
ಹುಣಸೂರು: ‘ರಾಜ್ಯದಲ್ಲಿ ಜೆಡಿಎಸ್ ಅಧಿಕಾರದಲ್ಲಿ ಇಲ್ಲದಿದ್ದರೂ ಮತದಾರರ ಸಮಸ್ಯೆಗಳಿಗೆ ಸ್ಪಂದಿಸಿ ಪಕ್ಷ ಸಂಘಟಿಸುವ ದಿಕ್ಕಿನಲ್ಲಿ ರಾಜ್ಯದಾದ್ಯಂತ ಪ್ರವಾಸ ಕೈಗೊಳ್ಳಲಾಗುವುದು’ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ತಾಲ್ಲೂಕಿನ ಹಿರಿಕ್ಯಾತನಹಳ್ಳಿಯಲ್ಲಿ ₹1 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಮಲೆಮಹದೇಶ್ವರ ಸ್ವಾಮಿ ದೇವಸ್ಥಾನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
‘ಜೆಡಿಎಸ್ ಕಾರ್ಯಕರ್ತರ ಧ್ವನಿಯಾಗಿ ಪಕ್ಷ ಬಲಿಷ್ಠಗೊಳಿಸಿ ಯುವಕರನ್ನು ರಾಜಕೀಯ ಕ್ಷೇತ್ರಕ್ಕೆ ಕರೆತರುವ ಪ್ರಯತ್ನ ನಡೆದಿದ್ದು, ಯುವಸಮುದಾಯ ರಾಜಕೀಯ ಜ್ಞಾನ ಹೊಂದಬೇಕು’ ಎಂದರು.
‘ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಿಮ್ಮನ್ನು ನೀವು ಗುರುತಿಸಿಕೊಳ್ಳುವ ಕೆಲಸ ಆಗಬೇಕಾಗಿದೆ. ನಿಮ್ಮ ಕೇರಿಗಳಲ್ಲಿ ಪಕ್ಷ ಕಟ್ಟುವ ಮೂಲಕ ಮನೆಯಿಂದ ಗ್ರಾಮ, ಹೋಬಳಿ ಮತ್ತು ತಾಲ್ಲೂಕಿನ ಹಂತದವರೆಗೆ ಪಕ್ಷ ಗಟ್ಟಿಗೊಳಿಸಿ. ಕ್ಷೇತ್ರದ ಶಾಸಕರು ನಿಮ್ಮನ್ನು ಗುರುತಿಸಿ ಜವಾಬ್ದಾರಿ ನೀಡಲಿದ್ದಾರೆ. ನಿಮ್ಮ ಗೆಲುವಿಗೆ ನಾವು ಸದಾ ಕೈ ಜೋಡಿಸಲಿದ್ದೇವೆ’ ಎಂದರು.
‘ತಂಬಾಕು ದರ ಕುಸಿತವು ಬೆಳೆಗಾರರನ್ನು ಕಾಡಿತ್ತು. ಆ ಸಮಯದಲ್ಲಿ ಶಾಸಕ ಹರೀಶ್ ಗೌಡ ಅವರ ನೇತೃತ್ವದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲಾಯಿತು. ಈ ಸಾಲಿನಲ್ಲಿ ದರ ಮತ್ತು ತೆರಿಗೆ ಎರಡೂ ಸಮಸ್ಯೆಗೆ ಕೇಂದ್ರದ ಹಣಕಾಸು ಸಚಿವರ ಗಮನಕ್ಕೆ ತಂದು ತೆರಿಗೆ ರದ್ದುಗೊಳಿಸಿದ್ದು, ಮಾರುಕಟ್ಟೆಯಲ್ಲಿ ದರ ಚೇತರಿಕೆಗೆ ಕೈಜೋಡಿಸಿದ್ದಾರೆ’ ಎಂದು ಹೇಳಿದರು.
ಶಾಸಕ ಜಿ.ಡಿ.ಹರೀಶ್ ಗೌಡ ಮಾತನಾಡಿ, ‘ಕ್ಷೇತ್ರದ ಮತದಾರರು 2023ರ ಚುನಾವಣೆಯಲ್ಲಿ ಯುವ ರಾಜಕಾರಣಿಗೆ ಮಣೆ ಹಾಕಿ ಶಾಸಕರನ್ನಾಗಿ ಆಯ್ಕೆ ಮಾಡಿದ್ದು, ಈ ಗೆಲುವಿನಲ್ಲಿ ಹಿರಿಕ್ಯಾತನಹಳ್ಳಿ ಮತದಾರರ ಕೊಡುಗೆ ವಿಶೇಷವಾಗಿದೆ’ ಎಂದರು.
‘ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದಲ್ಲಿ ಅನುದಾನವಿಲ್ಲವಾಗಿದೆ, ತಾಲ್ಲೂಕಿನಲ್ಲಿ ಅಭಿವೃದ್ಧಿ ಕುರಿತು ಮತದಾರರು ಪ್ರಶ್ನಿಸುತ್ತಾರೆ, ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಅನುದಾನ ಕಾಯ್ದಿಟ್ಟಿದೆ. ರಾಜ್ಯದ ರಾಜಧಾನಿ ರಸ್ತೆಗಳು ಗುಂಡಿ ಬಿದ್ದಿದ್ದು ಇನ್ನು ಗ್ರಾಮೀಣ ರಸ್ತೆಗಳನ್ನು ಕೇಳುವವರಾರು’ ಎಂದು ಟೀಕಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಯಜಮಾನ ಜಗದೀಶ್, ಕೆ.ಆರ್.ಪೇಟೆ ಶಾಸಕ ಎಚ್.ಡಿ.ಮಂಜು, ಮಾಜಿ ಶಾಸಕ ಅಶ್ವಿನ್ ಕುಮಾರ್, ಮುಖಂಡ ಪ್ರಸನ್ನ, ಹರವೇ ಶ್ರೀಧರ್, ಸತೀಶ್ ಪಾಪಣ್ಣ, ಗಣೇಶ್ ಕುಮಾರಸ್ವಾಮಿ, ಲೋಹಿತ್, ಚಿಕನ್ ಮಧು, ವೆಂಕಟೇಶ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.