ADVERTISEMENT

ಆ.15ರಿಂದ ಒಂದು ತಿಂಗಳು ‘ನಂದಿನಿ’ ಸಿಹಿ ಉತ್ಪನ್ನಗಳ ಮೇಲೆ ಶೇ 20 ರಿಯಾಯಿತಿ

ಗೌರಿಗಣೇಶ ಹಬ್ಬ: ಒಂದು ತಿಂಗಳ ಕಾಲ ‘ನಂದಿನಿ’ ಬ್ರಾಂಡ್ ಮೇಲೆ ಕೊಡುಗೆ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2023, 13:37 IST
Last Updated 15 ಆಗಸ್ಟ್ 2023, 13:37 IST
ಆಲನಹಳ್ಳಿಯ ಮೆಗಾ ಡೇರಿ ಮುಂಭಾಗದಲ್ಲಿರುವ ನಂದಿನಿ ಮಿಲ್ಕ್‌ ಗ್ಯಾಲಕ್ಸಿಯಲ್ಲಿ ಮಂಗಳವಾರ ಸಿಹಿ ತಿನಿಸುಗಳ ಉತ್ಸವಕ್ಕೆ ಮೈಮುಲ್‌ ಅಧ್ಯಕ್ಷ ಪಿ.ಎಂ. ಪ್ರಸನ್ನ ಚಾಲನೆ ನೀಡಿದರು. ಒಕ್ಕೂಟದ ಆಡಳಿತ ಮಂಡಳಿ ನಿರ್ದೇಶಕರಾದ ಕೆ. ಉಮಾಶಂಕರ್, ಕೆ.ಜಿ. ಮಹೇಶ್, ಸಿ. ಓಂಪ್ರಕಾಶ್, ಕೆ. ಈರೇಗೌಡ, ಕೆ.ಎಸ್. ಸದಾನಂದ, ಲೀಲಾ ನಾಗರಾಜ್ ಇದ್ದರು
ಆಲನಹಳ್ಳಿಯ ಮೆಗಾ ಡೇರಿ ಮುಂಭಾಗದಲ್ಲಿರುವ ನಂದಿನಿ ಮಿಲ್ಕ್‌ ಗ್ಯಾಲಕ್ಸಿಯಲ್ಲಿ ಮಂಗಳವಾರ ಸಿಹಿ ತಿನಿಸುಗಳ ಉತ್ಸವಕ್ಕೆ ಮೈಮುಲ್‌ ಅಧ್ಯಕ್ಷ ಪಿ.ಎಂ. ಪ್ರಸನ್ನ ಚಾಲನೆ ನೀಡಿದರು. ಒಕ್ಕೂಟದ ಆಡಳಿತ ಮಂಡಳಿ ನಿರ್ದೇಶಕರಾದ ಕೆ. ಉಮಾಶಂಕರ್, ಕೆ.ಜಿ. ಮಹೇಶ್, ಸಿ. ಓಂಪ್ರಕಾಶ್, ಕೆ. ಈರೇಗೌಡ, ಕೆ.ಎಸ್. ಸದಾನಂದ, ಲೀಲಾ ನಾಗರಾಜ್ ಇದ್ದರು   

ಮೈಸೂರು: ಕೆಎಂಎಫ್‌ ಹಾಗೂ ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು ಗೌರಿ ಗಣೇಶ ಹಬ್ಬದ ಅಂಗವಾಗಿ ‘ನಂದಿನಿ ಸಿಹಿ ಉತ್ಸವ’ ಆಯೋಜಿಸಿದ್ದು, ಮುಂದಿನ ಒಂದು ತಿಂಗಳ ಕಾಲ ‘ನಂದಿನಿ’ ಬ್ರಾಂಡ್‌ನ ಎಲ್ಲ ಸಿಹಿತಿನಿಸುಗಳ ಖರೀದಿ ಮೇಲೆ ಶೇ 20 ರಿಯಾಯಿತಿ ಘೋಷಿಸಿದೆ.

