ADVERTISEMENT

ಮೋದಿ ಕಾರ್ಯಕ್ರಮ: ಎಸ್‌ಪಿಜಿ ಠಿಕಾಣಿ

ಭದ್ರತೆಗೆ ಕೈಗೊಂಡಿರುವ ಕ್ರಮಗಳ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2022, 14:09 IST
Last Updated 17 ಜೂನ್ 2022, 14:09 IST
ಮೈಸೂರು ಅರಮನೆ ಆವರಣದಲ್ಲಿ ಯೋಗ ದಿನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಎಸ್‌ಪಿಜಿ ಮತ್ತು ಪೊಲೀಸ್ ಅಧಿಕಾರಿಗಳು ಶುಕ್ರವಾರ ಭೇಟಿ ನೀಡಿ ‍ಪರಿಶೀಲಿಸಿದರು/ ಪ್ರಜಾವಾಣಿ ಚಿತ್ರ
ಮೈಸೂರು ಅರಮನೆ ಆವರಣದಲ್ಲಿ ಯೋಗ ದಿನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಎಸ್‌ಪಿಜಿ ಮತ್ತು ಪೊಲೀಸ್ ಅಧಿಕಾರಿಗಳು ಶುಕ್ರವಾರ ಭೇಟಿ ನೀಡಿ ‍ಪರಿಶೀಲಿಸಿದರು/ ಪ್ರಜಾವಾಣಿ ಚಿತ್ರ   

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಜೂನ್ 20 ಹಾಗೂ 21ರಂದು ನಗರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದು, ಆ ವೇಳೆ ಭದ್ರತೆಗೆ ಅಗತ್ಯವಾದ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ. ಇಲ್ಲಿ ಠಿಕಾಣಿ ಹೂಡಿರುವ ಎಸ್‌‍ಪಿಜಿ (ವಿಶೇಷ ರಕ್ಷಣಾ ದಳ)ದ ಅಧಿಕಾರಿಗಳು ಸರಣಿ ಸಭೆಗಳನ್ನು ಶುಕ್ರವಾರ ನಡೆಸಿದರು.

ಪ್ರಧಾನಿಯು ಭಾಗವಹಿಸಲಿರುವ ಕಾರ್ಯಕ್ರಮಗಳ ಸ್ಥಳಗಳು ಹಾಗೂ ಸಂಚರಿಸಲಿರುವ ಮಾರ್ಗಗಳಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು.

ಎಸ್‌ಪಿಜಿಯ ಎಐಜಿ ನೇತೃತ್ವದ ಏಳು ಅಧಿಕಾರಿಗಳ ತಂಡವು, ಇಲ್ಲಿನ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿತು. ಭದ್ರತೆಗೆ ಸಂಬಂಧಿಸಿದಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸೂಚನೆಗಳನ್ನು ನೀಡಿತು. ಎಸ್‌ಪಿಜಿಯಿಂದ 20 ಸದಸ್ಯರನ್ನು ಒಳಗೊಂಡ ಮತ್ತೊಂದು ತಂಡ ಇಲ್ಲಿಗೆ ಬರಲಿದೆ. ಎನ್ಎಸ್‌ಜಿಯವರೂ ಬರಲಿದ್ದಾರೆ.

