ADVERTISEMENT

ಮಕ್ಕಳಿಗೆ ಪೌಷ್ಟಿಕ ಆಹಾರ ಕಿಟ್‌ ವಿತರಿಸಿ: ಪುಷ್ಪಾ ಅಮರನಾಥ್‌ ಆಗ್ರಹ

ಗರ್ಭಿಣಿಯರಿಗೆ ಲಸಿಕೆ, ವಿಶೇಷ ಅಭಿಯಾನ ಕೈಗೊಳ್ಳಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 1 ಜುಲೈ 2021, 13:45 IST
Last Updated 1 ಜುಲೈ 2021, 13:45 IST
ಪುಷ್ಪಾ ಅಮರನಾಥ್
ಪುಷ್ಪಾ ಅಮರನಾಥ್   

ಮೈಸೂರು: ‘ಕೋವಿಡ್ 3ನೇ ಅಲೆಯಿಂದ ಮಕ್ಕಳನ್ನು ರಕ್ಷಿಸಲು ಸರ್ಕಾರ ಕೂಡಲೇ ಬಡಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರ ಕಿಟ್‌ ಅನ್ನು ಉಚಿತವಾಗಿ ವಿತರಿಸಬೇಕು’ ಎಂದು ಕೆಪಿಸಿಸಿ ರಾಜ್ಯ ಮಹಿಳಾ ಘಟಕದ ಅಧ್ಯಕ್ಷರಾದ ಪುಷ್ಪಾ ಅಮರನಾಥ್‌ ಒತ್ತಾಯಿಸಿದರು.

‘ಬಡ ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಇವರ ನೆರವಿಗಾಗಿ ಕೆಪಿಸಿಸಿ ಮಹಿಳಾ ಘಟಕವು ಕಿಟ್ ವಿತರಿಸುತ್ತಿದೆ. ಸರ್ಕಾರ ಕಾರ್ಯಕ್ರಮ ರೂಪಿಸಿ ಮಕ್ಕಳಿಗೆ ಇಂತಹ ಕಿಟ್ ವಿತರಿಸಬೇಕು. ಇದರಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ’ ಎಂದು ಅವರು ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತಜ್ಞರ ಸಲಹೆ ಆಧಾರಿಸಿ ಕೋವಿಡ್ ಲಸಿಕೆಯನ್ನು ಗರ್ಭಿಣಿಯರಿಗೆ ನೀಡುವುದಕ್ಕೆಂದೇ ವಿಶೇಷ ಅಭಿಯಾನ ಕೈಗೊಳ್ಳಬೇಕು. ಸರ್ಕಾರ ಶೀಘ್ರದಲ್ಲಿ ಈ ಕುರಿತು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ADVERTISEMENT

‘ಕೋವಿಡ್ ಲಸಿಕೆ ಪಡೆದವರಿಗೆ ನೀಡಲಾಗುವ ಪ್ರಮಾಣಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಹಾಕಲಾಗಿದೆ. ಈ ಭಾವಚಿತ್ರವನ್ನು ಕೋವಿಡ್‌ನಿಂದ ಮೃತಪಟ್ಟವರ ಸಂಬಂಧಿಕರಿಗೆ ನೀಡಲಾಗುವ ಮರಣ ಪ್ರಮಾಣ ಪತ್ರದಲ್ಲೂ ಹಾಕಬೇಕು’ ಎಂದು ಹೇಳಿದರು.

ಜುಲೈ 1ರಿಂದ ಕಾಂಗ್ರೆಸ್‌ ವತಿಯಿಂದ ‘ಸಾಂತ್ವನ’ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಕೋವಿಡ್‌ನಿಂದ ಮೃತಪಟ್ಟವರ ಮನೆಗಳಿಗೆ ತೆರಳಿ ಸಂಬಂಧಿಕರಿಗೆ ಸಾಂತ್ವನ ಹೇಳಲಾಗುತ್ತದೆ. ಜತೆಗೆ, ಇವರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಲಾಗುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.