ಮೈಸೂರು: 'ಕರ್ನಾಟಕದ ಮಣ್ಣಿನಲ್ಲಿ ತರಬೇತಿ ಪಡೆದು ನಾನು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಫೈನಲ್ ಪ್ರವೇಶಿಸಿದ್ದೆ. ಇಲ್ಲಿನ ಅಕಾಡೆಮಿಗಳಲ್ಲಿ ಜಾಗತಿಕ ಮಟ್ಟದ ತರಬೇತಿ ಸಿಗುತ್ತಿದ್ದು, ದೇಶದಲ್ಲೇ ಮಾದರಿ ಆಗಿವೆ' ಎಂದು ಒಲಿಂಪಿಯನ್ ಕುಸ್ತಿಪಟು ವಿನೇಶಾ ಫೋಗಟ್ ಬಣ್ಣಿಸಿದರು.
ಇಲ್ಲಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಸೋಮವಾರ ' ಸಿ.ಎಂ. ಕಪ್- 2025' ರಾಜ್ಯ ಮಟ್ಟದ ದಸರಾ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
'ಮೈದಾನಕ್ಕೆ ಇಳಿಯಲು ಯಾವ ಕಾರಣಕ್ಕೂ ಹೆದರದಿರಿ. ನಿಮ್ಮ ಬೆನ್ನ ಹಿಂದೆ ನಾವು ನಿಲ್ಲುತ್ತೇವೆ. ಪರಿಶ್ರಮದ ಜೊತೆಗೆ ಸ್ಮಾರ್ಟ್ ವರ್ಕ್ ಸಹ ಅಗತ್ಯ. ಇಂದು ಕ್ರೀಡಾ ವಿಜ್ಞಾನ ಪ್ರಾಮುಖ್ಯ ಪಡೆಯುತ್ತಿದೆ. ಅದರ ಉಪಯೋಗ ಪಡೆಯಿರಿ. ಭಾರತದ ತ್ರಿವರ್ಣ ಧ್ವಜ ಹಾರಿಸಿ' ಎಂದು ಕ್ರೀಡಾಪಟುಗಳಿಗೆ ಸ್ಪೂರ್ತಿ ತುಂಬಿದರು.
'ಕರ್ನಾಟಕಕ್ಕೆ ಬಂದಿರುವುದಕ್ಕೆ, ಸನ್ಮಾನ ಸ್ವೀಕರಿಸುವುದಕ್ಕೆ ಹೆಮ್ಮೆ ಎನಿಸುತ್ತಿದೆ. ಪರಿಶ್ರಮ ಇದ್ದರೆ ಮುಂದಿನ ಒಲಿಂಪಿಕ್ ನಲ್ಲಿ ನೀವು ಸ್ಪರ್ಧಿ ಆಗಬಲ್ಲಿರಿ. ಪ್ರತಿ ವರ್ಷ ಇಲ್ಲಿಗೆ ಬಂದು ನಿಮಗೆ ತರಬೇತಿ ನೀಡಲು ನಾನು ಸಿದ್ದ' ಎಂದರು.
'ಈ ಮಕ್ಕಳ ಕನಸು ಸಾಕಾರಗೊಳಿಸುವುದು ಸರ್ಕಾರಗಳ ಜವಾಬ್ದಾರಿ. ಸೋತಾಗ ಬೆನ್ನು ತಟ್ಟಿ. ಆಗ ಕರ್ನಾಟಕದ ಹೆಸರು ಇನ್ನಷ್ಟು ಮೇಲೇರುತ್ತದೆ' ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ಇದೇ ವೇಳೆ ವಿನೇಶಾ ಫೋಗಟ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸನ್ಮಾನಿಸಿ, ಸರ್ಕಾರದಿಂದ 5 ಲಕ್ಷ ನಗದು ನೀಡಿದರು.
ಈ ಸಂದರ್ಭ ಮಾತನಾಡಿದ ಸಿದ್ದರಾಮಯ್ಯ, '2028ರ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ರಾಜ್ಯದ 60 ಕ್ರೀಡಾಪಟುಗಳ ತರಬೇತಿಗೆ ತಲಾ 10 ಲಕ್ಷ ರೂಪಾಯಿ ನೀಡಲಾಗುವುದು. ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದರೆ 6 ಕೋಟಿ ರೂಪಾಯಿ ಮೊತ್ತದ ಬಹುಮಾನ ನೀಡಲಾಗುವುದು' ಎಂದು ಘೋಷಿಸಿದರು.
'ಕ್ರೀಡಾಪಟುಗಳಿಗೆ ರಾಜ್ಯದ ಎಲ್ಲ ಇಲಾಖೆಯಲ್ಲಿ ಶೇ 2 ರಷ್ಟು ಮೀಸಲಾತಿ ಹಾಗೂ ಪೊಲೀಸ್ ಇಲಾಖೆಯಲ್ಲಿ ಶೇ 2-3 ಮೀಸಲಾತಿ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಕ್ರೀಡೆ ಹಾಗೂ ಶಿಕ್ಷಣ ಎರಡರಲ್ಲೂ ಉತ್ತಮ ತರಬೇತಿ ಪಡೆಯಬೇಕು' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.