ADVERTISEMENT

ಸ್ವಚ್ಛ ಇಂಧನದಿಂದ ಹಲವು ಲಾಭ: ಕೇಂದ್ರ ಸಚಿವ ನಿತಿನ್‌ ಗಡ್ಕರಿ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2022, 15:42 IST
Last Updated 2 ನವೆಂಬರ್ 2022, 15:42 IST
ನಿತಿನ್ ಗಡ್ಕರಿ
ನಿತಿನ್ ಗಡ್ಕರಿ   

ಮೈಸೂರು: ‘ಜಾಗತಿಕ ತಾಪಮಾನ ಏರಿಕೆಯನ್ನು 1.5 ಡಿಗ್ರಿ ಸೆಲ್ಸಿಯಸ್‌ಗೆ ಮಿತಗೊಳಿಸುವ ನೆಟ್‌ ಝೀರೋ ಗುರಿಯನ್ನು ಭಾರತವು 2070ಕ್ಕೆ ತಲುಪಲಿದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರವು ಕ್ರಮ ಕೈಗೊಂಡಿದೆ. ಜೀವಿಸುವುದಕ್ಕೆ, ಕಾರ್ಯನಿರ್ವಹಿಸುವುದಕ್ಕೆ ಅಗತ್ಯವಾದ ಸುಸ್ಥಿರ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ’ ಎಂದು ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಸಚಿವ ಸಚಿವ ನಿತಿನ್‌ ಗಡ್ಕರಿ ಹೇಳಿದರು.

ಇಲ್ಲಿನ ಎನ್‌ಐಇ ವತಿಯಿಂದ ಹೊರವಲಯದ ರೆಸಾರ್ಟ್‌ನಲ್ಲಿ ಸೋಮವಾರದಿಂದ ಆಯೋಜಿಸಿರುವ ‘ಸ್ವಚ್ಛ ಇಂಧನಗಳು– 2022’ ವಿಷಯ ಕುರಿತ ಎರಡು ದಿನಗಳ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ವರ್ಚುಯಲ್‌ ಆಗಿ ಅವರು ಮಾತನಾಡಿದರು.

‘ದೇಶದ ಅಭಿವೃದ್ಧಿಗೆ ಸಾರಿಗೆಯು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಈ ನಡುವೆ, ವೈಯಕ್ತಿಕ ವಾಹನಗಳ ಬಳಕೆಯೂ ಜಾಸ್ತಿಯಾಗುತ್ತಿದೆ. ನಗರೀಕರಣ, ಔದ್ಯೋಗೀಕರಣ ಹಾಗೂ ಕೈಗಾರಿಕೆಗಳ ಅಭಿವೃದ್ಧಿ ಕಾರಣದಿಂದ ವಾಹನಗಳ ಸಂಚಾರ ಜಾಸ್ತಿಯಾಗುತ್ತಿದೆ. ಶೇ 80ರಷ್ಟು ಇಂಧನದ ಅಗತ್ಯವನ್ನು ಪೂರೈಸುವುದಕ್ಕಾಗಿ ವಿದೇಶಗಳ ಮೊರೆ ಹೋಗಬೇಕಾಗಿದೆ. ಡೀಸೆಲ್‌ನಿಂದ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಹೀಗಾಗಿ, ನಮ್ಮ ಸರ್ಕಾರವು ಎಥೆನಾಲ್‌, ಮಿಥೆನಾಲ್‌ ಮೊದಲಾದ ಸ್ವಚ್ಛ ಹಾಗೂ ಪರಿಸರಕ್ಕೆ ಪೂರಕವಾದ ಜೈವಿಕ ಅನಿಲ ಬಳಕೆಗೆ ಪ್ರೋತ್ಸಾಹ ನೀಡುತ್ತಿದೆ’ ಎಂದು ಹೇಳಿದರು.

ADVERTISEMENT

ಸುಸ್ಥಿರ ಅಭಿವೃದ್ಧಿಗೆ:

‘ಭಾರತವು ಸುಸ್ಥಿರ ಅಭಿವೃದ್ಧಿಯ ವಿಷಯದಲ್ಲಿ ದಾಪುಗಾಲಿಡುತ್ತಿದೆ. ಇದೇ ವೇಳೆ, ಸ್ವಚ್ಛ ಇಂಧನದಿಂದ ಪರಿಸರ ರಕ್ಷಣೆಯೂ ಸಾಧ್ಯವಾಗಲಿದೆ. ಸಾಂಪ್ರದಾಯಿಕ ಇಂಧನಗಳ ಮೇಲಿನ ಅವಲಂಬನೆಯನ್ನು ತಗ್ಗಿಸಬಹುದಾಗಿದೆ. ಇದಕ್ಕಾಗಿ ಎಥೆನಾಲ್‌ ಉತ್ಪಾದನೆಗೆ ಸರ್ಕಾರವು ಪ್ರೋತ್ಸಾಹ ನೀಡುತ್ತಿದೆ’ ಎಂದು ತಿಳಿಸಿದರು.

