
ಮೈಸೂರು: ಮಾದಕ ವಸ್ತು ಮಾರಾಟ ಆರೋಪ ಪ್ರಕರಣದಲ್ಲಿ ಎನ್‌ಸಿಬಿ (ನಾರ್ಕೊಟಿಕ್ ಕಂಟ್ರೋಲ್ ಬ್ಯೂರೊ) ತಂಡವು ತಾಲ್ಲೂಕಿನ ಆಲನಹಳ್ಳಿ ನಿವಾಸಿ ಗಣಪತ್ ಲಾಲ್ ಎಂಬವರನ್ನು ಗುರುವಾರ ಬಂಧಿಸಿದೆ.
ಆರೋಪಿಯು, ರಾಜಸ್ಥಾನದಲ್ಲಿ ಈಗಾಗಲೇ ಬಂಧನಕ್ಕೊಳಗಾಗಿರುವ ನಾಲ್ವರ ಪೈಕಿ ಮನೋಹರ್ ಬಿಷ್ಣೋಯಿ ಎಂಬಾತನ ಸಂಬಂಧಿಕನಾಗಿರುವುದರಿಂದ, ಅಲ್ಲಿಗೆ ಕರೆದೊಯ್ಯಲು ಅಧಿಕಾರಿಗಳು ಐದನೇ ಜೆಎಂಎಫ್‌ಸಿ ನ್ಯಾಯಾಲಯದಿಂದ ಟ್ರಾವೆಲ್ ವಾರಂಟ್ ಪಡೆದಿದ್ದಾರೆ.
‘ನಗರದ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ಆರೋಪಿಯ ಮಾಲೀಕತ್ವದ ‘ಟುಕ್– ಟುಕ್ ಹೌಸ್ ಹೋಲ್ಡ್ ಕೆಮಿಕಲ್ಸ್ ಪ್ರೊಡಕ್ಷನ್ ಸಲ್ಯೂಷನ್ ಮ್ಯಾನಿಫ್ಯಾಕ್ಚರಿಂಗ್’ ಘಟಕದಲ್ಲಿ ಮಾದಕ ವಸ್ತು ತಯಾರಿಸಿ, ರಾಜಸ್ಥಾನದಲ್ಲಿ ಮಾರಾಟ ಮಾಡಲಾಗುತ್ತಿತ್ತು ಎಂಬ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ದಾಳಿ ನಡೆದಿದ್ದು, ಘಟಕವನ್ನು ಜಪ್ತಿ ಮಾಡಲಾಗಿದೆ’ ಎಂದು ಮೂಲಗಳು ತಿಳಿಸಿವೆ.
ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದೆ, ಆರೋಪಿಯ ಮನೆ ಹಾಗೂ ಘಟಕಕ್ಕೆ ಅಲಹಾಬಾದ್ ಹಾಗೂ ಬೆಂಗಳೂರಿನ ಎನ್‌ಸಿಬಿ ಅಧಿಕಾರಿಗಳು ಬುಧವಾರ ಬೆಳಿಗ್ಗೆ ದಾಳಿ ಮಾಡಿ ಕಾರ್ಯಾಚರಣೆ ನಡೆಸಿದ್ದರು. ತೀವ್ರ ವಿಚಾರಣೆ ಬಳಿಕ, ಗುರುವಾರ ಬೆಳಿಗ್ಗೆ ಮತ್ತೆ ಘಟಕಕ್ಕೆ ತೆರಳಿ ಪತ್ತೆಯಾದ ರಾಸಾಯನಿಕಗಳನ್ನು ಕೊಠಡಿಯೊಂದರಲ್ಲಿಟ್ಟು, ಬೀಗ ಹಾಕಿದ್ದಾರೆ. ಮಧ್ಯಾಹ್ನ ಕೆ.ಆರ್. ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಯ ಬಳಿಕ ಆರೋಪಿಯನ್ನು ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಈವರೆಗೆ ಎನ್‌ಸಿಬಿಯು ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ಆದರೆ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ‘ಪ್ರಕರಣವೊಂದರ ವಿಚಾರಣೆಗಾಗಿ ತಂಡ ಬಂದಿದ್ದು, ಶಂಕಾಸ್ಪದವಾದದ್ದು ಏನೂ ಸಿಕ್ಕಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.
‘ಗಣಪತಿಲಾಲ್ ವರ್ಷದ ಹಿಂದೆ ಈ ಕಟ್ಟಡವನ್ನು ಬಾಡಿಗೆಗೆ ಪಡೆದಿದ್ದು, ಪ್ರತಿ ತಿಂಗಳು ₹46 ಸಾವಿರ ಬಾಡಿಗೆ ನೀಡುತ್ತಿದ್ದರು. ಆದರೆ ಫಿನಾಯಿಲ್ ಉತ್ಪಾದನೆ ಆರಂಭಿಸಿರಲಿಲ್ಲ. ಅಲ್ಲಿ ಅಳವಡಿಸಿರುವ ಯಂತ್ರಗಳಲ್ಲಿ ಮಾದಕ ವಸ್ತು ಉತ್ಪಾದನೆಯ ಸಾಧ್ಯತೆಯೂ ಇದೆ. ಯಾವುದೇ ಲಾಭ ಇಲ್ಲದೆ ₹46 ಸಾವಿರ ಬಾಡಿಗೆ ಏಕೆ ನೀಡುತ್ತಿದ್ದರು. ಹಣದ ಮೂಲ ಯಾವುದು ಎಂಬ ಬಗ್ಗೆ ಎನ್‌ಸಿಬಿ ತಂಡ ವಿಚಾರಣೆ ನಡೆಸಿದೆ’ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.