ಹುಣಸೂರು: ಮಳೆ ನೀರಿನಿಂದ ಮಣ್ಣು ಸವೆತ, ಫಲವತ್ತತೆ ನಷ್ಟ ತಗ್ಗಿಸಲು ನೀರುಗಾಲುವೆ ಮತ್ತು ಇಂಗು ಗುಂಡಿ ನಿರ್ಮಿಸುವ ಯೋಜನೆ ತಾಲ್ಲೂಕಿನ 66 ಗ್ರಾಮಗಳಲ್ಲಿ ಮಹಾತ್ಮಗಾಂಧಿ ನರೇಗಾ ಮೂಲಕ ಅನುಷ್ಠಾನಗೊಳಿಸಿದ್ದು, ರೈತ ಸಮುದಾಯಕ್ಕೆ ವರವಾಗಿದೆ.
ತಾಲ್ಲೂಕಿನ 17 ಪಂಚಾಯಿತಿ ವ್ಯಾಪ್ತಿಯಲ್ಲಿ ಯೋಜನೆಯ ಪ್ರಯೋಜನ ಪಡೆಯುತ್ತಿರುವ ರೈತ, ಈ ಸಾಲಿನ ಮುಂಗಾರಿನಲ್ಲಿ ಮಳೆ ನೀರು ಹಿಡಿದಿಡಲು ನೀರುಗಾಲುವೆ ಮತ್ತು ಹೊಲಗಳ ತಗ್ಗು ಪ್ರದೇಶದಲ್ಲಿ ಇಂಗು ಗುಂಡಿ ನಿರ್ಮಿಸಿ ಹೊಲದಲ್ಲಿ ನೀರು ಇಂಗಿಸಿದ ಪರಿಣಾಮ ಅಂತರ್ಜಲ ವೃದ್ಧಿ, ಕೊಳವೆ ಬಾವಿಗಳಿಗೆ ಮರು ಜೀವ ಸಿಕ್ಕಿದೆ.
ನೀರುಗಾಲುವೆ ನಿರ್ಮಾಣದಿಂದ ಗ್ರಾಮಗಳಿನ 50 ಕೆರೆ ಕಟ್ಟೆಗಳಿಗೆ ಮುಂಗಾರಿನಲ್ಲಿ ನೀರು ತುಂಬಿಸಿದ ತೃಪ್ತಿ ಸಿಕ್ಕಿದೆ ಎಂದು ಮನರೇಗಾ ಯೋಜನೆಯ ತಾಲ್ಲೂಕು ಅಧಿಕಾರಿ ಪುಷ್ಪಾ ತಿಳಿಸಿದರು.
66 ಗ್ರಾಮಗಳಲ್ಲಿ ನೀರುಗಾಲುವೆ ನಿರ್ಮಿಸುವ ಮುನ್ನ 17 ಪಂಚಾಯಿತಿಗಳ ಸ್ಥಳಿಯರೊಂದಿಗೆ ಪ್ರಾಥಮಿಕ ಹಂತದ ಚರ್ಚೆ ನಡೆಸಿ ಸಲಹೆ ಪಡೆದು, ಕಾಮಗಾರಿಗೆ ಯೋಜನೆಯಲ್ಲಿ ನೋಂದಣಿಯಾದ ಕೂಲಿ ಕಾರ್ಮಿಕರನ್ನು ನಿಯೋಜಿಸಿಕೊಂಡಿದ್ದೇವೆ ಎಂದರು. ಈ ಯೋಜನೆ 2024 ರಲ್ಲಿ ಆರಂಭವಾಗಿ ಒಂದು ವರ್ಷದಲ್ಲಿ 84 ಕಿ.ಮೀ. ನೀರುಗಾಲುವೆ ನಿರ್ಮಾಣಗೊಂಡಿದೆ. 25-26 ನೇ ಸಾಲಿನಲ್ಲಿ ಬಹುತೇಕ ಗ್ರಾಮ ಪಂಚಾಯಿತಿ ಮುಂದುವರೆದ ಕಾಮಗಾರಿಯಾಗಿ ಯೋಜನೆ ಮುಂದುವರಿಸಿದ್ದಾರೆ.
