ಹಂಪಾಪುರ ಹೊರವಲಯದ ಪಡುಕೋಟೆ ಗ್ರಾಮದಲ್ಲಿ ಕೇರಳ ಸಮುದಾಯದವರು ಹೂವಿನ ರಂಗೋಲಿ ಬಿಡಿಸುವುದರ ಮೂಲಕ ಓಣಂ ಆಚರಿಸಿದರು.
ಚಿತ್ರ: ರವಿಕುಮಾರ್
ಎಚ್.ಡಿ. ಕೋಟೆ/ಹಂಪಾಪುರ: ‘ಕೇರಳೀಯರು (ಕೇರಳ ಭಾಗದವರು) ಅಲ್ಲಿಯ ನಾಡ ಹಬ್ಬ ಓಣಂ ಅನ್ನು 10 ದಿನ ಆಚರಿಸುತ್ತೇವೆ. ಪ್ರತಿ ದಿನ ವೈಶಿಷ್ಟ್ಯಗಳೊಂದಿಗೆ ಆಚರಣೆಯನ್ನು ಮಾಡಲಾಗುತ್ತಿದೆ’ ಎಂದು ಇಲ್ಲಿಯ ಕೇರಳ ಸಮಾಜದ ಅಧ್ಯಕ್ಷ ಮನೋಜ್ ತಿಳಿಸಿದರು.
ಪಟ್ಟಣದ ಕೇರಳ ನಿವಾಸಿಗಳು ವಾಸಿಸುವ ಬೀದಿಯಲ್ಲಿ ಓಣಂ ಅಚರಣೆ ಸಂದರ್ಭ ಅವರು ಮಾತನಾಡಿದರು. ನಮ್ಮ ಹಬ್ಬದಲ್ಲಿ ವಿಶೇಷವಾಗಿ ಹೂವುಗಳಿಂದ ರಂಗೋಲಿ ಬಿಡಿಸುವ ಸಂಪ್ರದಾಯವಿದ್ದು, ಕೇರಳಿಗರು ವಾಸಿಸುವ ಮನೆಗಳ ಮುಂದೆ ವಿವಿಧ ಹೂವುಗಳ ರಂಗೋಲಿಯನ್ನು ಅಂದವಾಗಿ ಬಿಡಿಸಲಾಗಿದೆ ಎಂದರು.
‘25 ಕ್ಕಿಂತ ಹೆಚ್ಚು ಬಗೆಯ ಸಸ್ಯಹಾರಿ ಖಾದ್ಯಗಳನ್ನು ಒಳಗೊಂಡಿರುವ ದೊಡ್ಡ ಔತಣ ಏರ್ಪಡಿಸಲಾಗಿದ್ದು , ನೆರೆಹೊರೆಯವರನ್ನು ಕರೆದು ಬಾಳೆ ಎಲೆಯ ಮೇಲೆ ಊಟ ಬಡಿಸಿ, ನಮ್ಮ ಸಂಸ್ಕೃತಿಯನ್ನು ಉಳಿಸುತ್ತಿದ್ದೇವೆ’ ಎಂದರು.
ಹಂಪಾಪುರ ಹೊರವಲಯದ ಪಡುಕೋಟೆ ಗ್ರಾಮದ ಸಜೀವನ್ ಮಾತನಾಡಿ, ಕುಟುಂಬ ಸದಸ್ಯರು ಒಟ್ಟಾಗಿ ಹಬ್ಬವನ್ನು ಆಚರಿಸುತ್ತೇವೆ. ಕೇರಳದ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಬಿಂಬಿಸುವ ಒಂದು ಸುಂದರ ಹಬ್ಬವಾಗಿದ್ದು , ನೆರೆಹೊರೆಯವರೊಂದಿಗೆ ಆಚರಿಸುತ್ತೇವೆ’ ಎಂದರು. ಎಚ್.ಡಿ. ಕೋಟೆ ತಾಲ್ಲೂಕಿನಲ್ಲಿ ಓಣಂ ಆಚರಣೆಗೆ ಸ್ಥಳೀಯರು ಪ್ರೋತ್ಸಾಹವನ್ನು ನೀಡುತ್ತಾರೆ, ಎಲ್ಲರೂ ಸೇರಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತೇವೆ ಎಂದು ಸಂತಸ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.