ADVERTISEMENT

ಮೈಸೂರು ಘಟಿಕೋತ್ಸವ: ಫಲಿತಾಂಶವೇ ಬಂದಿಲ್ಲ, ದೂರದೂರಿನಿಂದ ಬರಲೂ ಆಗ್ತಿಲ್ಲ

ಅರ್ಜಿ ಸಲ್ಲಿಕೆ ಅವಧಿ ವಿಸ್ತರಿಸುವಂತೆ ವಿದ್ಯಾರ್ಥಿಗಳ ಆಗ್ರಹ

ಡಿ.ಬಿ, ನಾಗರಾಜ
Published 23 ಏಪ್ರಿಲ್ 2021, 5:13 IST
Last Updated 23 ಏಪ್ರಿಲ್ 2021, 5:13 IST
ಶುಲ್ಕ ಪಾವತಿಗಾಗಿಯೇ ಎಸ್‌ಬಿಐ ಶಾಖೆ ಮುಂಭಾಗ ಗುರುವಾರ ಜಮಾಯಿಸಿದ್ದ ವಿದ್ಯಾರ್ಥಿ ಸಮೂಹ
ಶುಲ್ಕ ಪಾವತಿಗಾಗಿಯೇ ಎಸ್‌ಬಿಐ ಶಾಖೆ ಮುಂಭಾಗ ಗುರುವಾರ ಜಮಾಯಿಸಿದ್ದ ವಿದ್ಯಾರ್ಥಿ ಸಮೂಹ   

ಮೈಸೂರು: ‘ಪರೀಕ್ಷೆ ಬರೆದು ತಿಂಗಳುಗಳೇ ಗತಿಸಿವೆ. ಆದರೆ, ನಮ್ಮ ವಿಭಾಗದಲ್ಲಿ ಐದಾರು ವಿದ್ಯಾರ್ಥಿಗಳ ಫಲಿತಾಂಶವೇ ಪ್ರಕಟವಾಗಿಲ್ಲ.’

‘ಘಟಿಕೋತ್ಸವದಲ್ಲಿ ಪದವಿ ಪ್ರಮಾಣ ಪತ್ರ ಪಡೆಯಲಿಕ್ಕಾಗಿ ವಿದ್ಯಾರ್ಥಿಗಳಿಂದ ವಿಶ್ವವಿದ್ಯಾನಿಲಯ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಬೇಕು ಎಂದರೇ ಅಂಕಪಟ್ಟಿ ಲಗತ್ತಿಸಲೇಬೇಕು. ಫಲಿತಾಂಶವೇ ಪ್ರಕಟಗೊಂಡಿಲ್ಲ. ನಾವೇನು ಮಾಡಬೇಕು? ನಿತ್ಯವೂ ಫಲಿತಾಂಶ ಕೇಳಲಿಕ್ಕಾಗಿಯೇ ವಿಭಾಗದ ಮುಖ್ಯಸ್ಥರ ಕಚೇರಿಗೆ ಎಡತಾಕುತ್ತಿದ್ದೇವೆ. ನಮ್ಮ ಅಲೆದಾಟಕ್ಕೆ ಕಿಂಚಿತ್‌ ಪ್ರಯೋಜನ ಸಿಗದಾಗಿದೆ.’

‘ಇದೀಗ ಪದವಿ ಪ್ರಮಾಣ ಪತ್ರ ಪಡೆಯಲಿಕ್ಕಾಗಿ ಅರ್ಜಿ ಸಲ್ಲಿಸುವ ಅವಧಿಯು (ಏ.22ರ ಗುರುವಾರ) ಮುಗಿದಿದೆ. ನಮಗೆ ಪದವಿ ಪ್ರಮಾಣ ಪತ್ರ ಬೇಕು ಎಂದರೇ ಮತ್ತೊಂದು ಘಟಿಕೋತ್ಸವದವರೆಗೂ ಕಾಯಬೇಕಿದೆ. ಅಲ್ಲಿಯವರೆಗೂ ಎಲ್ಲಿಯೂ ಕೆಲಸಕ್ಕೆ ಹೋಗದಂತಹ ಸ್ಥಿತಿ ನಮ್ಮದು. ನಮ್ಮದಲ್ಲದ ತಪ್ಪಿಗೆ ಇಂತಹ ಶಿಕ್ಷೆ ಅನುಭವಿಸಬೇಕಾಗಿದೆ’ ಎಂದು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ವಿವಿಧ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪೂರೈಸಿ ತಿಂಗಳುಗಳು ಗತಿಸಿದರೂ; ಪರೀಕ್ಷಾ ಫಲಿತಾಂಶ ಬಾರದಿರುವುದರಿಂದ ಕಂಗಾಲಾಗಿರುವ ಕೆಲವು ವಿದ್ಯಾರ್ಥಿಗಳು ‘ಪ್ರಜಾವಾಣಿ’ ಬಳಿ ತಮ್ಮ ಅಳಲು ಹೇಳಿಕೊಂಡರು.

