ADVERTISEMENT

ಪ್ರಧಾನಿ ಮೋದಿಗೆ ನೆರೆ ಸಂತ್ರಸ್ತರ ಬಗ್ಗೆ ಕಾಳಜಿಯಿಲ್ಲ; ಸೌಮ್ಯಾರೆಡ್ಡಿ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2019, 12:07 IST
Last Updated 20 ನವೆಂಬರ್ 2019, 12:07 IST
   

ಮೈಸೂರು: ‘ಕರ್ನಾಟಕದ ನೆರೆ ಸಂತ್ರಸ್ತರ ಬಗ್ಗೆ ಪ್ರಧಾನಿ ಮೋದಿಗೆ ಕಿಂಚಿತ್ ಕಾಳಜಿಯಿಲ್ಲ. ಸಹಸ್ರ, ಸಹಸ್ರ ಕೋಟಿ ನಷ್ಟ ಉಂಟಾಗಿದ್ದರೂ; ಕೇಂದ್ರದಿಂದ ಕೇವಲ ₹ 1200 ಕೋಟಿ ಪರಿಹಾರ ಬಿಡುಗಡೆ ಮಾಡಿ ಕೈತೊಳೆದುಕೊಂಡರು’ ಎಂದು ಶಾಸಕಿ, ಎಐಸಿಸಿ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಸೌಮ್ಯಾ ರೆಡ್ಡಿ ವಾಗ್ದಾಳಿ ನಡೆಸಿದರು.

‘ರಾಜ್ಯದ ಆಡಳಿತಾರೂಢ ಬಿಜೆಪಿ ಸರ್ಕಾರಕ್ಕೆ ರೈತರ ಬಗ್ಗೆ ಕನಿಷ್ಠ ಕಾಳಜಿಯಿಲ್ಲ. ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದರೂ ಸ್ಪಂದಿಸುತ್ತಿಲ್ಲ. ವಿರೋಧ ಪಕ್ಷದ ಶಾಸಕರ ಕ್ಷೇತ್ರಗಳ ಅನುದಾನ ಕಡಿತಗೊಳಿಸುವಲ್ಲೇ ಮಗ್ನವಾಗಿದೆ’ ಎಂದು ಬುಧವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹರಿಹಾಯ್ದರು.

‘ಸಾರ್ವತ್ರಿಕ ಚುನಾವಣೆ ನಡೆದು ಒಂದೂವರೆ ವರ್ಷದೊಳಗೆ 15 ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆದಿದೆ. ಇದರ ಕಾರಣ ರಾಜ್ಯದ ಜನರಿಗೆ ಗೊತ್ತಿದೆ. ಸುಪ್ರೀಂಕೋರ್ಟ್‌ ಸಹ ಅನರ್ಹರು ಎಂದು ಹೇಳಿದೆ. ಈ ಅನರ್ಹ ಶಾಸಕರಿಗೆ ಮತದಾರರೇ ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ಹೇಳಿದರು.

ADVERTISEMENT

‘ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನುಡಿದಂತೆ ನಡೆದಿದೆ. ಅಭಿವೃದ್ಧಿಯನ್ನೇ ಮಾನದಂಡವನ್ನಾಗಿಸಿಕೊಂಡು ಈ ಉಪಚುನಾವಣೆಯಲ್ಲಿ ಮತ ಯಾಚಿಸಲಿದ್ದೇವೆ’ ಎಂದು ಕಾಂಗ್ರೆಸ್ ಮಹಿಳಾ ರಾಜ್ಯ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವಿಜಯಪುರ ಡಿಸಿಸಿ ಬ್ಯಾಂಕ್ ನಿರ್ದೇಶಕಿ, ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಂಯುಕ್ತಾ ಎಸ್.ಪಾಟೀಲ, ವಕ್ತಾರೆ ಐಶ್ವರ್ಯ ಮಹದೇವ್, ಮೈಸೂರು ನಗರ ಘಟಕದ ಅಧ್ಯಕ್ಷೆ ಪುಷ್ಪಲತಾ ಚಿಕ್ಕಣ್ಣ, ವಕ್ತಾರ ನಿಖಿಲ್ ಕೊಂಡಜ್ಜಿ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.