ನರೇಗಾ ಯೋಜನೆಯಲ್ಲಿ ತಾಲ್ಲೂಕಿನಲ್ಲಿ 48 ಸಾವಿರ ಗ್ರಾಮಸ್ಥರು ನೋಂದಣಿ ಮಾಡಿಸಿಕೊಂಡಿದ್ದು, ಇವರಿಗೆ ನಿಗದಿಯಂತೆ ದಿನಕ್ಕೆ ₹ 370 ವೇತನ ನೀಡುತ್ತಿದ್ದೇವೆ. ಮಹಿಳಾ ಕಾರ್ಮಿಕರ ಮಗುವಿನ ಶುಶ್ರೂಷೆಗೆ ಕೂಸಿನ ಮನೆ ವ್ಯವಸ್ಥೆ ಇರುವುದರಿಂದ ನೆಮ್ಮದಿಯಿಂದ ಕೆಲಸ ನಿರ್ವಹಿಸಲು ಸಹಕಾರಿ ಆಗಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹೊಂಗಯ್ಯ ಹೇಳಿದರು.
ಗ್ರಾಮಸ್ಥರಿಗೆ ಉದ್ಯೋಗ ಸೃಷ್ಟಿ, ಜಲಸಂರಕ್ಷಣೆ ಮತ್ತು ಮೂಲಸೌಕರ್ಯಾಭಿವೃದ್ಧಿಗೆ ಖಾತ್ರಿ ಸಿಕ್ಕಂತಾಗಿದೆ. ರೈತ ಸಮುದಾಯಕ್ಕೆ ನೀರಿನ ಲಭ್ಯತೆಯನ್ನು ಖಾತ್ರಿ ಪಡಿಸಲು ಈ ಯೋಜನೆ ಸಹಕಾರಿ ಆಗಿದೆ.
ಕೃಷಿ ಇಲಾಖೆ ವತಿಯಿಂದ 2 ಎಕರೆ ತೋಟದಲ್ಲಿ ನೀರುಗಾಲುವೆ ನಿರ್ಮಿಸಿದ್ದರಿಂದ ಮುಂಗಾರಿನಲ್ಲಿ ಹೊಲದ ಮೇಲ್ಬಾಗದಿಂದ ಹರಿಯುವ ನೀರಿನಿಂದ ಮಣ್ಣು ಸವಕಳಿ ನಿಂತು ನೀರು ಇಂಗಿ ತೋಟಕ್ಕೆ ಸಹಾಯವಾಗಿದೆ.ಚಿನ್ನರಾಜು ಹೊಸಕೋಟೆ ಪ್ರಗತಿಪರ ರೈತ
ಮಳೆ ನೀರು ಇಂಗಿಸುವ ದೃಷ್ಟಿಯಿಂದ ಹಳೆ ಬೀಡು ಪಂಚಾಯಿತಿ ವ್ಯಾಪ್ತಿಯಲ್ಲಿ 9 ಕೆರೆಗಳಿಗೆ 13 ನೀರುಗಾಲುವೆಗಳನ್ನು 3 ಕಿ.ಮೀ. ವ್ಯಾಪ್ತಿಯಲ್ಲಿ ನಿರ್ಮಿಸಿ ನೀರು ಸಂಗ್ರಹಿಸಿದ್ದು ಜನ ಮತ್ತು ಜಾನುವಾರುಗಳಿಗೆ ನೀರು ಲಭಿಸಿ ಅಂತರ್ಜಲ ವೃದ್ಧಿಗೆ ಸಹಕಾರಿಯಾಗಿದೆರಾಮಣ್ ಪಿಡಿಒ ಹಳೆಬೀಡು ಪಂಚಾಯಿತಿ
ಕೆರೆ ಭರ್ತಿ ತಾಲ್ಲೂಕಿನಲ್ಲಿ 350 ಕೆರೆಗಳಿದ್ದು ಈ ಕೆರೆಗಳಿಗೆ ನೀರು ತುಂಬಿಸುವಲ್ಲಿ ನೀರುಗಾಲುವೆ ಯೋಜನೆ ಸಹಕಾರಿಯಾಗಿದೆ. ಈವರೆಗೆ 160 ಕೆರೆಗಳ ಹೂಳು ತೆಗೆದು ಜೀರ್ಣೋದ್ಧಾರಗೊಳಿಸಿ ನೀರು ಸಂಗ್ರಹಿಸಿದ್ದೇವೆ. ನೀರುಗಾಲುವೆ ಯೋಜನೆ ಮೂಲಕ ಮಳೆ ನೀರು ವ್ಯರ್ಥವಾಗದಂತೆ ಎಚ್ಚರಿಕೆ ವಹಿಸಿ ಕೆರೆಗಳಿಗೆ ಸಂಪರ್ಕ ಕಲ್ಪಿಸಿ ಹೊಲ ಮತ್ತು ತಗ್ಗು ಪ್ರದೇಶದಿಂದ ನೀರು ತುಂಬಿಸಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹೊಂಗಯ್ಯ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.