ADVERTISEMENT

ದಶಪಥ: ಪ್ರತ್ಯೇಕ ಟೆಂಡರ್‌ಗೆ ಗಡ್ಕರಿ ಒಪ್ಪಿಗೆ

ಪಟ್ಟಣಗಳ ಪ್ರವೇಶ, ನಿರ್ಗಮನಕ್ಕೆ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2021, 3:52 IST
Last Updated 16 ಡಿಸೆಂಬರ್ 2021, 3:52 IST
ನವದೆಹಲಿಯಲ್ಲಿ ಸಂಸದ ಪ್ರತಾಪ ಸಿಂಹ, ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು
ನವದೆಹಲಿಯಲ್ಲಿ ಸಂಸದ ಪ್ರತಾಪ ಸಿಂಹ, ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು   

ಮೈಸೂರು: ‘ಮೈಸೂರು– ಬೆಂಗಳೂರು ದಶಪಥ ಎಕ್ಸ್‌ಪ್ರೆಸ್‌ ವೇಯ ಆರು ಕಡೆಗಳಲ್ಲಿ ವಾಹನಗಳ ಪ್ರವೇಶ ಮತ್ತು ನಿರ್ಗಮನಕ್ಕೆ ವ್ಯವಸ್ಥೆ ಕಲ್ಪಿಸುವ ಕಾಮಗಾರಿಗೆ ಪ್ರತ್ಯೇಕ ಟೆಂಡರ್‌ ಕರೆಯಲು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಒಪ್ಪಿಗೆ ನೀಡಿದ್ದಾರೆ’ ಎಂದು ಸಂಸದ ಪ್ರತಾಪ ಸಿಂಹ ತಿಳಿಸಿದರು.

‘ದಶಪಥ ಹೆದ್ದಾರಿಯು ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ ಮತ್ತು ಶ್ರೀರಂಗಪಟ್ಟಣ ನಗರಗಳನ್ನು ಸೇರುವ ಐದು ಬೈಪಾಸ್‌ಗಳಿಗೆ ಸರಿಯಾದ ಪ್ರವೇಶ ಮತ್ತು ನಿರ್ಗಮನ ಕಲ್ಪಿಸಲು ಪ್ರತ್ಯೇಕ ಯೋಜನೆಯಡಿ ಟೆಂಡರ್ ಕರೆಯಲು ಸಚಿವರಿಗೆ ಮನವಿ ಮಾಡಲಾಗಿತ್ತು. ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

‘ಬೇಲೂರಿನಿಂದ ಬಿಳಿಕೆರೆವರೆಗಿನ ಹೆದ್ದಾರಿಯಲ್ಲಿ, ಹಾಸನದಿಂದ ಹೊಳೆನರಸೀಪುರದವರೆಗೆ (ಯಡೆಗೌಡನಹಳ್ಳಿ) ಮಾತ್ರ ಚತುಷ್ಪಥ ರಸ್ತೆ ನಿರ್ಮಾಣವಾಗಿದ್ದು, ಬೇಲೂರು-ಹಾಸನ, ಹೊಳೆನರಸೀಪುರ-ಬಿಳಿಕೆರೆ ಮಾರ್ಗವನ್ನೂ ಚತುಷ್ಪಥವಾಗಿಸುವ ಕಾಮಗಾರಿಗೆ ಟೆಂಡರ್ ಕರೆಯಲು ಒಪ್ಪಿಗೆ ನೀಡಿದ್ದಾರೆ’ ಎಂದರು.

ADVERTISEMENT

‘ಚನ್ನರಾಯಪಟ್ಟಣ, ಅರಕಲಗೂಡು, ಶನಿವಾರಸಂತೆ, ಸೋಮವಾರಪೇಟೆ, ಮಡಿಕೇರಿ, ವಿರಾಜಪೇಟೆ ಮೂಲಕ ಮಾಕುಟ್ಟದ ಬಳಿ ಕೇರಳಕ್ಕೆ ಸಂಪರ್ಕ ಕಲ್ಪಿಸುವ 183 ಕಿ.ಮೀ ಹೆದ್ದಾರಿ ನಿರ್ಮಾಣ ಯೋಜನೆಗೆ ಸಚಿವರು ಅಂತಿಮ ಒಪ್ಪಿಗೆ ನೀಡಲು ಸಮ್ಮತಿಸಿದ್ದಾರೆ. ಈ ಮಾರ್ಗಕ್ಕೆ ₹ 1,600 ಕೋಟಿ ವೆಚ್ಚವಾಗಲಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.