ADVERTISEMENT

ಅರಸು ಕಲ್ಲಹಳ್ಳಿ ಅರೆಬರೆ ಅಭಿವೃದ್ಧಿ!

ಇಂದು ಅರಸು ಜನ್ಮದಿನ l ಕೊಳೆಯುತ್ತಿದೆ ಅರಸು ಜನ್ಮಶತಮಾನೋತ್ಸವ ಅನುದಾನ

ಕೆ.ನರಸಿಂಹ ಮೂರ್ತಿ
Published 20 ಆಗಸ್ಟ್ 2021, 3:13 IST
Last Updated 20 ಆಗಸ್ಟ್ 2021, 3:13 IST
ಕಲ್ಲಹಳ್ಳಿಯ ದೊಡ್ಡ ಕೆರೆ ಅಭಿವೃದ್ಧಿಗೆ ₹ 38 ಲಕ್ಷ ಖರ್ಚಾಗಿದ್ದರೂ ಅದರ ಕುರುಹೇ ಇಲ್ಲ. ಅಪಾರ ಪ್ರಮಾಣದ ಮಣ್ಣನ್ನೂ ತೆಗೆಯಲಾಗಿದೆ.
ಕಲ್ಲಹಳ್ಳಿಯ ದೊಡ್ಡ ಕೆರೆ ಅಭಿವೃದ್ಧಿಗೆ ₹ 38 ಲಕ್ಷ ಖರ್ಚಾಗಿದ್ದರೂ ಅದರ ಕುರುಹೇ ಇಲ್ಲ. ಅಪಾರ ಪ್ರಮಾಣದ ಮಣ್ಣನ್ನೂ ತೆಗೆಯಲಾಗಿದೆ.   

ಮೈಸೂರು: ನಾಡು ಕಂಡ ವಿಶಿಷ್ಟ ರಾಜಕಾರಣಿ ಡಿ.ದೇವರಾಜ ಅರಸು ಅವರ ಹುಟ್ಟೂರು, ಹುಣಸೂರು ತಾಲ್ಲೂಕಿನ ಕಲ್ಲಹಳ್ಳಿಯ ಸರ್ವಾಂಗೀಣ ಅಭಿವೃದ್ಧಿ ಇನ್ನೂ ಮರೀಚಿಕೆಯಾಗಿದೆ.

ಅರಸು ಜನ್ಮಶಮಾನೋತ್ಸವ ನಿಮಿತ್ತ 2016–17ನೇ ಸಾಲಿನ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ಘೋಷಿಸಿ ಬಿಡುಗಡೆ ಮಾಡಿದ್ದ ₹ 10 ಕೋಟಿ ಅನುದಾನ ಸಮರ್ಪಕವಾಗಿ ಬಳಕೆಯಾಗಿಲ್ಲ. ಅರಸು ಜಯಂತಿಯಂದೇ ಸರ್ಕಾರ ಈ ಗ್ರಾಮವನ್ನು ದತ್ತು ಸ್ವೀಕರಿಸಿತ್ತು.

ಎಷ್ಟು ಅನುದಾನ ಬಳಕೆಯಾಗಿದೆ ಎಂಬ ಲೆಕ್ಕವೂ ಸದ್ಯ ಜಿಲ್ಲಾಡಳಿತದ ಬಳಿ ಇಲ್ಲ. ಗ್ರಾಮದ ಅರೆಬರೆ ಅಭಿವೃದ್ಧಿಯ ನಡುವೆಯೇ ಜಿಲ್ಲಾಡಳಿತ ಮತ್ತೊಮ್ಮೆ ಅರಸು ಜಯಂತಿಗೆ ಸಜ್ಜಾಗಿದೆ.

ADVERTISEMENT

ಕ್ರಿಯಾಯೋಜನೆಯನ್ನು ಜಂಟಿಯಾಗಿ ಜಾರಿಗೊಳಿಸಬೇಕಾದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ನಿರ್ಮಿತಿ ಕೇಂದ್ರ, ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ವಿಭಾಗ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ನಡುವೆ ಸಮನ್ವಯವೂ ಇಲ್ಲದೆ ಎರಡು ವರ್ಷದಿಂದ ಅಭಿವೃದ್ಧಿ ಪ್ರಗತಿ ಪರಿಶೀಲನೆಯೂ ನಡೆದಿಲ್ಲ. ‘ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕ್ರಿಯಾಯೋಜನೆ ರೂಪಿಸಲಾಗಿದೆ’ ಎಂಬ ಅಸಮಾಧಾನವೂ ಮುಂದುವರಿದಿದೆ.

