ADVERTISEMENT

‘ಓಎಲ್ಎಕ್ಸ್‌’ನಲ್ಲಿ ವಂಚನೆ; ದೂರು ದಾಖಲು

ಬಸ್‌ನಲ್ಲಿ ಮುಂದುವರಿದ ಕಳ್ಳತನ, ಭೂಗಳ್ಳರಿಗೆ ಬಿಸಿ ಮುಟ್ಟಿಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 30 ಜುಲೈ 2019, 19:33 IST
Last Updated 30 ಜುಲೈ 2019, 19:33 IST

ಮೈಸೂರು: ‘ಓಎಲ್‌ಎಕ್ಸ್‌’ ವೆಬ್‌ಸೈಟ್‌ನಲ್ಲಿ ಕಡಿಮೆ ಬೆಲೆಗೆ ಸ್ಕೂಟರ್‌ ಮಾರಾಟ ಮಾಡುವುದಾಗಿ ನಂಬಿಸಿದ ವ್ಯಕ್ತಿಯೊಬ್ಬ ಸೋಮನಾಥನಗರದ ಮಹಿಳೆಯೊಬ್ಬರಿಂದ ₹ 42,250 ಹಣ ಪಡೆದು ವಂಚಿಸಿದ್ದಾನೆ.

ಪ್ರವೀಣ್‌ ಅಗರ್‌ವಾಲ್ ಎಂಬ ವ್ಯಕ್ತಿಯು ಮಿಲಿಟರಿಯಲ್ಲಿ ಕೆಲಸ ಮಾಡುತ್ತಿದ್ದು, ಬೆಂಗಳೂರಿನಿಂದ ಕಾಶ್ಮೀರಕ್ಕೆ ವರ್ಗಾವಣೆಯಾಗಿದೆ ಎಂದು ಮೊದಲಿಗೆ ನಂಬಿಸಿದ್ದಾನೆ. ಹೊಸದಾಗಿ ತೆಗೆದುಕೊಂಡ ‘ಜ್ಯುಪಿಟರ್‌’ ಕಂಪನಿಯ ಸ್ಕೂಟರ್‌ನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವುದಾಗಿ ಹೇಳಿದ್ದಾನೆ. ಇದನ್ನು ನಂಬಿದ ಮಹಿಳೆಯು ಆತ ನೀಡಿದ ಖಾತೆಗೆ ₹ 42,250 ಹಣವನ್ನು ಜಮಾ ಮಾಡಿದ್ದಾರೆ. ಬಳಿಕ ಸ್ಕೂಟರ್‌ನ ನೋಂದಣಿ ಸಂಖ್ಯೆಯನ್ನು ಪರಿಶೀಲಿಸಿದಾಗ ಅದು ಕರುಣಕರರೆಡ್ಡಿ ಎಂಬುವವರ ಹೆಸರಿನಲ್ಲಿ ನೋಂದಣಿಯಾಗಿರುವುದು ಗೊತ್ತಾಗಿದೆ. ಈ ಕುರಿತು ಸೈಬರ್, ಆರ್ಥಿಕ ಮತ್ತು ಮಾದಕದ್ರವ್ಯ ಅಪರಾಧಗಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆನ್‌ಲೈನ್‌ನಲ್ಲಿ ಖರೀದಿಸುವ ವಸ್ತುಗಳ ಪೂರ್ಣ ಮಾಹಿತಿ ತಿಳಿದುಕೊಳ್ಳಬೇಕು. ಹಣದ ಮರುಪಾವತಿಯ ನಿಯಮಗಳನ್ನು ಸರಿಯಾಗಿ ತಿಳಿದುಕೊಂಡು ವ್ಯವಹಾರ ಮಾಡಬೇಕು ಹಾಗೂ ಯಾವುದೇ ಕಾರಣಕ್ಕೂ ಮುಂಗಡ ಹಣ ನೀಡಬಾರದು ಎಂದು ಜಿಲ್ಲಾ ಸೈಬರ್ ಅಪರಾಧ, ಆರ್ಥಿಕ ಅಪರಾಧಗಳು ಮತ್ತು ಮಾದಕ ವಸ್ತು ನಿಯಂತ್ರಣ ವಿಶೇಷ ಠಾಣೆ ಇನ್‌ಸ್ಪೆಕ್ಟರ್ ಪ್ರಕಾಶ್ ಸಲಹೆ ನೀಡಿದ್ದಾರೆ.

ADVERTISEMENT

ಭೂಗಳ್ಳರಿಗೆ ಬಿಸಿ ಮುಟ್ಟಿಸಿದ ಪೊಲೀಸರು
ಮೈಸೂರು:
‘ಫ್ಲಾಟ್‌’ ಕೊಡುವುದಾಗಿ ಲಕ್ಷಾಂತರ ರೂಪಾಯಿ ವಂಚಿಸಿದ ರಿಯಲ್‌ ಎಸ್ಟೇಟ್‌ ಉದ್ಯಮಿಯೊಬ್ಬರನ್ನು ನಗರದ ವಿ.ವಿ.ಪುರಂ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

‘ಪಾತಕ್ ಡೆವಲಪರ್ಸ್’ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀಹರಿ ಪಾತಕ್ ಬಂಧಿತ ವ್ಯಕ್ತಿ. ಇವರ ವಿರುದ್ಧ ವಂಚನೆ ಪ್ರಕರಣ ದಾಖಲಾಗಿತ್ತು.

