ADVERTISEMENT

ನಿರಂಜನ ಮಠ ಕಸಿದುಕೊಳ್ಳಲು ಬಿಡೆವು: ವೀರಶೈವ ಲಿಂಗಾಯತ ಮಹಾಸಭಾ ನಾಯಕರ ಗುಡುಗು

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2022, 12:38 IST
Last Updated 9 ಅಕ್ಟೋಬರ್ 2022, 12:38 IST
   

ಮೈಸೂರು: ನಗರದಲ್ಲಿರುವ ನಿರಂಜನ ಮಠವಿರುವ ಜಾಗವನ್ನು ‘ವಿವೇಕ ಸ್ಮಾರಕ’ ನಿರ್ಮಾಣಕ್ಕೆ ಬಿಟ್ಟು ಕೊಡುವುದಿಲ್ಲ. ಒಂದಿಂಚು ಜಾಗ ಪಡೆದರೂ ಸಮಸ್ತ ಲಿಂಗಾಯತ ಸಮಾಜದಿಂದ ತೀವ್ರ ಹೋರಾಟ ರೂಪಿಸಲಾಗುವುದು.

– ಇಲ್ಲಿ ಭಾನುವಾರ ನಡೆದ ‘ನಿರಂಜನ ಮಠ ಒಂದು ಅವಲೋಕನ’ ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರು ಸರ್ಕಾರಕ್ಕೆ ನೀಡಿದ ಎಚ್ಚರಿಕೆ ಇದು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ವೀರಶೈವ ಲಿಂಗಾಯತ ಸಂಘ–ಸಂಸ್ಥೆಗಳು ಹಾಗೂ ಬಸವ ಬಳಗಗಳ ಒಕ್ಕೂಟ ಮತ್ತು ನಿರಂಜನ ಮಠ ಸಂರಕ್ಷಣಾ ಸಮಿತಿಯಿಂದ ಕಾರ್ಯಕ್ರಮ ನಡೆಯಿತು.

ADVERTISEMENT

ವಕೀಲ ಗಂಗಾಧರ ಆರ್.ಗುರುಮಠ ಮಾತನಾಡಿ, ‌‘ನಿರಂಜನ ಮಠದ ಜ್ಯೋತಿಯು ರಾಜ್ಯದಾದ್ಯಂತ ರಾಜಕೀಯ ಕಾಡ್ಗಿಚ್ಚಾಗುವ ಸಾಧ್ಯತೆ ಇದೆ. ಸಮಾಜದವರೇ ಮುಖ್ಯಮಂತ್ರಿ ಇದ್ದರೂ, ಅವರಿಗೆ ಮನವಿ ಸಲ್ಲಿಸಿದರೂ‌ ಪ್ರಯೋಜನವಾಗಿಲ್ಲ. ಮಠಾಧಿಪತಿ ಇಲ್ಲದ ಮಠಗಳನ್ನು ನಿರ್ವಹಿಸುವ ಜವಾಬ್ದಾರಿ ವೀರಶೈವ ಲಿಂಗಾಯತ ಮಹಾಸಭಾಕ್ಕಿದೆ’ ಎಂದು ಪ್ರತಿಪಾದಿಸಿದರು.

‘ವಿವೇಕಾನಂದರ ಹೆಸರು ದುರ್ಬಳಕೆ ಮಾಡಿಕೊಂಡು ನಮ್ಮ ಮೇಲೆ ಆಕ್ರಮಣ ನಡೆಸಲಾಗುತ್ತಿದೆ. ದಾರ್ಶನಿಕರು ಭೇಟಿ ಕೊಟ್ಟಾಕ್ಷಣಕ್ಕೆ, ತಂಗಿದ್ದಾಕ್ಷಣಕ್ಕೆ ಆ ಜಾಗ ನಮ್ಮದೆಂದು ಕೇಳಲಾದೀತೇ’ ಎಂದು ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಶಂಕರ ಬಿದರಿ ಆಕ್ರೋಶದಿಂದ ಪ್ರಶ್ನಿಸಿದರು.

‘ಅದ್ಯಾವ ವಿವೇಕರಹಿತ, ವಿವೇಕ ಶೂನ್ಯ ಹಾಗೂ ವಿವೇಕಹೀನ‌ ವ್ಯಕ್ತಿಯಿಂದ ‌ಈ‌ ವಿವಾದ ಉಂಟಾಯಿತೋ‌? ನಿರಂಜನ ಮಠವನ್ನು ಕಿತ್ತುಕೊಳ್ಳುವುದು ವಿವೇಕಾನಂದರಿಗೆ ಮಾಡುವ ಅವಮಾನವೇ ಸರಿ. 46ಸಾವಿರ ಚ.ಅಡಿಯಲ್ಲಿ ಒಂದು ಚ.ಅಡಿ ಜಾಗವನ್ನು ಕಿತ್ತುಕೊಂಡರೂ ಸುಮ್ಮನಿರೆವು. ಬಸವ ಕಲ್ಯಾಣ, ಕೂಡಲಸಂಗಮ ಮತ್ತು ಉಳವಿ ಕ್ಷೇತ್ರದಿಂದ ನಿರಂಜನ ಮಠದವರೆಗೆ ಯಾತ್ರೆ ನಡೆಸಬೇಕಾಗುತ್ತದೆ. ನಮ್ಮ ಪೂಜಾ‌ ಸ್ಥಳದ ತಂಟೆಗೆ ಬಂದರೆ ಸಹಿಸಲಾಗದು’ ಎಂದು ಎಚ್ಚರಿಕೆ ನೀಡಿದರು.

ಮಹಾಸಭಾದ ರಾಷ್ಟ್ರೀಯ ಮಹಾಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ಮಾತನಾಡಿ, ‘ನಿರಂಜನ ಮಠದ ಆಸ್ತಿಗೆ ಯಾವುದೇ ಶಕ್ತಿ ಧಕ್ಕೆ ತರಲಾಗದು. ಈ ಶ್ರದ್ಧಾಕೇಂದ್ರದ ಒಂದಿಚು ಜಾಗವನ್ನೂ ಮುಟ್ಟುವುದಕ್ಕೂ ಬಿಡುವುದಿಲ್ಲ. ಎಂತಹ ಹೋರಾಟಕ್ಕೂ ಸಿದ್ಧವಿದ್ದೇವೆ’ ಎಂದರು.

ಹೊಸಮಠದ ಅಧ್ಯಕ್ಷ ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.