ನಗರದ ಆಲನಹಳ್ಳಿಯ ಮೆಗಾ ಡೇರಿ ಮುಂಭಾಗದಲ್ಲಿರುವ ನಂದಿನಿ ಮಿಲ್ಕ್‌ ಗ್ಯಾಲಕ್ಸಿಯಲ್ಲಿ ಮಂಗಳವಾರ ಸಿಹಿ ತಿನಿಸುಗಳ ಉತ್ಸವಕ್ಕೆ ಮೈಮುಲ್‌ ಅಧ್ಯಕ್ಷ ಪಿ.ಎಂ. ಪ್ರಸನ್ನ ಚಾಲನೆ ನೀಡಿದರು. ‘ಸ್ವಾತಂತ್ರ್ಯೋತ್ಸವ, ಗೌರಿ ಗಣೇಶ ಹಬ್ಬ, ವರಮಹಾಲಕ್ಷ್ಮಿ ಸೇರಿದಂತೆ ಸಾಲುಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಗ್ರಾಹಕರಿಗಾಗಿ ನಂದಿನಿ ಸಿಹಿ ಉತ್ಸವ ಆಯೋಜಿಸಲಾಗಿದೆ. ಆ.15ರಿಂದ ಸೆಪ್ಟೆಂಬರ್‌ 20ರವರೆಗೆ ಜಿಲ್ಲೆಯ ಎಲ್ಲ ನಂದಿನಿ ಮಾರಾಟ ಮಳಿಗೆಗಳಲ್ಲಿ ಸಿಹಿ ತಿನಿಸುಗಳ ಖರೀದಿ ಮೇಲೆ ಮಾತ್ರ ಈ ವಿಶೇಷ ರಿಯಾಯಿತಿ ಜಾರಿಯಲ್ಲಿರಲಿದೆ’ ಎಂದು ಅವರು ಮಾಹಿತಿ ನೀಡಿದರು.

ದಸರಾ ಸಂದರ್ಭವೂ ಸಿಹಿ ಉತ್ಪನ್ನಗಳಿಗೆ ವಿಶೇಷ ರಿಯಾಯಿತಿ ಘೋಷಣೆ ಕುರಿತು ಕೆಎಂಎಫ್‌ ಗಮನಕ್ಕೆ ತರಲಾಗುವುದು. ಡಿಸೆಂಬರ್‌ ಮತ್ತು ಜನವರಿಯಲ್ಲಿ ಸಂಕ್ರಾಂತಿ ಅಂಗವಾಗಿ ಮತ್ತೊಮ್ಮೆ ಸಿಹಿ ಉತ್ಸವ ಆಯೋಜಿಸಲಾಗುವುದು ಎಂದರು.

ADVERTISEMENT

ಕೆಎಂಎಫ್‌ ನಂದಿನಿ ಬ್ರಾಂಡ್‌ ಅಡಿ ಹಾಲು ಹಾಗೂ ಹಾಲಿನ ಉಪ ಉತ್ಪನ್ನಗಳ ಉತ್ಪಾದನೆ ಚುರುಕಾಗಿ ನಡೆದಿದ್ದು, 100ಕ್ಕೂ ಹೆಚ್ಚು ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಇದರಲ್ಲಿ 40ಕ್ಕೂ ಹೆಚ್ಚು ಸಿಹಿ ತಿನಿಸುಗಳು ಇವೆ. ಮಾರುಕಟ್ಟೆಯಲ್ಲಿ ಬೇಡಿಕೆ ಸಹ ಉತ್ತಮವಾಗಿದೆ ಎಂದು ತಿಳಿಸಿದರು.

ನಂದಿನಿ ಹಾಲಿನ ಮಾರಾಟ ದರ ಹೆಚ್ಚಳವು ಖರೀದಿ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಪ್ರತಿ ಲೀಟರ್‌ಗೆ ₹3 ದರ ಏರಿಸಿದ್ದು, ಈ ಹಣವನ್ನು ರೈತರಿಗೆ ನೀಡಲಾಗುವುದು. ರಾಜ್ಯದಲ್ಲೇ ಮೈಸೂರು ಒಕ್ಕೂಟವು ರೈತರಿಂದ ಖರೀದಿಸುವ ಹಾಲಿಗೆ ಹೆಚ್ಚಿನ ದರ ನೀಡುತ್ತಿದೆ ಎಂದರು.

ಒಕ್ಕೂಟದ ಆಡಳಿತ ಮಂಡಳಿ ನಿರ್ದೇಶಕರಾದ ಎ.ಟಿ. ಸೋಮಶೇಖರ್‌, ಕೆ. ಉಮಾಶಂಕರ್, ಕೆ.ಜಿ. ಮಹೇಶ್, ಸಿ. ಓಂಪ್ರಕಾಶ್‌, ಕೆ. ಈರೇಗೌಡ, ಕೆ.ಎಸ್‌. ಕುಮಾರ್, ದಾಕ್ಷಾಯಿಣಿ ಬಸವರಾಜಪ್ಪ, ಲೀಲಾ ನಾಗರಾಜು, ನೀಲಾಂಬಿಕೆ, ಶಿವಗಾಮಿ ಷಣ್ಮುಗಂ, ಡಿ. ರಾಜೇಂದ್ರ, ಬಿ.ಎನ್. ಸದಾನಂದ, ಆರ್. ಚೆಲುವರಾಜು, ಗುರುಸ್ವಾಮಿ, ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಬಿ. ಎನ್‌. ವಿಜಯ್‌ಕುಮಾರ್, ವ್ಯವಸ್ಥಾಪಕರಾದ ಕೆ.ಎಸ್. ಜಗದೀಶ್‌, ಎಚ್.ಕೆ. ಜಯಶಂಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.