್.ಲಕ್ಷ್ಮಯ್ಯ ಎಂಬ ನಾಯಕರಿದ್ದರು.  ಸಮುದಾಯವನ್ನು ಎಚ್‌.ಡಿ.ದೇವೇಗೌಡರು ಎರಡು ಬಾರಿ ಶಾಸಕರನ್ನಾಗಿ ಮಾಡಿದರು. ನಂತರ ಅವರ ಪುತ್ರ ಧರ್ಮೇಗೌಡರು ಎರಡು ಬಾರಿ ಪರಿಷತ್ ಸದಸ್ಯರಾದರು, ಒಮ್ಮೆ ಉಪಸಭಾಪತಿಯಾದರು. ಅವರ ಇನ್ನೊಬ್ಬ ಪುತ್ರ ಎಸ್.ಎಲ್.ಭೋಜೇಗೌಡರು ನಮ್ಮ ಪಕ್ಷದ ಎಂಎಲ್‌ಸಿ ಆಗಿದ್ದಾರೆ’ ಎಂದು ತಿಳಿಸಿದರು.

‘ಇನ್ನೊಂದು ಅತಿ ಸಣ್ಣ ಸಮುದಾಯವಾದ ಉಪ್ಪಾರ ಸಮಾಜಕ್ಕೂ  ಪಕ್ಷ ಅವಕಾಶ ಕೊಟ್ಟಿದೆ. ಎಚ್.ಸಿ. ನೀರಾವರಿ ಅವರನ್ನು   ರಾಜಕೀಯಕ್ಕೆ ತಂದೆವು.  ಅನೇಕ ಸಮುದಾಯಗಳಿಗೆ ಜೆಡಿಎಸ್ ಅವಕಾಶ ತೆರೆದಿದೆ. ಕೆಲವರು ನಾವು ಹಿಂದುಳಿದ ನಾಯಕರೆಂದು ಫಲಕ ಹಾಕಿಕೊಂಡು ಓಡಾಡುತ್ತಾರೆ. ಆದರೆ, ಆ ಸಮುದಾಯವನ್ನು ಬೆಳೆಸಿದವರು ದೇವೇಗೌಡರು’ ಎಂದರು.

‘ನಾಮಧಾರಿಗೌಡ ಸಮುದಾಯದ ಒಬ್ಬರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಲಾಗುವುದು.  ಸಮಾಜದ ಯುವಕರು ರಾಜಕೀಯಕ್ಕೆ ಬರಬೇಕು. ನನಗೆ ರಾಜಕೀಯ ಶಕ್ತಿ ತುಂಬಲೆಂದು ನಾನು ಭರವಸೆ ನೀಡುವುದಿಲ್ಲ. ಪ್ರಾಮಾಣಿಕವಾಗಿ ಸ್ಪಂದಿಸುತ್ತೇನೆ’ ಎಂದು ತಿಳಿಸಿದರು.

ಅನುದಾನದ ಭರವಸೆ: ದೇವಸ್ಥಾನ ಕಟ್ಟಲು ಸಿಎ ನಿವೇಶನ ಕೇಳಿದ್ದೀರಿ.  ರಾಜ್ಯ ಸರ್ಕಾರದಿಂದ ಕೊಡಿಸುವ ಕೆಲಸ ಮಾಡುತ್ತೇನೆ. ಸಮುದಾಯ ಭವನದ ಅಭಿವೃದ್ಧಿಗೆ ಅನುದಾನ ಕೊಡುತ್ತೇನೆ’ ಎಂದು ಭರವಸೆ ನೀಡಿದರು.

ಶಾಸಕ ಡಿ.ರವಿಶಂಕರ್, ಜೆಡಿಎಸ್‌ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಸಾ.ರಾ.ಮಹೇಶ್, ವಿಧಾನ ಪರಿಷತ್‌ ಸದಸ್ಯ ಎ.ಎಚ್. ವಿಶ್ವನಾಥ್‌, ನವನಗರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬರಸಂತ್ ಮಾತನಾಡಿದರು. ವಿಧಾನ ಪರಿಷತ್‌ ಸದಸ್ಯ ಸಿ.ಎನ್.ಮಂಜೇಗೌಡ, ಕೆ.ವಿವೇಕಾನಂದ, ಮಾಜಿ ಶಾಸಕ ಎಂ.ಅಶ್ವಿನ್ ಕುಮಾರ್, ಕೇಂದ್ರ ಸಮಿತಿ ಗೌರವ ಅಧ್ಯಕ್ಷ ಡಿ.ಸುಂದರರಾಜ್, ಸಂಘದ ಅಧ್ಯಕ್ಷ ಅಶೋಕ್‌ ಕುಮಾರ್, ಉಪಾಧ್ಯಕ್ಷ ಕೆ.ಆರ್.ಗಿರೀಶ್, ಕಾರ್ಯದರ್ಶಿ ಪುರುಷೋತ್ತಮ, ಖಜಾಂಚಿ ಕೃಷ್ಣೇಗೌಡ, ನಿಕಟಪೂರ್ವ ಕಾರ್ಯದರ್ಶಿ ಎಂ.ಆರ್.ಪುಟ್ಟರಾಜು ಉಪಸ್ಥಿತರಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.