ADVERTISEMENT

ಯೋಗ ದಿನದ ಅಂಗವಾಗಿ ಜನರೊಂದಿಗೆ ಪ್ರಧಾನಿಯು ಯೋಗಾಸನಗಳನ್ನು ಮಾಡಲಿರುವ ಅಂಬಾವಿಲಾಸ ಅರಮನೆ ಆವರಣದಲ್ಲಿ ಪರಿಶೀಲನೆ ನಡೆಸಿದ ಅಧಿಕಾರಿಗಳು, ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಎಸ್ಪಿ ಆರ್. ಚೇತನ್, ಡಿಸಿಪಿಗಳಾದ ಪ್ರದೀಪ ಗುಂಟಿ, ಎಂ.ಎಸ್. ಗೀತಾ ಪ್ರಸನ್ನ, ಅಗ್ನಿಶಾಮಕ ದಳದವರು, ಆಹಾರ ಸುರಕ್ಷತಾ ಅಧಿಕಾರಿ, ಮಹಾನಗರಪಾಲಿಕೆ, ಮುಡಾ, ಸೆಸ್ಕ್‌, ತೋಟಗಾರಿಕೆ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಭದ್ರತೆಯಲ್ಲಿ ಲೋಪ ಉಂಟಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಹಲವು ನಿರ್ದೇಶನಗಳನ್ನು ನೀಡಿದರು.

ಅಧಿಕಾರಿಗಳು, ಪ್ರಧಾನಿ ಬಂದಿಳಿಯಲಿರುವ ಮಂಡಕಳ್ಳಿ ವಿಮಾನನಿಲ್ದಾಣ, ತಂಗಲಿರುವ ರ‍್ಯಾಡಿಸನ್ ಬ್ಲೂ ಪ್ಲಾಜಾ ಹೋಟೆಲ್, ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಮಹಾರಾಜ ಕಾಲೇಜು ಮೈದಾನ, ಭೇಟಿ ನೀಡಲಿರುವ ಚಾಮುಂಡಿಬೆಟ್ಟ, ಸುತ್ತೂರು ಮಠ, ದಸರಾ ವಸ್ತುಪ್ರದರ್ಶನ ಪ್ರಾಧಿಕಾರಕ್ಕೂ ಭೇಟಿ ನೀಡಿ ಪರಿಶೀಲಿಸಿದರು.

ಈ ನಡುವೆ, ನಗರ ವಿಧ್ವಂಸಕ ಕೃತ್ಯ ತಡೆ (ಬಾಂಬ್ ಪತ್ತೆ ದಳ) ತಂಡದ ಅಧಿಕಾರಿ ಮತ್ತು ಸಿಬ್ಬಂದಿ ಬಾಂಬ್ ಪತ್ತೆ ದಳದ ಇನ್‌ಸ್ಪೆಕ್ಟರ್‌ ಮೂರ್ತಿ ನೇತೃತ್ವದಲ್ಲಿ ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ ಅವರ ನಿರ್ದೇಶನದಂತೆ ತಪಾಸಣಾ ಕಾರ್ಯ ನಡೆಸಿದರು. ಚಾಮುಂಡಿ ಬೆಟ್ಟದಲ್ಲಿ ಗಣ್ಯರು ಸಂಚರಿಸುವ ಮಾರ್ಗಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ತಪಾಸಣೆ ಮಾಡಲಾಯಿತು. ದಳದವರು ವಿಐಪಿ ಭೇಟಿ ನೀಡುವ ಸ್ಥಳಗಳನ್ನು ಬಾಂಬ್ ಪತ್ತೆ ಉಪಕರಣಗಳು ಮತ್ತು ಶ್ವಾನಗಳೊಂದಿಗೆ ವಾರದಿಂದಲೂ ನಿರಂತರವಾಗಿ ತಪಾಸಣೆ ಮಾಡುತ್ತಿದ್ದಾರೆ.

ಮಹಾರಾಜ ಕಾಲೇಜು ಮೈದಾನದಲ್ಲಿ ವೇದಿಕೆ ಸಜ್ಜುಗೊಳಿಸುವ ಕಾರ್ಯ ಭರದಿಂದ ಸಾಗಿದೆ. ಅರಮನೆ ಸುತ್ತಮುತ್ತಲಿನ ರಸ್ತೆಗಳಲ್ಲಿ ಅಲಂಕಾರಕ್ಕಾಗಿ ವಿದ್ಯುದ್ದೀಪಗಳನ್ನು ಅಳವಡಿಸುವ ಕೆಲಸವೂ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.