ADVERTISEMENT

ಎನ್‌ಐಎ ತನಿಖೆಗೆ ಅಭ್ಯಂತರವಿಲ್ಲ: ಸಚಿವ ಎಚ್‌.ಸಿ. ಮಹದೇವಪ್ಪ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 4:18 IST
Last Updated 27 ಡಿಸೆಂಬರ್ 2025, 4:18 IST
ಸ್ಫೋಟದ ತೀವ್ರತೆಯಿಂದ ಗಾಯಗೊಂಡು ಮೈಸೂರಿನ ಕೆ.ಅರ್. ಆಸ್ಪತ್ರೆಗೆ ದಾಖಲಾಗಿರುವವರನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಶುಕ್ರವಾರ ಭೇಟಿಯಾಗಿ ಆರೋಗ್ಯ ವಿಚಾರಿಸಿದರು
ಸ್ಫೋಟದ ತೀವ್ರತೆಯಿಂದ ಗಾಯಗೊಂಡು ಮೈಸೂರಿನ ಕೆ.ಅರ್. ಆಸ್ಪತ್ರೆಗೆ ದಾಖಲಾಗಿರುವವರನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಶುಕ್ರವಾರ ಭೇಟಿಯಾಗಿ ಆರೋಗ್ಯ ವಿಚಾರಿಸಿದರು   

ಮೈಸೂರು: ಅಂಬಾವಿಲಾಸ ಅರಮನೆಯ ಮುಂಭಾಗ ಗುರುವಾರ ರಾತ್ರಿ ಬಲೂನ್‌ಗೆ ಹೀಲಿಯಂ ತುಂಬುವ ಸಿಲಿಂಡರ್‌ ಸ್ಫೋಟದಿಂದ ಗಾಯಗೊಂಡು ಇಲ್ಲಿನ ಕೆ.ಆರ್‌. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಶುಕ್ರವಾರ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.

ಗಾಯಗೊಂಡವರ ಸ್ಥಿತಿಯ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದು, ಕುಟುಂಬದವರಿಗೆ ಧೈರ್ಯ ತುಂಬಿದರು.

ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ‘ಕೆಲವು ಋತುಗಳಲ್ಲಿ ಬಲೂನು ಮಾರಲು ವ್ಯಾಪಾರಿಗಳು ಬರುತ್ತಾರೆ. ಪ್ರವಾಸಿ ತಾಣಗಳಲ್ಲಿ ಹೆಚ್ಚಿನ ನಿಗಾ ವಹಿಸಬೇಕಾಗುತ್ತದೆ. ಸ್ಫೋಟದಂತಹ ಘಟನೆಗಳು ನಡೆದಾಗ ಎನ್‌ಐಎ ಸಹಜವಾಗಿಯೇ ಮಾಹಿತಿ ಪಡೆದುಕೊಳ್ಳುತ್ತದೆ. ಅವರು ತನಿಖೆ ನಡೆಸಲಿ, ನಮ್ಮದೇನೂ ಅಭ್ಯಂತರವಿಲ್ಲ’ ಎಂದರು.

ADVERTISEMENT

‘ಇದು ಅನಿರೀಕ್ಷಿತ ಘಟನೆ. ಹಿಂದೆ ಇಂತಹ ಘಟನೆ ನಡೆದಿರಲಿಲ್ಲ. ಬಲೂನು ಮಾರಿ ಜೀವನೋಪಾಯ ನಡೆಸಲು ಉತ್ತರಪ್ರದೇಶದಿಂದ ಬಂದಿದ್ದ ವ್ಯಕ್ತಿ ಮೃತಪಟ್ಟಿದ್ದು, ‌ಪೌಡರ್‌ ಮಿಶ್ರಣ ಮಾಡಿ ಹೀಲಿಯಂ ಅನ್ನು ಅವರೇ ತಯಾರಿ ಮಾಡಿಕೊಳ್ಳುತ್ತಿದ್ದರು. ಸಿಲಿಂಡರ್‌ ತಾಪ ಹೆಚ್ಚಾಗಿ ಸ್ಫೋಟಗೊಂಡಿದೆ. ಗಾಯಗೊಂಡಿರುವ ನಾಲ್ವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಅವರೆಲ್ಲರೂ ಪ್ರವಾಸಕ್ಕೆ ಬಂದಿದ್ದವರು’ ಎಂದು ತಿಳಿಸಿದರು.

ಸಾವಿರಕ್ಕೂ ಹೆಚ್ಚು ಮಂದಿ ಜೀವನೋಪಾಯಕ್ಕಾಗಿ ಮೈಸೂರಿಗೆ ಬರುವ ಬಗ್ಗೆ ಪೊಲೀಸರು ಪಟ್ಟಿ ಮಾಡಿದ್ದಾರೆ. ಅಪಾಯಕಾರಿ ರಾಸಾಯನಿಕ ವಸ್ತು ಬಳಸಲು ಅವಕಾಶ ಕೊಡುವುದಿಲ್ಲ.
ಡಾ.ಎಚ್‌.ಸಿ. ಮಹದೇವಪ್ಪ, ಜಿಲ್ಲಾ ಉಸ್ತುವಾರಿ ಸಚಿವ

‘ಮೃತ ಸಲೀಂ ಜೊತೆಗೆ ಕುಟುಂಬದ ಇಬ್ಬರು ಬಂದಿದ್ದರು. ಅವರದ್ದೂ ಅದೇ ಕೆಲಸವಾಗಿತ್ತು. ಜನ ಆತಂಕಪಡುವ ಅಗತ್ಯವಿಲ್ಲ. ಗಾಯಗೊಂಡವರ ಚಿಕಿತ್ಸೆಗೆ ಸರ್ಕಾರದಿಂದ ಸಹಕಾರ ನೀಡಲಾಗುವುದು. ಖರ್ಚು–ವೆಚ್ಚ ನೋಡಿಕೊಳ್ಳುತ್ತೇವೆ. ಅಗತ್ಯವಿದ್ದರೆ ಪರಿಹಾರವನ್ನೂ ನೀಡಲಾಗುವುದು. ಸಿಎಂ ಸೂಚನೆ ಮೇರೆಗೆ, ದಾವಣಗೆರೆ ಪ್ರವಾಸ ರದ್ದುಗೊಳಿಸಿ ಇಲ್ಲಿಗೆ ಬಂದೆ’ ಎಂದರು.

ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್‌, ಕೆ.ಆರ್. ಆಸ್ಪತ್ರೆಯ ಡೀನ್‌ ಡಾ.ದಾಕ್ಷಾಯಿಣಿ, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಜೊತೆಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.