‘ದೇಶದಲ್ಲಿ ಸಕ್ಕರೆ ಉತ್ಪಾದನೆ ಜಾಸ್ತಿ ಇದೆ. 2.80 ಲಕ್ಷ ಟನ್‌ ಅಗತ್ಯವಿದೆ. ಆದರೆ, ಹೋದ ವರ್ಷ ಉತ್ಪಾದನೆಯು 3.60 ಲಕ್ಷ ಟನ್ ಆಗಿತ್ತು. ಈ ವರ್ಷ 40ರಿಂದ 60 ಲಕ್ಷ ಟನ್‌ ಜಾಸ್ತಿಯಾಗುವ ನಿರೀಕ್ಷೆ ಇದೆ. ಅದನ್ನು ಎಥೆನಾಲ್‌ ಆಗಿ ಪರಿವರ್ತಿಸಬೇಕಾಗಿದೆ’ ಎಂದರು.

‘1.50 ಲಕ್ಷ ಎಲೆಕ್ಟ್ರಿಕ್‌ ಬಸ್‌ಗಳಿವೆ. ಇವು ಪರ್ಯಾಯ ಸಾರಿಗೆಯಾಗಿವೆ. ಇದರಿಂದ ಮಿತವ್ಯಯವನ್ನು ಸಾಧಿಸಬಹುದಾಗಿದೆ. ಇ–ಸ್ಕೂಟರ್‌, ಇ–ಬಸ್, ಇ–ಕಾರ್‌ಗಳು ಬಂದಿವೆ. ದೇಶದಲ್ಲಿ 10 ಲಕ್ಷ ಎಲೆಕ್ಟ್ರಿಕ್‌ ಬಸ್‌ಗಳು ಸಂಚರಿಸಬಹುದಾದಷ್ಟು ಅವಕಾಶವಿದೆ. ಸಾರಿಗೆ ಸಂಸ್ಥೆಗಳು ನಷ್ಟ ಅನುಭವಿಸುತ್ತಿರುವುದರಿಂದಾಗಿ, ಎಲೆಕ್ಟ್ರಿಕ್‌ ಬಸ್‌ಗಳು ಸಹಕಾರಿಯಾಗಲಿವೆ. ಎಲೆಕ್ಟ್ರಿಕ್‌ ಲಾರಿ ಹಾಗೂ ಟ್ರ್ಯಾಕ್ಟರ್‌ಗಳು ಕೂಡ ಬರುತ್ತಿರುವುದು ಒಳ್ಳೆಯ ಬೆಳವಣಿಗೆ’ ಎಂದು ಹೇಳಿದರು.

ಮೈಲೇಜ್‌ನಲ್ಲಿ ವ್ಯತ್ಯಾಸವಾಗದು:‘ಎಥೆನಾಲ್‌ ಅನ್ನು ಪೆಟ್ರೋಲ್‌ಗೆ ಪರ್ಯಾಯವಾಗಿ ಬಳಸಬೇಕು. ಇದರಿಂದ ಮೈಲೇಜ್‌ನಲ್ಲೇನೂ ವ್ಯತ್ಯಾಸವಾಗುವುದಿಲ್ಲ. ಅಲ್ಲದೇ, ಪೆಟ್ರೋಲ್‌ಗಾಗಿ ಬೇರೆ ದೇಶಗಳ ಮೇಲಿನ ಅವಲಂಬನೆ ಹಾಗೂ ಆಮದು ಮಾಡಿಕೊಳ್ಳಲು ಬೇಕಾದ ಖರ್ಚನ್ನೂ ಉಳಿಸಬಹುದು’ ಎಂದು ತಿಳಿಸಿದರು.

‘ಪ್ರಧಾನಿ ನರೇಂದ್ರ ಮೋದಿ ಕನಸಾಗಿರುವ ಆತ್ಮನಿರ್ಭರ ಭಾರತಕ್ಕಾಗಿ ಪರ್ಯಾಯ ಇಂಧನ ಬಳಕೆಯ ಮೂಲಕ ಯೋಗದಾನ ನೀಡಬೇಕು. ಈ ನಿಟ್ಟಿನಲ್ಲಿ ಹೊಸ ಆವಿಷ್ಕಾರಗಳನ್ನು ನಡೆಸಬೇಕು. ಹೊಸ ಭಾರತ ನಿರ್ಮಾಣಕ್ಕೆ ಸ್ವಚ್ಛ ಇಂಧನಗಳು ಅವಶ್ಯವಾಗಿವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.