ADVERTISEMENT

ಚಿಣ್ಣರ ಸೆಳೆದ ರಾಷ್ಟ್ರೀಯ ಗೊಂಬೆಯಾಟ ಉತ್ಸವ ಆರಂಭ: ಕಲಾವಿದರ ಪ್ರತಿಭೆ ಅನಾವರಣ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2025, 7:09 IST
Last Updated 20 ಡಿಸೆಂಬರ್ 2025, 7:09 IST
ಮೈಸೂರಿನ ‘ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆ’ಯಲ್ಲಿ ನಡೆಯುತ್ತಿರುವ ‘ರಾಷ್ಟ್ರೀಯ ಗೊಂಬೆಯಾಟ ಉತ್ಸವ’ದಲ್ಲಿ ಶುಕ್ರವಾರ ಬೆಂಗಳೂರಿನ ‘ರಂಗಪುತ್ಥಳಿ’ ತಂಡ ಕಲಾವಿದರು ಪ್ರದರ್ಶಿಸಿದ ‘ಗೊಂಬೆಯಾಟ’ವನ್ನು ಕಣ್ತುಂಬಿಕೊಂಡ ಚಿಣ್ಣರು ಮತ್ತು ಪೋಷಕರು –ಪ್ರಜಾವಾಣಿ ಚಿತ್ರ 
ಮೈಸೂರಿನ ‘ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆ’ಯಲ್ಲಿ ನಡೆಯುತ್ತಿರುವ ‘ರಾಷ್ಟ್ರೀಯ ಗೊಂಬೆಯಾಟ ಉತ್ಸವ’ದಲ್ಲಿ ಶುಕ್ರವಾರ ಬೆಂಗಳೂರಿನ ‘ರಂಗಪುತ್ಥಳಿ’ ತಂಡ ಕಲಾವಿದರು ಪ್ರದರ್ಶಿಸಿದ ‘ಗೊಂಬೆಯಾಟ’ವನ್ನು ಕಣ್ತುಂಬಿಕೊಂಡ ಚಿಣ್ಣರು ಮತ್ತು ಪೋಷಕರು –ಪ್ರಜಾವಾಣಿ ಚಿತ್ರ    

ಮೈಸೂರು: ಗೊಂಬೆಗಳ ಆಟಕ್ಕೆ ಚಿಣ್ಣರು ವಿಸ್ಮಿತರಾದರೆ, ದೊಡ್ಡವರು ತಮ್ಮ ಬಾಲ್ಯದಲ್ಲಿ ಕಂಡಿದ್ದ ತೊಗಲುಗೊಂಬೆ ಪ್ರದರ್ಶನದ ನೆನಪಿಗೆ ಜಾರಿದರು. ಜೀವವಿಲ್ಲದ ಗೊಂಬೆಗಳಿಗೆ ಚಲನೆಯಲ್ಲೇ ಭಾವ ತುಂಬಿದ ಕಲಾವಿದರ ಕೈಚಳಕಕ್ಕೆ ಚಪ್ಪಾಳೆಯ ಮಳೆಗರೆದರು. 

ಇದು, ಹಾರ್ಡ್ವಿಕ್‌ ಶಾಲೆಯ ಅಂಗಳದಲ್ಲಿರುವ ‘ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆ’ಯು ಆಯೋಜಿಸಿರುವ ‘ರಾಷ್ಟ್ರೀಯ ಗೊಂಬೆಯಾಟ ಉತ್ಸವ’ದಲ್ಲಿ ಶುಕ್ರವಾರ ಕಂಡು ಬಂದ ದೃಶ್ಯ. 

