ADVERTISEMENT

ಪ್ರವಾಸಿ ತಾಣಗಳಿಗೆ ನಿರ್ಬಂಧ ಬೇಡ: ವಿವಿಧ ಸಂಘಗಳ ಆಗ್ರಹ

ಆದೇಶ ವಾಪಸ್‌ ಪಡೆಯಲು ವಿವಿಧ ಸಂಘಗಳ ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2020, 5:03 IST
Last Updated 17 ಅಕ್ಟೋಬರ್ 2020, 5:03 IST
ಮೈಸೂರು ದಸರಾ ಹಿನ್ನೆಲೆಯಲ್ಲಿ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ಕೆ.ಆರ್ ವೃತ್ತ (ಪ್ರಜಾವಾಣಿ ಚಿತ್ರ/ ರಂಜು ಪಿ)
ಮೈಸೂರು ದಸರಾ ಹಿನ್ನೆಲೆಯಲ್ಲಿ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ಕೆ.ಆರ್ ವೃತ್ತ (ಪ್ರಜಾವಾಣಿ ಚಿತ್ರ/ ರಂಜು ಪಿ)   

ಮೈಸೂರು: ದಸರಾ ಸಂದರ್ಭದಲ್ಲಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಿಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವ ಜಿಲ್ಲಾಡಳಿತದ ಕ್ರಮಕ್ಕೆ ಮೈಸೂರು ಟ್ರಾವೆಲ್ಸ್ ಅಸೋಸಿಯೇಷನ್, ಹೋಟೆಲ್ ಮಾಲೀಕರ ಸಂಘ, ವಾಹನ ಚಾಲಕರ ಹಾಗೂ ಮಾಲೀಕರ ಸಂಘಗಳು ವಿರೋಧ ವ್ಯಕ್ತಪಡಿಸಿವೆ.

ಈ ನಿರ್ಬಂಧವನ್ನು ತೆರವುಗೊ ಳಿಸಿ, ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಚೇತರಿಕೆಗೆ ಕ್ರಮ ವಹಿಸಬೇಕು ಎಂದು ವಿವಿಧ ಸಂಘಗಳ ಪದಾಧಿಕಾರಿಗಳು ಶುಕ್ರವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಒತ್ತಾಯಿಸಿದರು.

ಮೈಸೂರು ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಮಾತನಾಡಿ, ಲಾಕ್‍ಡೌನ್‍ನಿಂದ ಪ್ರವಾಸೋದ್ಯಮಕ್ಕೆ ಹೊಡೆತ ಬಿದ್ದಿತ್ತು. ದಸರಾ ಅವಧಿಯಲ್ಲಿ ಅಲ್ಪ ಚೇತರಿಕೆಯ ನಿರೀಕ್ಷೆ ಮೂಡಿತ್ತು. ಇದಕ್ಕೆ ಜಿಲ್ಲಾಡಳಿತ ತಣ್ಣೀರೆರಚಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ತಜ್ಞರ ಸಲಹೆ ಪಡೆಯದೆಯೇ ಜಿಲ್ಲಾಡಳಿತ ಏಕಾಏಕಿ ಈ ನಿರ್ಧಾರ ತೆಗೆದುಕೊಂಡಿದೆ. ಇದರಿಂದ ಪ್ರವಾಸೋದ್ಯಮ ನೆಲಕಚ್ಚಲಿದೆ. ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿಈಗಾಗಲೇ 20 ಸಾವಿರ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಂದಿಯ ಕೆಲಸಕ್ಕೆ ಕುತ್ತು ಬರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕೊರೊನಾ ನಿಯಂತ್ರಣಕ್ಕೆ ಸೂಕ್ತ ಮುನ್ನೆಚ್ಚರಿಕೆ ವಹಿಸಿ ಮೈಸೂರಿಗೆ ಪ್ರವಾಸಿಗರನ್ನು ಆಕರ್ಷಿಸಲು ವಿವಿಧ ಕಾರ್ಯಕ್ರಮ ರೂಪಿಸಲಾಗಿತ್ತು. ಇದರಿಂದ ಪ್ರವಾಸಿಗರ ಸಂಖ್ಯೆ ನಿಧಾನವಾಗಿ ಏರಿಕೆಯಾಗಿತ್ತು. ಇಂಥ ಸಮಯದಲ್ಲೇ ನಿರ್ಬಂಧ ಹೇರಿರು ವುದು ಎಷ್ಟು ಸರಿ? ಎಂದರು.

ಮೈಸೂರು ಟ್ರಾವೆಲ್ಸ್ ಅಸೋಸಿಯೇಷನ್ ಗೌರವಾಧ್ಯಕ್ಷ ಪ್ರಶಾಂತ್ ಮಾತನಾಡಿ, ಕೊರೊನಾ ನಿಯಂತ್ರಿಸುವಲ್ಲಿ ಆಗಿರುವ ಲೋಪವನ್ನು ಸರ್ಕಾರ ಪ್ರವಾಸೋದ್ಯಮ ಕ್ಷೇತ್ರದ ಮೇಲೆ ಹೇರಲು ಹೊರಟಿದೆ ಎಂದು ದೂರಿದರು.

ಜಿಲ್ಲೆಯ ಹೋಟೆಲ್‌, ಲಾಡ್ಜ್‌ ಮಾಲೀಕರು ಮತ್ತು ಟ್ಯಾಕ್ಸಿ ಚಾಲಕರು ಹಾಗೂ ಮಾಲೀಕರು ಪ್ರವಾಸೋ ದ್ಯಮವನ್ನೇ ಅವ ಲಂಬಿಸಿದ್ದಾರೆ. ಲಾಕ್‌ಡೌನ್‌ ತೆರವಾಗಿ 2–3 ತಿಂಗಳ ಬಳಿಕ ಪ್ರವಾಸೋದ್ಯಮ ಅಲ್ಪ ಚೇತರಿಕೆ ಕಂಡಿತ್ತು. ಇದೀಗ ಮತ್ತೆ ನಿರ್ಬಂಧ ವಿಧಿಸಿರುವುದರಿಂದ ಪ್ರವಾಸಿಗರು ಬರುವುದಿಲ್ಲ. ಹಾಗಾದರೆ ನಾವು ಜೀವನ ನಡೆಸುವುದು ಹೇಗೆ? ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.