ADVERTISEMENT

‘2020ರ ಮೇ/ಜೂನ್‌ ತಿಂಗಳಲ್ಲಿ ನಡೆದ ಪರೀಕ್ಷೆಗಳಲ್ಲಿ ತೇರ್ಗಡೆಯಾದವರು ಪದವಿ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸುವಂತೆ ಏ.1ರಂದು ಆದೇಶ ಹೊರಡಿಸಲಾಗಿದೆ. ಸೆಪ್ಟೆಂಬರ್‌/ಅಕ್ಟೋಬರ್‌ನಲ್ಲಿ ನಡೆದ ಪರೀಕ್ಷೆಯಲ್ಲಿ ಪಾಸಾದವರು ಅರ್ಜಿ ಸಲ್ಲಿಸುವಂತೆ ಏ.17ರಂದು ಆದೇಶ ಹೊರಬಿದ್ದಿದೆ. ಕೊನೆ ದಿನ ಏ.22.’

‘ಏ.6ರಿಂದಲೇ ಸಾರಿಗೆ ನೌಕರರ ಮುಷ್ಕರ ಆರಂಭವಾಯ್ತು. ಬುಧವಾರದವರೆಗೂ (ಏ.21) ಸಹ ಬಸ್‌ಗಳ ಸಂಚಾರ ಸಮರ್ಪಕವಾಗಿರಲಿಲ್ಲ. ಇದರಿಂದ ನಮ್ಮೂರಿನಿಂದ ಮೈಸೂರಿಗೆ ಬಂದು ಅರ್ಜಿ ಸಲ್ಲಿಸಿ, ಶುಲ್ಕ ತುಂಬಲು ಆಗಲಿಲ್ಲ. ನಾವಿದ್ದೆಡೆಯೇ ಆನ್‌ಲೈನ್‌ ಪೇಮೆಂಟ್‌ನಲ್ಲಿ ಶುಲ್ಕ ತುಂಬಲು ಅವಕಾಶವೇ ಇಲ್ಲ. ಕೊನೆಯ ದಿನಗಳಲ್ಲಾದರೂ ಮೈಸೂರಿಗೆ ಬಂದೇ ಶುಲ್ಕ ತುಂಬೋಣ ಅಂದುಕೊಂಡಿದ್ದರೇ; ಕೋವಿಡ್‌–19 ಸಾಂಕ್ರಾಮಿಕ ಪಿಡುಗು ಎಲ್ಲೆಡೆ ಉಲ್ಭಣಿಸಿದೆ.’

‘ಇಂತಹ ಹೊತ್ತಲ್ಲಿ ಪ್ರಯಾಣವೇ ಒಳ್ಳೆಯದಲ್ಲ ಎಂದು ಮನೆಯಲ್ಲೇ ಉಳಿದಿದ್ದೇವೆ. ವಿಶ್ವವಿದ್ಯಾನಿಲಯದ ಪರೀಕ್ಷಾಂಗ ವಿಭಾಗಕ್ಕೆ ಕರೆ ಮಾಡಿದರೂ ಸೂಕ್ತ ಸ್ಪಂದನೆ ಸಿಗ್ತಿಲ್ಲ. ಸಹಾಯವಾಣಿ ಸಂಪರ್ಕಿಸಿದರೂ ಕರೆ ಸ್ವೀಕರಿಸುವವರೇ ಇಲ್ಲ. ನನ್ನಂಥ ದೂರದೂರಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿ.ವಿ.ಯ ಆಡಳಿತ ವರ್ಗ ಕೋವಿಡ್‌ ಪಿಡುಗು ಕ್ಷೀಣಿಸುವವರೆಗೂ ಅರ್ಜಿ ಸಲ್ಲಿಕೆಯ ಅವಧಿ ವಿಸ್ತರಿಸಬೇಕು. ಇಲ್ಲದಿದ್ದರೇ ಆನ್‌ಲೈನ್‌ನಲ್ಲೇ ಅವಕಾಶ ಮಾಡಿಕೊಡಬೇಕು’ ಎನ್ನುತ್ತಾರೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಗ್ರಾಮವೊಂದರ ಹೆಸರು ಬಹಿರಂಗಪಡಿಸಲಿಚ್ಚಿಸದ ಸ್ನಾತಕೋತ್ತರ ಪದವೀಧರ ವಿದ್ಯಾರ್ಥಿ.

‘ಇದು ನನ್ನೊಬ್ಬನ ಸಮಸ್ಯೆಯಲ್ಲ. ನಮ್ಮ ವಿಭಾಗದಲ್ಲೇ ಬಾಗಲಕೋಟೆ, ಹುಬ್ಬಳ್ಳಿ, ಬಳ್ಳಾರಿ, ಮಂಗಳೂರು, ಬೆಂಗಳೂರಿನ ವಿದ್ಯಾರ್ಥಿಗಳಿದ್ದಾರೆ. ಬೇರೆ ಬೇರೆ ಡಿಪಾರ್ಟ್‌ಮೆಂಟ್‌ಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆ ಪ್ರತಿನಿಧಿಸುವ ವಿದ್ಯಾರ್ಥಿಗಳಿದ್ದಾರೆ. ಇವರೆಲ್ಲರ ಅನುಕೂಲಕ್ಕಾಗಿ ವಿಶ್ವವಿದ್ಯಾನಿಲಯ ಅರ್ಜಿ ಸಲ್ಲಿಕೆಯ ಅವಧಿ ವಿಸ್ತರಿಸಬೇಕು’ ಎಂದು ಅವರು ಮನವಿ ಮಾಡಿಕೊಂಡರು.

