ADVERTISEMENT

ಯಾವ ಸರ್ಕಾರವೂ ರೈತಪರ ಇಲ್ಲ: ಬಡಗಲಪುರ ನಾಗೇಂದ್ರ

ಬಳ್ಳೂರು ಗ್ರಾಮದಲ್ಲಿ ನೂತನ ಘಟಕ ಉದ್ಘಾಟಿಸಿದ ಬಡಗಲಪುರ ನಾಗೇಂದ್ರ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2025, 8:02 IST
Last Updated 19 ಡಿಸೆಂಬರ್ 2025, 8:02 IST
ಸಾಲಿಗ್ರಾಮ ತಾಲ್ಲೂಕಿನ ಬಳ್ಳೂರು ಗ್ರಾಮದಲ್ಲಿ ನೂತನ ರೈತ ಸಂಘದ ಘಟಕವನ್ನು ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಗುರುವಾರ ಉದ್ಟಾಟಿಸಿದರು
ಸಾಲಿಗ್ರಾಮ ತಾಲ್ಲೂಕಿನ ಬಳ್ಳೂರು ಗ್ರಾಮದಲ್ಲಿ ನೂತನ ರೈತ ಸಂಘದ ಘಟಕವನ್ನು ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಗುರುವಾರ ಉದ್ಟಾಟಿಸಿದರು   

ಸಾಲಿಗ್ರಾಮ: ‘ಕೇಂದ್ರ ಹಾಗೂ ರಾಜ್ಯದಲ್ಲಿ ಆಳ್ವಿಕೆ ಮಾಡುತ್ತಿರುವ ಬಿಜೆಪಿ, ಕಾಂಗ್ರೆಸ್ ಸರ್ಕಾರಗಳು ಮಾತ್ರವಲ್ಲದೇ ಜೆಡಿಎಸ್ ಪಕ್ಷವೂ ನಾಡಿನ ರೈತರ ಪರವಾಗಿ ನಿಂತಿಲ್ಲ, ಮುಂದೆಯೂ ನಿಲ್ಲುವುದಿಲ್ಲ’ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಬೇಸರ ವ್ಯಕ್ತಪಡಿಸಿದರು.

ತಾಲ್ಲೂಕಿನ ಬಳ್ಳೂರು ಗ್ರಾಮದಲ್ಲಿ ನೂತನ ಘಟಕವನ್ನು ಗುರುವಾರ ಉದ್ಟಾಟಿಸಿ ಮಾತನಾಡಿದ ಅವರು, ‘ಯಾವುದೇ ಒಬ್ಬ ರೈತ ತನ್ನದೇ ಆದ ವ್ಯಕ್ತಿತ್ವ ಮತ್ತು ಸ್ವಾಭಿಮಾನವನ್ನು ಉಳಿಸಿಕೊಳ್ಳಲು ಹೆಗಲ ಮೇಲೆ ಹಸಿರು ಟವಲ್ ಹಾಕಿಕೊಳ್ಳಬೇಕು. ಇದರಿಂದ ಸಂಘಟನೆಯ ಸದಸ್ಯರಿಗೆ ಸರ್ಕಾರಿ ಕಚೇರಿಗಳಲ್ಲಿ, ಸಾರ್ವಜನಿಕ ಸ್ಥಳದಲ್ಲಿ ಮನ್ನಣೆ ಸಿಗುತ್ತದೆ’ ಎಂದರು.

‘ಪ್ರಜಾಪ್ರಭುತ್ವದಲ್ಲಿ ಚುನಾಯಿತ ಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು ರೈತರ ಸೇವಕರು ಆದರೆ ಈಗ ರಾಜಕಾರಣಿಗಳಿಗೆ ಮತ್ತು ಅಧಿಕಾರಿಗಳಿಗೆ ರೈತರೇ ಹೂ ಮಾಲೆ ಹಾಕುವ ಪರಿಯನ್ನು ಮೈಗೂಡಿಸಿಕೊಳ್ಳುತ್ತಿರುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

ADVERTISEMENT

‘ಸಂಘದ ಹೋರಾಟದ ಫಲದಿಂದಾಗಿ ರಾಜ್ಯದಲ್ಲಿ 10 ಲಕ್ಷಕ್ಕೂ ಹೆಚ್ಚು ರೈತರಿಗೆ ಸಾಗುವಳಿ ಪತ್ರ ಕೊಡಿಸಲಾಗಿದೆ. ಇನ್ನು 17 ಲಕ್ಷ ರೈತರು ಅರ್ಜಿ ಕೊಟ್ಟು ಆದೇಶಕ್ಕಾಗಿ ಕಾಯುತ್ತಿದ್ದಾರೆ. ರೈತರ 75 ಲಕ್ಷ ಪಂಪ್‌ಸೆಟ್‌ಗಳ ಪೈಕಿ 50 ಲಕ್ಷ ಪಂಪ್‌ಸೆಟ್‌ಗಳು ಅಧಿಕೃತವಾಗಿವೆ, ಉಳಿದ ಪಂಪ್‌ಸೆಟ್‌ಗಳನ್ನು ಆದಷ್ಟು ಬೇಗ ಅಧಿಕೃತ ಪಟ್ಟಿಗೆ ಸೇರ್ಪಡೆ ಮಾಡಲಾಗುತ್ತದೆ’ ಎಂದು ತಿಳಿಸಿದರು.

ಸಾಲಿಗ್ರಾಮ ರೈತ ಸಂಘದ ಅಧ್ಯಕ್ಷ ಎಸ್.ಬಿ.ಶೇಖರ್, ಬಳ್ಳೂರು ಘಟಕದ ಅಧ್ಯಕ್ಷ ಸುರೇಶ್‌, ಗೌರವಾಧ್ಯಕ್ಷ ದಶರಥ, ರಾಮೇಗೌಡ, ಬಸವಲಿಂಗೇಗೌಡ, ಪ್ರಭಾಕರ್, ಉಪಾಧ್ಯಕ್ಷ ಪ್ರಸನ್ನ, ಕಾರ್ಯದರ್ಶಿ ವಿಜಯಕುಮಾರ್, ಖಜಾಂಚಿ ಕುಮಾರ್, ಸದಸ್ಯರಾದ ರಾಜಶೇಖರ್, ಹರೀಶ್, ರಾಜು, ಮಹೇಶ್, ಬಸವನಾಯಕ, ರಾಜನಾಯಕ, ಮಂಜಾಚಾರಿ ಇದ್ದರು.

‘ರೈತರಲ್ಲದವರು ಜಮೀನು ಖರೀದಿಗೆ ತಡೆ’

ರಾಜ್ಯದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರೈತರು ಅಲ್ಲದೆ ಬೇರೆ ವ್ಯಕ್ತಿಗಳೂ ಜಮೀನು ಖರೀದಿ ಮಾಡಬಹುದು ಎಂದು ಕಾಯ್ದೆ ಜಾರಿಗೆ ತಂದ ಫಲವೇ ಮಾರ್ವಾಡಿಗಳು ರೈತರ ಜಮೀನು ಖರೀದಿ ಮಾಡಿ ನಮ್ಮ ರಾಜ್ಯದ ರೈತರನ್ನೇ ಆಳುತ್ತಿದ್ದಾರೆ ಇದನ್ನು ತಡೆಗಟ್ಟಲು ಸಂಘ ಕಟಿಬದ್ಧವಾಗಿದೆ’ ಎಂದು ಬಡಗಲಪುರ ನಾಗೇಂದ್ರ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.