ಹಣತೆಯ ಹಿಡಿದು ಬಂದ ಹೆಣ್ಣು ಗೊಂಬೆಯು ಗಣಪನನ್ನು ಬೆಳಗಿದರೆ, ಗಂಡು ಬೊಂಬೆಯು ‘ವಿವೇಕಾನಂದ ಜೀವನ’ ಕಥನ ಸುಗಮವಾಗಿ ಸಾಗಲೆಂದು ಪ್ರಾರ್ಥಿಸಿತಲ್ಲದೇ, ಹಾರವನ್ನು ಹಾಕಿತು. ಬೆಂಗಳೂರಿನ ‘ರಂಗಪುತ್ಥಳಿ’ ತಂಡದ ಬೊಂಬೆಯಾಟದ ಕಲಾವಿದರು ಕೌಶಲ ಹಾಗೂ ಪ್ರತಿಭೆಯನ್ನು ಮೆರೆದರು. ಸ್ವಾಮಿ ವಿವೇಕಾನಂದರು ಬಾಲ್ಯದಲ್ಲಿ ಹಾವು ಬಂದರೂ ಧ್ಯಾನದಲ್ಲಿ ತನ್ಮಯರಾಗಿದ್ದ ದೃಶ್ಯವನ್ನು ಗೊಂಬೆಗಳು ಅನಾವರಣಗೊಳಿಸಿದ ಬಗೆಗೆ ಪ್ರೇಕ್ಷಕರು ಅಚ್ಚರಿಪಟ್ಟರು.  

ADVERTISEMENT

ಕಲೆ ಉಳಿಸಿ

‘ರಾಷ್ಟ್ರೀಯ ಗೊಂಬೆಯಾಟ ಉತ್ಸವ’ಕ್ಕೆ ಗೊಂಬೆ ಆಡಿಸುವ ಮೂಲಕ ಚಾಲನೆ ನೀಡಿದ ರಂಗಕರ್ಮಿ ಇಂದಿರಾ ನಾಯರ್ ಮಾತನಾಡಿ, ‘ಗೊಂಬೆಯಾಟವು ಸಾವಿರಾರು ವರ್ಷದ ಇತಿಹಾಸವಿರುವ ಕಲಾ ಪ್ರಕಾರವಾಗಿದ್ದು, ಪ್ರಸ್ತುತಿ ಹಾಗೂ ಕಥನಕ್ರಮದಲ್ಲಿ ವೈವಿಧ್ಯತೆಯನ್ನು ಹೊಂದಿದೆ. ಅಳಿಯುತ್ತಿರುವ ಕಲೆಯನ್ನು ಉಳಿಸುವ ಜವಾಬ್ದಾರಿ ಎಲ್ಲರದ್ದಾಗಿದೆ’ ಎಂದರು. 

‘ಕೇರಳ, ಆಂಧ್ರ, ಕರ್ನಾಟಕ ಸೇರಿದಂತೆ ದೇಶದ ಎಲ್ಲ ಭಾಗಗಳಲ್ಲೂ ವೈವಿಧ್ಯಮಯದ ಗೊಂಬೆಯಾಟ ಪ್ರಕಾರಗಳಿದ್ದು, ಕಾರ್ಯಾಗಾರವನ್ನು ಆಯೋಜಿಸಿ, ಕಲೆಯನ್ನು ಉಳಿಸುವ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ’ ಎಂದು ಹೇಳಿದರು. 

‘ನಾಟಕಗಳಲ್ಲಿ ಗೊಂಬೆಯಾಟವನ್ನು ನೆರಳಿನಂತೆ ಬಳಸಿಕೊಳ್ಳಬಹುದು. ವಿಷಯಗಳನ್ನು ಪರಿಣಾಮಕಾರಿಯಾಗಿ ಅಭಿವ್ಯಕ್ತಿಸಬಹುದು. ಇದರ ಪ್ರಾಮುಖ್ಯತೆ ಕಳೆಯದೇ ಮುಂದುವರಿಸಲು, ಮಕ್ಕಳಿಗೆ ಈ ಕಲೆಯನ್ನು ಕಲಿಸಬೇಕು’ ಎಂದು ಸಲಹೆ ನೀಡಿದರು. 

ರಂಗಕರ್ಮಿ ಪ್ರಸನ್ನ ಪಾಲ್ಗೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.