ಕನಿಷ್ಠ ಅಂತರವೇ ಕಾಣಲಿಲ್ಲ!
ಶುಲ್ಕ ಪಾವತಿಸುವ ಕೊನೆಯ ದಿನವಾದ ಗುರುವಾರ ಮಾನಸಗಂಗೋತ್ರಿಯಲ್ಲಿನ ಹಾಗೂ ಕ್ರಾಫರ್ಡ್‌ ಹಾಲ್‌ ಹಿಂಭಾಗದಲ್ಲಿರುವ ಎಸ್‌ಬಿಐ ಶಾಖೆಯಲ್ಲಿ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.

ಬ್ಯಾಂಕ್‌ಗಳ ಕಾರ್ಯ ನಿರ್ವಹಣೆಯ ವೇಳೆಯೂ ಬದಲಾಗಿದ್ದರಿಂದ ಜನದಟ್ಟಣೆ ಹೆಚ್ಚಿತ್ತು. ಎಲ್ಲರೂ ಮಾಸ್ಕ್‌ ಧರಿಸಿದ್ದರು. ಆದರೆ ತಮ್ಮ ಸರತಿಗಾಗಿ ಸಾಲಿನಲ್ಲಿ ನಿಂತಿದ್ದಾಗ ಕನಿಷ್ಠ ದೈಹಿಕ ಅಂತರ ಕಾಪಾಡಿಕೊಂಡಿರಲಿಲ್ಲ. ಕೆಲವರು ಗುಂಪುಗೂಡಿದ್ದು ಗೋಚರಿಸಿತು.

‘ಶುಲ್ಕ ತುಂಬಲು ಕೊನೆ ದಿನವಾಗಿದ್ದರಿಂದ ಅನಿವಾರ್ಯವಾಗಿ ಗುಂಡ್ಲುಪೇಟೆಯಿಂದ ಮಾನಸಗಂಗೋತ್ರಿಗೆ ಬಂದೆ. ಆದರೆ ಬ್ಯಾಂಕ್‌ ಮುಂದೆ ಕನಿಷ್ಠ ಅಂತರ ಕಾಪಾಡಿಕೊಂಡಿರಲಿಲ್ಲ. ಸರತಿಯಲ್ಲಿ ನಿಲ್ಲದಿದ್ದರೇ ನನ್ನ ಪಾಳಿ ಸಿಗುವುದೇ ಇಲ್ಲ. ಮನೆಯಲ್ಲಿ ವಯಸ್ಸಾದವರು ಇದ್ದಾರೆ. ಸ್ವಲ್ಪ ಹೆಚ್ಚು ಕಡಿಮೆಯಾದರೆ ಯಾರು ಹೊಣೆ’ ಎಂದು ವಿದ್ಯಾರ್ಥಿನಿಯೊಬ್ಬರು ಆತಂಕ ವ್ಯಕ್ತಪಡಿಸಿದರು.

ಶುಲ್ಕ ಪಾವತಿಸಲಾಗದೆ ವಾಪಸ್ಸಾದರು
ಸರತಿಯಲ್ಲಿ ತಾಸುಗಟ್ಟಲೇ ನಿಂತರೂ, ನಮ್ಮಿಂದ ಶುಲ್ಕ ಪಾವತಿಸಿಕೊಳ್ಳಲಿಲ್ಲ ಎಂದು ಬಹುತೇಕ ವಿದ್ಯಾರ್ಥಿಗಳು ದೂರಿದರು.

ಮಧ್ಯಾಹ್ನ 2 ಗಂಟೆಗೆ ಗ್ರಾಹಕರ ಹಣಕಾಸಿನ ಚಟುವಟಿಕೆ ಸ್ಥಗಿತಗೊಳಿಸಬೇಕು ಎಂಬುದು ಸರ್ಕಾರದ ಸೂಚನೆ. ಅದೂ ಕೋವಿಡ್‌–19 ಮಾರ್ಗಸೂಚಿ. ಇದನ್ನು ತಪ್ಪದೇ ಪಾಲಿಸಲೇಬೇಕು ಎಂಬುದು ಬ್ಯಾಂಕ್‌ ಅಧಿಕಾರಿಗಳ ಸಮಜಾಯಿಷಿ.

ಬ್ಯಾಂಕ್‌ ಆವರಣದಲ್ಲಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ನಡುವೆ ಇದೇ ವಿಷಯಕ್ಕೆ ಮಾತಿನ ಚಕಮಕಿಯೂ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.