ADVERTISEMENT

ಕೃಷಿ ಭೂಮಿಗಿಲ್ಲ ಸಂಪರ್ಕ ರಸ್ತೆ: ಕಲ್ಲಹಳ್ಳಿಯಲ್ಲಿ ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 4:52 IST
Last Updated 2 ಫೆಬ್ರುವರಿ 2026, 4:52 IST
ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಸರ್ವಿಸ್‌ ರಸ್ತೆ ನಿರ್ಮಾಣ ಮಾಡದಿರುವುದನ್ನು ಖಂಡಿಸಿ ರೈತ ಸಂಘದ ಸದಸ್ಯರು ಹುಣಸೂರು ತಾಲ್ಲೂಕಿನ ಕಲ್ಲಹಳ್ಳಿಯಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು
ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಸರ್ವಿಸ್‌ ರಸ್ತೆ ನಿರ್ಮಾಣ ಮಾಡದಿರುವುದನ್ನು ಖಂಡಿಸಿ ರೈತ ಸಂಘದ ಸದಸ್ಯರು ಹುಣಸೂರು ತಾಲ್ಲೂಕಿನ ಕಲ್ಲಹಳ್ಳಿಯಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು   

ಹುಣಸೂರು: ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಸರ್ವಿಸ್‌ ರಸ್ತೆ ನಿರ್ಮಾಣ ಮಾಡದಿರುವುದನ್ನು ಖಂಡಿಸಿ ರೈತ ಸಂಘದ ಸದಸ್ಯರು ತಾಲ್ಲೂಕಿನ ಕಲ್ಲಹಳ್ಳಿಯಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

‘ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ರೈತರಿಂದ ಭೂಮಿ ಪಡೆದ ಸರ್ಕಾರ, ರೈತರ ಹೊಲ ಗದ್ದೆಗಳನ್ನು ಸಂಪರ್ಕಿಸಲು ರಸ್ತೆ ನಿರ್ಮಾಣ ಮಾಡಬೇಕು ಎಂಬ ಸಾಮಾನ್ಯ ಜ್ಞಾನ ಇಲ್ಲದಂತೆ ವರ್ತಿಸಿದೆ. ಹೆದ್ದಾರಿ ನಿರ್ಮಾಣಕ್ಕೆ ರೈತರು ಭೂಮಿ ನೀಡದಿದ್ದರೆ ರಸ್ತೆ ನಿರ್ಮಾಣ ಮಾಡಲು ಸಾಧ್ಯವಾಗುತ್ತಿತ್ತೇ ಎಂಬ ಆಲೋಚನೆ ಇಲ್ಲದಂತೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕೆಲಸ ನಿರ್ವಹಿಸಿದ್ದಾರೆ. ರೈತರ ಸಮಸ್ಯೆಗಳನ್ನು ಹೋರಾಟದ ಮೂಲಕವೇ ಪರಿಹರಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿರುವುದು ವಿಪರ್ಯಾಸದ ಸಂಗತಿ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊಸೂರು ಕುಮಾರ್‌ ಹೇಳಿದರು.

‘ಸರ್ವಿಸ್‌ ರಸ್ತೆ ನಿರ್ಮಾಣ ಸಂಬಂಧ ರೈತ ಸಂಘ ಯೋಜನೆ ಆರಂಭದಿಂದಲೂ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಮತ್ತು ಶಾಸಕ ಜಿ.ಡಿ.ಹರೀಶ್‌ ಗೌಡರ ಗಮನಕ್ಕೆ ತಂದಿದ್ದು, ಅಧಿಕಾರ ಇರುವ ಇವರು ಕ್ರಮವಹಿಸದೆ ಈ ಸಮಸ್ಯೆಗೆ ರೈತರು ಸಿಲುಕುವಂತಾಗಿದೆ. ಭೂಮಿ ಕಳೆದುಕೊಂಡ ಬೇಸರದಲ್ಲಿ ರೈತರು ಇರುವ ಅಲ್ಪಸ್ವಲ್ಪ ಪ್ರಮಾಣದ ಭೂಮಿಯಲ್ಲಿ ಬೇಸಾಯ ಮಾಡಲು ಅವಕಾಶ ಇಲ್ಲವಾಗಿದೆ’ ಎಂದು ಹೇಳಿದರು.

ADVERTISEMENT

‘ಕೆಲವು ರೈತರ ಹೊಲ ಇಬ್ಬಾಗವಾಗಿದ್ದು, ಕೊಳವೆಬಾವಿ ಇರುವ ಪ್ರದೇಶ ಒಂದು ಭಾಗಕ್ಕೆ ಭೂಮಿ ಮತ್ತೊಂದು ಭಾಗಕ್ಕೆ ಹರಿದು ಹಂಚಿ ಹೋಗಿದೆ. ಈ ರೈತರು ಕೊಳವೆ ಭಾವಿ ನೀರು ಬಳಸಲು ಸಮಸ್ಯೆ ಎದುರಾಗಿದೆ. ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮುತುವರ್ಜಿ ವಹಿಸುತ್ತಿಲ್ಲ’ ಎಂದರು.

‘ಪ್ರತಿಭಟನೆಗೆ ಸ್ಪಂದಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಿ ರಸ್ತೆ ಕಾಮಗಾರಿ ಸ್ಥಗಿತಗೊಳಿಸಲಿದ್ದೇವೆ. ಈ ಬಗ್ಗೆ ಈಗಾಗಲೇ ಸಂಸದರ ಗಮನಕ್ಕೆ ತರಲಾಗಿದೆ’ ಎಂದು ಕಲ್ಲಹಳ್ಳಿಯ ರೈತ ವಿಷಕಂಠಪ್ಪ ಹೇಳಿದರು.

ಪ್ರತಿಭಟನೆಯಲ್ಲಿ ನಂಜುಂಡಸ್ವಾಮಿ, ರಘು, ಷಣ್ಮುಖ, ಚಂದ್ರು, ಈರತಪ್ಪ, ರವಿ, ಲಿಂಗರಾಜು, ಬಸವರಾಜಪ್ಪ, ಕೆ.ಟಿ.ರಾಜು, ಅಶೋಕ್‌ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.