ಟಿ.ವಿ.ರಾಜು ಎಂಬುವವರ ಪತ್ನಿ ಕೆ.ಆರ್.ಜನ್ನಾಂಬಿಕಾ ಎಂಬುವವರಿಂದ ₹ 28 ಲಕ್ಷ ಪಡೆದು ಹೆಬ್ಬಾಳು ಸಮೀಪ ನೂತನವಾಗಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ನಲ್ಲಿ ‘ಫ್ಲಾಟ್‌’ ನೀಡುವುದಾಗಿ ಒಪ್ಪಂದ ಮಾಡಿಕೊಂಡಿದ್ದರು. ಆದರೆ, ‘ಫ್ಲಾಟ್‌’ನ್ನು ಬೇರೆಯವರಿಗೆ ಮಾರಾಟ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮನೆಯ ಬೀಗ ಒಡೆದು ಕಳವು
ಮೈಸೂರು:
ಇಲ್ಲಿನ ಕೆಸರೆಯ 3ನೇ ಹಂತದಲ್ಲಿನ ನಿವಾಸಿ ಮಿಸ್ಟಾ ಉಮ್ಮೆ ಕುಲಮ್ ಎಂಬುವವರ ಮನೆಯ ಡೋರ್‌ಲಾಕ್‌ನ್ನು ಒಡೆದು ಒಳ ನುಗ್ಗಿರುವ ಕಳ್ಳರು ₹ 10 ಲಕ್ಷ ಮೌಲ್ಯದ ನಗದು 330 ಗ್ರಾಂ ತೂಕದ ಚಿನ್ನಾಭರಣಗಳನ್ನು ದೋಚಿದ್ದಾರೆ.

ಇವರು ಜುಲೈ 27ರಂದು ಸಂಬಂಧಿಕರ ಮದುವೆಗೆಂದು ಬೆಂಗಳೂರಿಗೆ ಹೋಗಿದ್ದರು. 28ರಂದು ರಾತ್ರಿ ವಾಪಸ್ ಮನೆಗೆ ಬಂದಿದ್ದಾರೆ. ಅಷ್ಟರಲ್ಲಿ ಡೋರ್‌ಲಾಕ್‌ ಮುರಿದು ಕಳ್ಳರು ಕಳವು ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಎನ್.ಆರ್.ಠಾಣೆಯಲ್ಲಿ ದಾಖಲಾಗಿದೆ.

ಬೀಗ ಹಾಕಿ ಊರಿಗೆ ಹೋಗುವಾಗ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು, ‘ಹ್ಯಾಂಗಿಂಗ್ ಲಾಕ್’ ಹಾಕಬಾರದು, ಮನೆಯ ಮುಂದೆ ದಿನಪತ್ರಿಕೆ ಹಾಗೂ ಹಾಲಿನ ಪ್ಯಾಕೆಟ್‌ ಬಿದ್ದಿರದಂತೆ ನೋಡಿಕೊಳ್ಳಬೇಕು. ಇಷ್ಟು ಮಾಡಿದರೆ ಮನೆಯಲ್ಲಿ ಯಾರೂ ಇಲ್ಲ ಎಂಬುದು ಕಳ್ಳರಿಗೆ ತಿಳಿಯುವುದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಸಾಲಬಾಧೆ; ರೈತ ಆತ್ಮಹತ್ಯೆ
ಮೈಸೂರು
: ಸಾಲ ಬಾಧೆಯಿಂದ ಮನನೊಂದ ರೈತ ಕೆ.ಎನ್.ಹುಂಡಿ ನಿವಾಸಿ ಶಿವಣ್ಣ (32) ಗ್ರಾಮದ ರಸ್ತೆ ಬದಿಯ ಮರವೊಂದಕ್ಕೆ ಸೋಮವಾರ ರಾತ್ರಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವ್ಯವಸಾಯಕ್ಕಾಗಿ ಸಾಕಷ್ಟು ಕೈಸಾಲ ಮಾಡಿಕೊಂಡಿದ್ದರು. ಸಾಲಗಾರರ ಒತ್ತಡ ಹೆಚ್ಚಾದಾಗ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಮೈಸೂರು ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ.

ಗಾಂಜಾ ಸಾಗಣೆ; ಇಬ್ಬರ ಬಂಧನ
ಮೈಸೂರು:
ಇಲ್ಲಿನ ಮೈಸೂರು– ನಂಜನಗೂಡು ರಸ್ತೆಯಲ್ಲಿ ಬೈಕ್‌ನಲ್ಲಿ ಗಾಂಜಾ ಸಾಗಿಸುತ್ತಿದ್ದ ದೇಬೂರು ಗ್ರಾಮದ ಮಹೇಶ್ ಮತ್ತು ಅರುಣ್ ಎಂಬುವವರನ್ನು ಬಂಧಿಸಿ, 60 ಗ್ರಾಂನಷ್ಟು ತೂಕದ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಾಹನ ತಪಾಸಣೆ ವೇಳೆ ಇವರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಮೈಸೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಸ್‌ನಲ್ಲಿ ಮತ್ತೆ ಕಳವು
ಮೈಸೂರು:
ಪುಟ್ಟನಿಂಗಮ್ಮ (68) ಎಂಬ ಮಹಿಳೆಯಿಂದ ಬಸ್‌ನಲ್ಲಿ 30 ಗ್ರಾಂ ತೂಕದ ಚಿನ್ನದ ಸರವನ್ನು ಕಳ್ಳರು ಕಳವು ಮಾಡಿದ್ದಾರೆ.

ಇವರು ಚಾಮುಂಡಿಬೆಟ್ಟದಿಂದ ನಗರ ಬಸ್‌ನಿಲ್ದಾಣಕ್ಕೆ ಬರುವಾಗ ಕಳ್ಳರು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದೇವರಾಜ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.