ಅರಸು ಅವರ ಮನೆ, ಆವರಣವನ್ನು ಪಾರಂಪರಿಕ ಹಾಗೂ ಸಾಂಸ್ಕೃತಿಕ ಉದ್ಯಾನ ಹಾಗೂ ವಸ್ತು ಸಂಗ್ರಹಾಲಯವನ್ನಾಗಿಸುವ ಕಾರ್ಯ 2 ವರ್ಷದ ಹಿಂದೆ ಆರಂಭವಾಗಿದ್ದು, ಇನ್ನೂ ಪೂರ್ಣಗೊಂಡಿಲ್ಲ. ಪಕ್ಕದಲ್ಲಿರುವ ಅವರ ಮನೆತನದ ಚಂದ್ರಪ್ರಭ ಜೈನರ ಗುಡಿ ಅಭಿವೃದ್ಧಿಯಾಗಿದೆ. ಅಲ್ಲಿ ಅತಿಥಿಗೃಹ ನಿರ್ಮಾಣವಾಗಿಲ್ಲ. ಓಕುಳಿ ಮೈದಾನವೂ ಅಭಿವೃದ್ಧಿ ಕಂಡಿಲ್ಲ.

ಹೆದ್ದಾರಿ ಬಳಿ ಸ್ವಾಗತ ಕಮಾನು ಹಾಗೂ ಬಸ್‌ ನಿಲ್ದಾಣಗಳ ನಿರ್ಮಾಣ ಮುಗಿದಿಲ್ಲ. ಚದುರಂಗರ ಭವನದ ಪುನಶ್ಚೇತನ ಕಾಮಗಾರಿ ಅರ್ಧಕ್ಕೇ ನಿಂತಿದೆ. ಅರಸು ಸಮಾಧಿ ಸ್ಥಳ ಅಭಿವೃದ್ಧಿಗೊಂಡರೂ ನಿರ್ವಹಣೆ ಇಲ್ಲದೆ ಸೊರಗಿದೆ.

ಸ್ವಂತ ಕಟ್ಟಡವಿಲ್ಲದ ಗ್ರಾಮ ಪಂಚಾಯಿತಿಯು ಸದ್ಯ ಅರಸು ಅವರ ಮನೆಯ ಒಂದು ಕಟ್ಟಡದಲ್ಲೇ
ಕಾರ್ಯನಿರ್ವಹಿಸುತ್ತಿದೆ.

₹ 38 ಲಕ್ಷ ವೆಚ್ಚವಾಗಿರುವ ಗ್ರಾಮದ ದೊಡ್ಡಕೆರೆ ಬಳಿ ‘ಅಭಿವೃದ್ಧಿ’ ಕಾಣಿಸುವುದಿ‌ಲ್ಲ. ‘ಪ್ರಜಾವಾಣಿ’ ಭೇಟಿ ನೀಡಿದಾಗ ಕೆರೆಯ ಮೂಲೆಯಲ್ಲಿ ಅಪಾರ ಪ್ರಮಾಣದಲ್ಲಿ ಮಣ್ಣು ತೆಗೆದು ಸಾಗಿಸಿದ್ದು ಕಂಡುಬಂತು.


ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯ ಆರಂಭಿಸಿ ಎರಡು ವರ್ಷವಾಯಿತು. ಇದುವರೆಗೂ ವಿಶೇಷ ಅನುದಾನ ಬಳಕೆ ಸಂಬಂಧ ಸಭೆ ನಡೆದಿಲ್ಲ .

- ಅರುಣ್, ಎಂ. ಪಿಡಿಒ

******

ಗ್ರಾಮಾಭಿವೃದ್ಧಿಯ ಎಲ್ಲ ಕೆಲಸವೂ ಅರ್ಧಂಬರ್ಧವಾಗಿದೆ. ಜಿಲ್ಲಾಡಳಿತವೂ ಗಂಭೀರವಾಗಿ ಪರಿಗಣಿಸಿಲ್ಲ. ಮುಖ್ಯಮಂತ್ರಿ ಗಮನಕ್ಕೆ ತಂದಿರುವೆ.

-ಎಚ್‌.ವಿಶ್ವನಾಥ್‌, ಶಾಸಕ, ಅರಸು ಜನ್ಮಶತಮಾನೋತ್ಸವ ಸಮಿತಿ ಅಧ್ಯಕ್ಷ

*****

ಗ್ರಾಮದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆಯೇ ಕ್ರಿಯಾಯೋಜನೆ ರೂಪಿಸಲಾಗಿದೆ. ಅನುಷ್ಠಾನದಲ್ಲೂ ನಿರ್ಲಕ್ಷ್ಯ ಮಾಡಲಾಗಿದೆ.

- ಕೆ.ಎಸ್‌.ರಾಜಶೇಖರ್‌, ಗ್ರಾಪಂ ಸದಸ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.