ADVERTISEMENT

ಮೈಸೂರಿಗೆ ಎನ್‌ಐಎ ತಂಡ

ಮಾಹಿತಿ ಸಂಗ್ರಹ; ಬಾಡಿಗೆದಾರರ ಮೇಲೂ ನಿಗಾ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2022, 18:15 IST
Last Updated 21 ನವೆಂಬರ್ 2022, 18:15 IST

ಮೈಸೂರು: ಮಂಗಳೂರಿನಲ್ಲಿ ನಡೆದ ಕುಕ್ಕರ್‌ ಬಾಂಬ್‌ ಸ್ಫೋಟಕ್ಕೆ ಸಂಬಂಧ ಮಾಹಿತಿ ಕಲೆಹಾಕಲು ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಐವರು ಅಧಿಕಾರಿಗಳ ತಂಡವು ಸೋಮವಾರ ಬೆಳಿಗ್ಗೆ ನಗರಕ್ಕೆ ಬಂದಿದೆ.

‘ಆರೋಪಿ ತಂಗಿದ್ದ ಜಾಗ, ಆತನಿಗಿದ್ದ ಒಡನಾಟ, ಆತ ಒಡಾಟ ನಡೆಸಿದ ಜಾಗದ ಮಾಹಿತಿ ಪಡೆದಿದ್ದಾರೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ. ‘ಆರೋಪಿಯು ಇಲ್ಲಿನ ಮೇಟಗಳ್ಳಿಯ ಲೋಕನಾಯಕ ನಗರದಲ್ಲಿ ನಕಲಿ ವಿಳಾಸ ನೀಡಿ, ಬಾಡಿಗೆಗೆ ಮನೆ ಪಡೆದಿದ್ದ. ಅಗ್ರಹಾರದಲ್ಲಿ ‘ಮೊಬೈಲ್‌ ಫೋನ್ ತರಬೇತಿಗಾಗಿ ಅಂಗಡಿಯೊಂದ
ರಲ್ಲಿ ಕೆಲಸಕ್ಕೆ ಸೇರಿದ್ದ. ಈ ಸಂಬಂಧ, ಸ್ಥಳೀಯ ಪೊಲೀಸರ ಜೊತೆಗೂಡಿ, ಆತ ತಂಗಿದ್ದ ಮನೆಯನ್ನು ಸೋಮವಾರ ಮಹಜರ್‌ ನಡೆಸಲಾಯಿತು. ವಿಧಿ ವಿಜ್ಞಾನ ತಂಡವು ಪ್ರಮುಖ ಸಾಕ್ಷ್ಯಾಧಾರಗಳನ್ನು ಕಲೆಹಾಕಿದೆ’ ಎಂದು ದೃಢಪಡಿಸಿದ್ದಾರೆ.

ಇದರ ಜೊತೆಗೆ, ನಗರದ ಹೊರವಲಯದಲ್ಲಿ ಹೊಸತಾಗಿ ಮನೆ ಬಾಡಿಗೆಗೆ ಪಡೆದಿರುವವರ ಮಾಹಿತಿಗಳನ್ನು ಕಲೆಹಾಕಲು ಪೊಲೀಸರು ಆರಂಭಿಸಿದ್ದಾರೆ. ಈಗಾಗಲೇ ಎಲ್ಲ ಠಾಣಾಧಿಕಾರಿಗಳಿಗೆ ಸೂಚನೆ ರವಾನಿಸಲಾಗಿದ್ದು, ಅಧಿಕಾರಿಗಳು ಬಾಡಿಗೆದಾರರ ದಾಖಲೆಗಳನ್ನು ಪರಿಶೀಲಿಸಿ ಮನೆ ನೀಡುವಂತೆ ಮಾಲೀಕರಿಗೂ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ADVERTISEMENT

ಕಡಿಮೆ ಅವಧಿಗೆ ಕೊಠಡಿ ಬಾಡಿಗೆಗೆ ಪಡೆದಿರುವವರ ಮೇಲೆ ಹೆಚ್ಚಿನ ನಿಗಾ ವಹಿಸಿದ್ದು, ಹೋಟೆಲ್‌ನಲ್ಲಿ ತಂಗುವವವರ ಮೇಲೂ ಕಣ್ಗಾವಲಿಟ್ಟು, ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿಡುವಂತೆ ಸೂಚಿಸಲಾಗಿದೆ. ರೈಲು, ಬಸ್‌ ನಿಲ್ದಾಣ, ಧಾರ್ಮಿಕ ಕೇಂದ್ರಗಳ ಸುತ್ತಲೂ ಓಡಾಡುವ ಅನುಮಾನಸ್ಪದ ವ್ಯಕ್ತಿಗಳ ಮೇಲೂ ಪೊಲೀಸರು ನಿಗಾ ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.